ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹೊತ್ತಲ್ಲೇ ಭದ್ರತಾ ಲೋಪದ ಆತಂಕವೊಂದು ಎದುರಾಗಿದೆ. ಪ್ರಧಾನಿ ಸಂಚರಿಸಬೇಕಿದ್ದ ಮಾರ್ಗದ ಸಮೀಪದಲ್ಲೇ ಸ್ಫೋಟಕಗಳು ಪತ್ತೆಯಾಗಿರುವುದು ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಬೆನ್ನಲ್ಲೇ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೆರೆ ಬಳಿಯ ಕಸದ ರಾಶಿಯಲ್ಲಿತ್ತು ಮೃತ್ಯುಂಜಯ
ಬೆಂಗಳೂರು ಹೊರವಲಯದ ಕಗ್ಗಲೀಪುರ ಮುಖ್ಯರಸ್ತೆಯ ತಾತಗುಣಿ ಅಗರ ಕೆರೆ ಬಳಿ ಈ ಘಟನೆ ನಡೆದಿದೆ. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾನೆಯಿಂದಲೇ ಮಾರ್ಗದುದ್ದಕ್ಕೂ ತಪಾಸಣೆ ನಡೆಸುತ್ತಿದ್ದರು. ಬೆಳಿಗ್ಗೆ ಸುಮಾರು 10:30ರ ಹೊತ್ತಿಗೆ ASC (Anti-Sabotage Check) ತಂಡವು ಸೇತುವೆ ಬಳಿ ಪರಿಶೀಲನೆ ನಡೆಸುತ್ತಿದ್ದಾಗ, ರಸ್ತೆಯಿಂದ ಕೇವಲ 50 ಮೀಟರ್ ದೂರದಲ್ಲಿ ಕಸದ ರಾಶಿಯ ನಡುವೆ ಎರಡು ಜಿಲೆಟಿನ್ ಕಡ್ಡಿಗಳು ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಬಾಂಬ್ ಪತ್ತೆ ದಳ ಸ್ಥಳಕ್ಕೆ ಆಗಮಿಸಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದೆ.
ಕೋರಮಂಗಲದಲ್ಲಿ ಬೆದರಿಕೆ ಹಾಕಿದ್ದ 'ಆಸಾಮಿ' ವಶಕ್ಕೆ
ಇತ್ತ ನಗರದ ಒಳಗೆ ಪ್ರಧಾನಿ ಬರುವ ಮೊದಲೇ ಬೆದರಿಕೆ ಕರೆಗಳ ಹಾವಳಿ ಶುರುವಾಗಿತ್ತು. ಅತಿಗಣ್ಯ ವ್ಯಕ್ತಿಗಳು ಬಂದಾಗಲೆಲ್ಲಾ ಸುಖಾಸುಮ್ಮನೆ ಬೆದರಿಕೆ ಕರೆ ಮಾಡುವ ಹವ್ಯಾಸವಿರುವ ವ್ಯಕ್ತಿಯೊಬ್ಬ ಈ ಬಾರಿಯೂ ಕಿರಿಕ್ ಮಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ (CCB) ಪೊಲೀಸರು ಕೋರಮಂಗಲದ ಮನೆಯಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆತ ಮಾನಸಿಕ ಅಸ್ವಸ್ಥನೋ ಅಥವಾ ಇದರ ಹಿಂದೆ ಬೇರೆ ಏನಾದರೂ ಸಂಚಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಜಿಲೆಟಿನ್ ಮತ್ತು ಕರೆಗೆ ಇದೆಯೇ ಸಂಬಂಧ?
ಪ್ರಸ್ತುತ ಪೊಲೀಸರಿಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ ಅಂದರೆ, ಕಗ್ಗಲೀಪುರದಲ್ಲಿ ಸಿಕ್ಕ ಜಿಲೆಟಿನ್ ಕಡ್ಡಿಗಳಿಗೂ ಮತ್ತು ಕೋರಮಂಗಲದಲ್ಲಿ ಸಿಕ್ಕ ವ್ಯಕ್ತಿಗೂ ಏನಾದರೂ ಸಂಬಂಧ ಇದೆಯೇ ಎನ್ನುವುದು. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಲಯ ಡಿಐಜಿ ಗಿರೀಶ್, "ಎರಡೂ ಪ್ರಕರಣಗಳ ಲಿಂಕ್ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲೆಟಿನ್ ಕಡ್ಡಿಗಳು ಕಲ್ಲು ಕ್ವಾರಿಗಳಲ್ಲಿ ಬಳಸುವಂತವುಗಳಾಗಿವೆ. ಇವು ಅಲ್ಲಿಗೆ ಹೇಗೆ ಬಂದವು ಎಂಬ ಬಗ್ಗೆ ಸುತ್ತಮುತ್ತಲ ಕಾರ್ಮಿಕರನ್ನು ವಿಚಾರಣೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಭದ್ರತೆ ಫುಲ್ ಟೈಟ್: ಹೈ ಅಲರ್ಟ್ ಘೋಷಣೆ
ಪ್ರಧಾನಿ ಮೋದಿ ಅವರ ಪ್ರವಾಸದ ಸಮಯದಲ್ಲಿ ಇಂತಹ ಸ್ಫೋಟಕಗಳು ಪತ್ತೆಯಾಗಿರುವುದು ಭದ್ರತಾ ಲೋಪದ ಅನುಮಾನ ಮೂಡಿಸಿದೆ. ಹೀಗಾಗಿ ಬೆಂಗಳೂರು ಮತ್ತು ರಾಮನಗರದ ಗಡಿ ಭಾಗಗಳಲ್ಲಿ ಪೊಲೀಸರು 'ಹೈ ಅಲರ್ಟ್' ಘೋಷಿಸಿದ್ದಾರೆ. ಪ್ರತಿ ವಾಹನವನ್ನೂ ಬಿಗಿಯಾಗಿ ತಪಾಸಣೆ ಮಾಡಲಾಗುತ್ತಿದೆ. ಅದೃಷ್ಟವಶಾತ್, ಸಮಯಪ್ರಜ್ಞೆ ಮೆರೆದ ಪೊಲೀಸರು ಪ್ರಧಾನಿ ಬರುವ ಮುನ್ನವೇ ಸ್ಫೋಟಕ ಪತ್ತೆ ಹಚ್ಚುವ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ.
ಸದ್ಯ ಪ್ರಧಾನಮಂತ್ರಿ ಮೋದಿ ಅವರ ಕಾರ್ಯಕ್ರಮ ಸುಗಮವಾಗಿ ನಡೆದಿದೆ. ಜಿಲೆಟಿನ್ ಇಟ್ಟವರು ಯಾರು ಮತ್ತು ಅದರ ಉದ್ದೇಶವೇನು ಎನ್ನುವುದು ತನಿಖೆಯಿಂದ ಹೊರಬರಬೇಕಿದೆ.