ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದಾಗ ಭಾರಿ ಹೈಡ್ರಾಮಾ ನಡೆದಿತ್ತು. ಪ್ರಧಾನಿ ಬರುವ ಕೆಲವೇ ಗಂಟೆಗಳ ಮುನ್ನ ರಸ್ತೆ ಪಕ್ಕದಲ್ಲಿ ಜಿಲಿಟಿನ್ ಕಡ್ಡಿಗಳು ಮತ್ತು ಟೈಮರ್ ಪತ್ತೆಯಾಗಿದ್ದು ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಆದರೆ, ಈಗ ಈ ಕೇಸ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರ ತನಿಖೆಯಿಂದ ಸಖತ್ ಶಾಕಿಂಗ್ ಮತ್ತು ಸಮಾಧಾನಕರ ಸಂಗತಿಯೊಂದು ಹೊರಬಿದ್ದಿದೆ. ಆ ಜಿಲಿಟಿನ್ ಕಡ್ಡಿಗಳಿಗೆ ಸ್ಫೋಟಿಸುವ ಸಾಮರ್ಥ್ಯವೇ ಇರಲಿಲ್ಲ, ಅದೆಲ್ಲವೂ ಬರೀ 'ಠುಸ್' ಎಂದು ಪೊಲೀಸರು ಹೇಳಿದ್ದಾರೆ!
ಏನಿದು ಜಿಲಿಟಿನ್ ಕಡ್ಡಿಗಳ ಕಥೆ?
ಮೇ 9 ರಂದು ಕಗ್ಗಲಿಪುರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಬೃಹತ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಅವರು ಬರುವ ಕೆಲವೇ ತಾಸುಗಳ ಮುನ್ನ ಕನಕಪುರ ರಸ್ತೆಯ ವಡೇರಹಳ್ಳಿ ಸೇತುವೆ ಹತ್ತಿರ ಎರಡು ಜಿಲಿಟಿನ್ ಕಡ್ಡಿಗಳು ಹಾಗೂ ಒಂದು ಟೈಮರ್ ಸಿಕ್ಕಿದ್ದವು. ಪ್ರಧಾನಿ ಬರುವ ಹಾದಿಯಲ್ಲೇ ಸ್ಫೋಟಕ ಸಿಕ್ಕಿದ್ದರಿಂದ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿದ್ದವು.
ಆದರೆ ಪೊಲೀಸರು ಜಾಗವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಲ್ಲೊಂದು ಟ್ವಿಸ್ಟ್ ಸಿಕ್ಕಿತ್ತು. ಜಿಲಿಟಿನ್ ಕಡ್ಡಿಗಳ ಜೊತೆ ಟೈಮರ್ ಇತ್ತೇ ಹೊರತು, ಅದನ್ನು ಬ್ಲಾಸ್ಟ್ ಮಾಡಲು ಬೇಕಾಗುವ ಮುಖ್ಯ ವಸ್ತುವಾದ ಡಿಟೋನೆಟರ್ ಇರಲಿಲ್ಲ! ಅಷ್ಟೇ ಅಲ್ಲ, ಆ ಟೈಮರ್ ಅನ್ನು ಜಿಲಿಟಿನ್ ಕಡ್ಡಿಗೆ ಕನೆಕ್ಟ್ ಕೂಡ ಮಾಡಿರಲಿಲ್ಲ. ಎಲ್ಲವೂ ಬಿಡಿಬಿಡಿಯಾಗಿ ಬಿದ್ದಿದ್ದವು.
ಮೂರು ವರ್ಷ ಹಳೇ ಮೆಟೀರಿಯಲ್!
ಸಾಮಾನ್ಯವಾಗಿ ಇಂತಹ ಜಿಲಿಟಿನ್ ಕಡ್ಡಿಗಳ ಮೇಲೆ ಅದನ್ನು ತಯಾರಿಸಿದ ಡೇಟ್ ಮತ್ತು ಕಂಪನಿಯ ಹೆಸರು ಇರುತ್ತದೆ. ಆದರೆ ಇಲ್ಲಿ ಸಿಕ್ಕ ಕಡ್ಡಿಗಳ ಮೇಲೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಪೊಲೀಸರು ಇದನ್ನು ತಕ್ಷಣವೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಟ್ಟಿದ್ದರು.
ಅಲ್ಲಿನ ಎಕ್ಸ್‌ಪರ್ಟ್‌ಗಳು ಇದನ್ನು ಟೆಸ್ಟ್ ಮಾಡಿ ಕೊಟ್ಟಿರುವ ರಿಪೋರ್ಟ್ ನೋಡಿ ಪೊಲೀಸರೇ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದರೆ, ಆ ಜಿಲಿಟಿನ್ ಕಡ್ಡಿಗಳು ಬರೋಬ್ಬರಿ ಮೂರು ವರ್ಷ ಹಳೆಯವು! ಅವುಗಳ ಪವರ್ ಸಂಪೂರ್ಣವಾಗಿ ಹೋಗಿದ್ದು, ಒಂದು ವೇಳೆ ಬ್ಲಾಸ್ಟ್ ಆದರೂ ಕೇವಲ ಒಂದು ಅಡಿ ವಿಸ್ತೀರ್ಣದ ಜಾಗಕ್ಕೆ ಮಾತ್ರ ಎಫೆಕ್ಟ್ ಆಗುತ್ತಿತ್ತಂತೆ. ಅಂದರೆ, ಅದರಿಂದ ಯಾರಿಗೂ ದೊಡ್ಡ ಪ್ರಾಣಾಪಾಯ ಇರಲಿಲ್ಲ.
ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ:
"ಪ್ರಧಾನಿ ಮೋದಿ ಸಂಚರಿಸುವ ಮುಖ್ಯ ರಸ್ತೆಗೂ, ಈ ಜಿಲಿಟಿನ್ ಕಡ್ಡಿ ಸಿಕ್ಕ ಜಾಗಕ್ಕೂ ಸುಮಾರು 20 ಅಡಿಯಷ್ಟು ಗ್ಯಾಪ್ ಇತ್ತು. ಇವುಗಳ ಬ್ಲಾಸ್ಟಿಂಗ್ ಕೆಪಾಸಿಟಿಯೇ ಕೇವಲ ಒಂದು ಅಡಿ ಇತ್ತಲ್ಲದೆ, ಡಿಟೋನೆಟರ್ ಕೂಡ ಇರಲಿಲ್ಲ. ಇದನ್ನು ನೋಡಿದರೆ ಯಾರೋ ಬೇಕಂತಲೇ ಆರ್ಟ್ ಆಫ್ ಲಿವಿಂಗ್ ಆಶ್ರಮದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೋ ಅಥವಾ ಜನರಿಗೋ ಭಯ ಹುಟ್ಟಿಸಲು ಇಂತಹ ಹಳೇ ಕಡ್ಡಿಗಳನ್ನು ತಂದಿಟ್ಟಿದ್ದಾರೆ ಅನಿಸುತ್ತದೆ."
ಎನ್‌ಐಎ ಎಂಟ್ರಿ ಮತ್ತು ಕ್ವಾರೆಗಳ ಮೇಲೆ ದಾಳಿ
ಪ್ರಧಾನಿ ಭೇಟಿ ವೇಳೆ ಇಂತಹ ಘಟನೆ ನಡೆದಿದ್ದರಿಂದ ಕೇಂದ್ರ ತನಿಖಾ ಸಂಸ್ಥೆಯಾದ ಎನ್‌ಐಎ (NIA) ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿತ್ತು. ಆದರೆ ಸಾಂದರ್ಭಿಕ ಸಾಕ್ಷ್ಯಗಳು ಮತ್ತು ತಾಂತ್ರಿಕ ಮಾಹಿತಿಯನ್ನು ಚೆಕ್ ಮಾಡಿದ ಮೇಲೆ, ಇದರ ಹಿಂದೆ ಯಾವುದೇ ದೊಡ್ಡ ಭಯೋತ್ಪಾದಕ ಸಂಘಟನೆಗಳ ಕೈವಾಡ ಇರುವಂತೆ ಕಾಣುತ್ತಿಲ್ಲ ಎಂದು NIA ಅಭಿಪ್ರಾಯಪಟ್ಟಿದೆ. ಹೀಗಾಗಿ ಸದ್ಯಕ್ಕೆ ಈ ಕೇಸ್‌ನ ತನಿಖೆಯನ್ನು ಲೋಕಲ್ ಪೊಲೀಸರೇ ಮುಂದುವರಿಸುತ್ತಿದ್ದಾರೆ.
ಈ ಜಿಲಿಟಿನ್ ಕಡ್ಡಿಗಳು ಎಲ್ಲಿಂದ ಬಂದವು ಎಂದು ಪತ್ತೆ ಹಚ್ಚಲು ಪೊಲೀಸರು ಈಗ ಭರ್ಜರಿ ಬೇಟೆ ಶುರು ಮಾಡಿದ್ದಾರೆ. ಕನಕಪುರ, ಮಾಗಡಿ ಮತ್ತು ರಾಮನಗರ ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿರುವ 15ಕ್ಕೂ ಹೆಚ್ಚು ಕಲ್ಲು ಕ್ವಾರೆಗಳ ಮೇಲೆ ಪೊಲೀಸರು ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ. ಆದರೆ ಸದ್ಯಕ್ಕೆ ಎಲ್ಲೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಕಡ್ಡಿಗಳನ್ನು ತಮಿಳುನಾಡಿನಿಂದ ತಂದಿರಬಹುದು ಎಂಬ ಶಂಕೆಯೂ ಇರುವುದರಿಂದ, ಕರ್ನಾಟಕ ಪೊಲೀಸರ ಒಂದು ತಂಡ ಈಗ ತಮಿಳುನಾಡಿನ ಕ್ವಾರೆಗಳಲ್ಲೂ ತನಿಖೆ ನಡೆಸುತ್ತಿದೆ.