ಪ್ರಧಾನಿ ಮೋದಿ ಕೆಂಪುಕೋಟೆ ಭಾಷಣ - ವಿಕಸಿತ ಭಾರತ 2047ರ ಬೃಹತ್ ಕನಸು!!

ಭಾರತೀಯರ ಪಾಲಿಗೆ ಅತ್ಯಂತ ಹೆಮ್ಮೆಯ ಮತ್ತು ಸಂಭ್ರಮದ ದಿನವಾದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಸಾಂಪ್ರದಾಯಿಕ ಭಾಷಣ ಮಾಡಿದರು.

ವಂದೇ ಮಾತರಂ 150ನೇ ಸಂಭ್ರಮ | Photo Credit: https://x.com/airnewsalerts |
ವಂದೇ ಮಾತರಂ 150ನೇ ಸಂಭ್ರಮ | Photo Credit: https://x.com/airnewsalerts |

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು, ನಿರ್ದಿಷ್ಟವಾಗಿ 'ವಂದೇ ಮಾತರಂ' ಗೀತೆಯ 150 ವರ್ಷಗಳ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರಗೀತೆಗಿಂತ ಮೊದಲು 'ವಂದೇ ಮಾತರಂ' ಗೀತೆಯನ್ನು ಹಾಡಲಾಯಿತು. ದೇಶದ ಯುವ ಸಂಶೋಧಕರು, ಇಂಟರ್ನ್‌ಗಳು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 27,000 ವಿಶೇಷ ಆಹ್ವಾನಿತರು ಈ ಅದ್ಭುತ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಮ್ಮ ಭಾಷಣದ ಆರಂಭದಲ್ಲಿ ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನದ ಶುಭಕೋರಿದ ಪ್ರಧಾನಿ ಮೋದಿ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸಿದರು. ಪ್ರತಿಯೊಬ್ಬ ಭಾರತೀಯನ ಹೃದಯ ಬಡಿತದಲ್ಲೂ ಇಂದು 'ವಂದೇ ಮಾತರಂ' ಜಪ ಪ್ರತಿಧವನಿಸುತ್ತಿದೆ ಎಂದ ಅವರು, ದೇಶವು ಇಂದು ಹೊಸ ಸಂಕಲ್ಪಗಳೊಂದಿಗೆ ಮುಂದೆ ಸಾಗುತ್ತಿದೆ ಎಂದು ತಿಳಿಸಿದರು.

ಮುಖ್ಯವಾಗಿ, ದೇಶವು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಸ್ವಾವಲಂಬನೆ ಸಾಧಿಸಬೇಕಾದ ಅನಿವಾರ್ಯತೆಯನ್ನು ಅವರು ಒತ್ತಿಹೇಳಿದರು. “ನಾವು ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ, ಸಂಪೂರ್ಣವಾಗಿ ಆತ್ಮನಿರ್ಭರರಾಗಬೇಕು” ಎಂದು ಪ್ರಧಾನಿ ಪುನರುಚ್ಛರಿಸಿದರು. ಭಾರತವು ಇನ್ನು ಮುಂದೆ ಬೇರೆ ದೇಶಗಳ ಕಡೆಗೆ ಮುಖ ಮಾಡುವ ಸ್ಥಿತಿಯಲ್ಲಿಲ್ಲ ಎಂದು ನುಡಿದ ಅವರು, ತಂತ್ರಜ್ಞಾನ ಹಾಗೂ ಉತ್ಪಾದನಾ ವಲಯದಲ್ಲಿ ದೇಶದ ಪ್ರಗತಿಯನ್ನು ಕೊಂಡಾಡಿದರು. ವಿಶೇಷವಾಗಿ ಸೆಮಿಕಂಡಕ್ಟರ್ ಪ್ಲಾಂಟ್‌ಗಳ (ಉತ್ಪಾದನಾ ಘಟಕಗಳು) ಸ್ಥಾಪನೆ ಮತ್ತು ಈ ಕ್ಷೇತ್ರದಲ್ಲಿ ಭಾರತ ಹೊಂದಿರುವ ಮಹತ್ವಾಕಾಂಕ್ಷೆಯ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿರುವುದನ್ನು ಅವರು ಮುಕ್ತಕಂಠದಿಂದ ಪ್ರಶಂಸಿಸಿದರು.

ದೇಶದ ಮೂಲೆಮೂಲೆಗಳಲ್ಲೂ ದೇಶಭಕ್ತಿಯನ್ನು ಇಮ್ಮಡಿಗೊಳಿಸುತ್ತಿರುವ 'ಹರ್ ಘರ್ ತಿರಂಗಾ, ಹರ್ ಮನ್ ತಿರಂಗಾ' ಅಭಿಯಾನವನ್ನು ಪ್ರಧಾನಿ ಮೋದಿ ಕೊಂಡಾಡಿದರು. ಇಂದು ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧವಜ ಹಾರಾಡುತ್ತಿದ್ದು, ಪ್ರತಿಯೊಬ್ಬರ ಮನದಲ್ಲೂ ದೇಶಪ್ರೇಮದ ಭಾವನೆ ತುಂಬಿದೆ ಎಂದರು.

ಜೊತೆಗೆ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ 'ವೋಕಲ್ ಫಾರ್ ಲೋಕಲ್' (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಆಶಯದೊಂದಿಗೆ ದೇಶದ ಜನತೆ ಒಂದಾಗುತ್ತಿರುವುದನ್ನು ಅವರು ಶ್ಲಾಘಿಸಿದರು. ಪ್ರತಿಯೊಬ್ಬ ಭಾರತೀಯನೂ ಸ್ವದೇಶಿ ವಸ್ತುಗಳನ್ನು ಬೆಂಬಲಿಸುತ್ತಿರುವುದು ಸ್ಥಳೀಯ ಉದ್ಯಮಿಗಳು ಮತ್ತು ಕುಶಲಕರ್ಮಿಗಳಿಗೆ ದೊಡ್ಡ ಶಕ್ತಿ ತುಂಬಿದೆ ಎಂದು ಅಭಿಪ್ರಾಯಪಟ್ಟರು.

ಕಳೆದ 12 ವರ್ಷಗಳಲ್ಲಿ ತಮ್ಮ ಸರ್ಕಾರವು ದೇಶದ ಅಭಿವೃದ್ಧಿಗೆ ತೆಗೆದುಕೊಂಡ ದಿಟ್ಟ ಹೆಜ್ಜೆಗಳ ಪರಿಣಾಮವಾಗಿ, ದೇಶದಲ್ಲಿ ಆರ್ಥಿಕ ಬದಲಾವಣೆಗಳು ವೇಗವಾಗಿ ಸಾಗಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಈ ಅವಧಿಯಲ್ಲಿ ಸುಮಾರು 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಅವರು ಹೆಮ್ಮೆಯಿಂದ ಘೋಷಿಸಿದರು. ಇದು ಸರ್ಕಾರದ ಜನಪರ ಯೋಜನೆಗಳು ಮತ್ತು ತಳಮಟ್ಟದ ಆರ್ಥಿಕ ಸುಧಾರಣೆಗಳ ನೇರ ಫಲವಾಗಿದೆ ಎಂದರು. "ಅಭಿವೃದ್ಧಿಯತ್ತ ಸಂಕಲ್ಪದೊಂದಿಗೆ ಸಾಗುತ್ತಿರುವ 140 ಕೋಟಿ ಭಾರತೀಯರನ್ನು ತಡೆಯುವುದು ಇನ್ನು ಯಾರಿಂದಲೂ ಸಾಧ್ಯವಿಲ್ಲ" ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಮುಂದಿನ ಗುರಿಗಳ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, 2047ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷಗಳು ಪೂರ್ಣಗೊಳ್ಳಲಿರುವ ಸಂದರ್ಭವನ್ನು ಐತಿಹಾಸಿಕ ಮೈಲಿಗಲ್ಲಾಗಿ ಪರಿವರ್ತಿಸುವುದಾಗಿ ತಿಳಿಸಿದರು. 140 ಕೋಟಿ ಭಾರತೀಯರ ಸಾಮೂಹಿಕ ಶ್ರಮದಿಂದ ಭಾರತವನ್ನು 'ಅಭಿವೃದ್ಧಿ ಹೊಂದಿದ ರಾಷ್ಟ್ರ' (ವಿಕಸಿತ ಭಾರತ)ವನ್ನಾಗಿ ನಿರ್ಮಿಸುವುದೇ ನಮ್ಮೆಲ್ಲರ ಮುಂದಿರುವ ಅಂತಿಮ ಗುರಿ ಎಂದರು.

ದೊಡ್ಡ ಗುರಿಗಳನ್ನು ಇಟ್ಟುಕೊಂಡಾಗ ಮಾತ್ರ ಬದುಕಿನಲ್ಲಿ ದೊಡ್ಡ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಅವರು ಕರೆ ನೀಡಿದರು. "ಕನಸುಗಳು ದೊಡ್ಡದಾಗಿದ್ದಾಗ, ನಮ್ಮ ಸಾಮರ್ಥ್ಯವೂ ತಾನಾಗಿಯೇ ಬೆಳೆಯುತ್ತದೆ" ಎಂದು ಯುವ ಜನತೆಗೆ ಸ್ಪೂರ್ತಿದಾಯಕ ಸಂದೇಶ ನೀಡಿದರು. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶವು ಅಭಿವೃದ್ಧಿ ಹೊಂದಲು ಪಣತೊಟ್ಟರೆ, ಆ ಗುರಿಯನ್ನು ಸಾಧಿಸುವುದು ನಿಸ್ಸಂದೇಹವಾಗಿ ಸಾಧ್ಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ಕೇವಲ ಸಾಂಪ್ರದಾಯಿಕ ಉತ್ಸವಕ್ಕೆ ಸೀಮಿತವಾಗಿರದೆ, ದೇಶದ ಭವಿಷ್ಯದ ಆರ್ಥಿಕ ಹಾಗೂ ತಾಂತ್ರಿಕ ಸ್ವಾವಲಂಬನೆಯ ನೀಲನಕ್ಷೆಯಾಗಿದೆ. 'ವಿಕಸಿತ ಭಾರತ 2047'ರ ಬೃಹತ್ ಗುರಿಯೊಂದಿಗೆ ಮುನ್ನಡೆಯುತ್ತಿರುವ ಭಾರತಕ್ಕೆ, ಪ್ರತಿಯೊಬ್ಬ ನಾಗರಿಕನ ಸಹಭಾಗಿತ್ವ ಅತ್ಯಗತ್ಯ ಎಂಬುದನ್ನು ಈ ಭಾಷಣವು ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದ ಯುವಜನತೆಯ ಶಕ್ತಿ ಮತ್ತು ಆತ್ಮನಿರ್ಭರತೆಯ ಮಂತ್ರವು ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

Latest News