ಬ್ಯಾಂಕ್ ಅಕೌಂಟ್ ಇಲ್ಲದಿದ್ರೂ ಮಕ್ಕಳು ಮಾಡಬಹುದು UPI ಪೇಮೆಂಟ್ - ಪೇಟಿಎಂ ತಂದಿದೆ ಸೂಪರ್ 'ಪಾಕೆಟ್ ಮನಿ' ಫೀಚರ್!!

ಈಗಿನ ಡಿಜಿಟಲ್ ಜಮಾನಾದಲ್ಲಿ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಎಲ್ಲರಿಗೂ ಆನ್‌ಲೈನ್ ಶಾಪಿಂಗ್ ಕ್ರೇಜ್ ಇದ್ದೇ ಇರುತ್ತೆ. ಆದ್ರೆ, ಯುಪಿಐ (UPI) ಬಳಸಿ ಹಣ ಪಾವತಿ ಮಾಡಬೇಕಂದ್ರೆ ಸ್ವಂತ ಬ್ಯಾಂಕ್ ಅಕೌಂಟ್ ಇರಲೇಬೇಕು. ಹಾಗಾಗಿ, ಅಪ್ರಾಪ್ತ ವಯಸ್ಸಿನ ಮಕ್ಕಳು ಅಥವಾ ಕಾಲೇಜು ಸ್ಟೂಡೆಂಟ್ಸ್ ಏನಾದ್ರೂ ಆನ್‌ಲೈನ್ ಪೇಮೆಂಟ್ ಮಾಡಬೇಕಾದ್ರೆ ಪ್ರತಿ ಬಾರಿಯೂ ಪೋಷಕರ ಮೊಬೈಲ್ ಒಟಿಪಿ (OTP) ಅಥವಾ ಅವರ ಫೋನ್‌ಗಾಗಿ ಕಾಯಬೇಕಾಗುತ್ತಿತ್ತು. ಆದ್ರೆ, ಇನ್ಮುಂದೆ ಆ ತಲೆನೋವು ಇರಲ್ಲ ಮಗಾ! ಯಾಕಂದ್ರೆ, ಫೇಮಸ್ ಡಿಜಿಟಲ್ ಪೇಮೆಂಟ್ ಆ್ಯಪ್ 'ಪೇಟಿಎಂ' (Paytm) ಇದಕ್ಕೊಂದು ಸೂಪರ್ ಪರಿಹಾರ ತಂದಿದೆ. ಅದೇ ಪೇಟಿಎಂ 'ಪಾಕೆಟ್ ಮನಿ' (Pocket Money) ಅನ್ನೋ ಹೊಸ ಯುಪಿಐ ಫೀಚರ್!

ಇನ್ಮುಂದೆ ಒಟಿಪಿ, ಪೇರೆಂಟ್ಸ್ ಫೋನ್‌ಗಾಗಿ ಕಾಯಬೇಕಾಗಿಲ್ಲ | Photo Credit: https://x.com/Paytm
ಇನ್ಮುಂದೆ ಒಟಿಪಿ, ಪೇರೆಂಟ್ಸ್ ಫೋನ್‌ಗಾಗಿ ಕಾಯಬೇಕಾಗಿಲ್ಲ | Photo Credit: https://x.com/Paytm

ಬ್ಯಾಂಕ್ ಖಾತೆಯೇ ಇಲ್ಲದ ಹದಿಹರೆಯದವರಿಗಾಗಿ ಪೇಟಿಎಂ ಈ ಸಖತ್ ಆಫರ್ ಬಿಡುಗಡೆ ಮಾಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಂದಿರೋ ‘ಯುಪಿಐ ಸರ್ಕಲ್’ (UPI Circle) ಟೆಕ್ನಾಲಜಿ ಆಧಾರದ ಮೇಲೆ ಈ ಸೇವೆ ಕೆಲಸ ಮಾಡುತ್ತೆ. ಇದರಿಂದಾಗಿ ಮಕ್ಕಳು ತಮ್ಮದೇ ಆದ ಬ್ಯಾಂಕ್ ಅಕೌಂಟ್ ಇಲ್ಲದಿದ್ದರೂ ಬಿಂದಾಸ್ ಆಗಿ ಸ್ವತಂತ್ರವಾಗಿ ಯುಪಿಐ ಪಾವತಿ ಮಾಡಬಹುದು.

ಈ ಪಾಕೆಟ್ ಮನಿ ಫೀಚರ್ ಹೆಂಗೆ ಕೆಲಸ ಮಾಡುತ್ತೆ?
ಪ್ಲಾನ್ ತುಂಬಾ ಸಿಂಪಲ್ ಆಗಿದೆ. ಪೋಷಕರು ತಮ್ಮ ಪೇಟಿಎಂ ಆ್ಯಪ್ ಮೂಲಕ ಮಕ್ಕಳ ಮೊಬೈಲ್‌ನಲ್ಲಿರೋ ಪೇಟಿಎಂ ಆ್ಯಪ್ ಅನ್ನು ಲಿಂಕ್ ಮಾಡಬೇಕಾಗುತ್ತೆ. ಒಮ್ಮೆ ಈ ಲಿಂಕಿಂಗ್ ಪ್ರಕ್ರಿಯೆ ಮುಗಿದರೆ ಸಾಕು, ಮಕ್ಕಳು ತಮ್ಮ ಶಾಲಾ-ಕಾಲೇಜು ಕ್ಯಾಂಟೀನ್ ಬಿಲ್, ಮೆಟ್ರೋ ಟಿಕೆಟ್, ಕ್ಯಾಬ್ ಬುಕಿಂಗ್, ಮೊಬೈಲ್ ರೀಚಾರ್ಜ್ ಹಾಗೂ ಇಷ್ಟವಾದ ವಸ್ತುಗಳ ಶಾಪಿಂಗ್‌ಗಾಗಿ ತಾವೇ ಸ್ವತಃ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು.

ಇಲ್ಲಿರೋ ಪ್ಲಸ್ ಪಾಯಿಂಟ್ ಏನಪ್ಪಾ ಅಂದ್ರೆ: ಪ್ರತಿ ಬಾರಿ ಪೇಮೆಂಟ್ ಮಾಡುವಾಗಲೂ ಪೋಷಕರ ಮೊಬೈಲ್‌ಗೆ ಒಟಿಪಿ ಬರೋದನ್ನಾಗಲಿ ಅಥವಾ ಅವರ ಫೋನ್ ಇಸ್ಕೊಂಡು ಪಿನ್ ಹಾಕೋದನ್ನಾಗಲಿ ಕಾಯುವ ಅಗತ್ಯ ಇರೋದಿಲ್ಲ. ಮಕ್ಕಳು ತಾವೇ ಇಂಡಿಪೆಂಡೆಂಟ್ ಆಗಿ ಸ್ಕ್ಯಾನ್ ಮಾಡಿ ಮುಗಿಸಬಹುದು.

ಮಕ್ಕಳ ಮೇಲಿರುತ್ತೆ ಪೋಷಕರ ಫುಲ್ ಕಂಟ್ರೋಲ್ ಮತ್ತು ಸೇಫ್ಟಿ!
ಮಕ್ಕಳಿಗೆ ಸ್ವತಂತ್ರವಾಗಿ ಪೇಮೆಂಟ್ ಮಾಡೋಕೆ ಆಪ್ಷನ್ ಕೊಟ್ಟ ತಕ್ಷಣ ಅವರು ಹಣ ದುರುಪಯೋಗ ಮಾಡಿಕೊಳ್ತಾರೆ ಅನ್ನೋ ಭಯ ಪೋಷಕರಿಗೆ ಬೇಡ. ಯಾಕಂದ್ರೆ, ಪೇಟಿಎಂ ಇದರಲ್ಲಿ ಭರ್ಜರಿ ಸೆಕ್ಯೂರಿಟಿ ಮತ್ತು ಕಂಟ್ರೋಲಿಂಗ್ ಫೀಚರ್ಸ್ ಇಟ್ಟಿದೆ.

ಖರ್ಚಿನ ಮಿತಿ (Limit): ಪೋಷಕರು ತಮ್ಮ ಆ್ಯಪ್ ಮೂಲಕ ಮಕ್ಕಳ ಖಾತೆಗೆ ತಿಂಗಳಿಗೆ ಗರಿಷ್ಠ 15,000 ರೂಪಾಯಿವರೆಗೆ ಮಾತ್ರ ಲಿಮಿಟ್ ಸೆಟ್ ಮಾಡಬಹುದು.

ಒಂದು ಬಾರಿಯ ಮಿತಿ: ಸಿಂಗಲ್ ಪೇಮೆಂಟ್‌ಗೆ ಗರಿಷ್ಠ 5,000 ರೂಪಾಯಿ ಮಾತ್ರ ಖರ್ಚು ಮಾಡಬಹುದು.

ಆರಂಭಿಕ ಸುರಕ್ಷತೆ: ಈ ಫೀಚರ್ ಆನ್ ಮಾಡಿದ ಮೊದಲ 30 ನಿಮಿಷಗಳಲ್ಲಿ ಕೇವಲ 500 ರೂ. ಹಾಗೂ ಮೊದಲ 24 ಗಂಟೆಗಳಲ್ಲಿ ಕೇವಲ 5,000 ರೂ.ವರೆಗೆ ಮಾತ್ರ ಪಾವತಿಸಲು ಅವಕಾಶವಿರುತ್ತೆ.

ಅಷ್ಟೇ ಅಲ್ಲ, ಮಕ್ಕಳು ಎಲ್ಲೆಲ್ಲಿ, ಎಷ್ಟೆಷ್ಟು ಹಣ ಖರ್ಚು ಮಾಡ್ತಿದ್ದಾರೆ ಅನ್ನೋದನ್ನು ಪೋಷಕರು ತಮ್ಮದೇ ಮೊಬೈಲ್‌ನಲ್ಲಿ ‘ರಿಯಲ್-ಟೈಮ್’ (ಅಂದ್ರೆ ಆ ಕ್ಷಣದಲ್ಲೇ) ಟ್ರ್ಯಾಕ್ ಮಾಡಬಹುದು. ಪೇಟಿಎಂನ ‘ಸ್ಪೆಂಡ್ ಸಮ್ಮರಿ’ (Spend Summary) ಮೂಲಕ ಯಾವ ವಿಭಾಗಕ್ಕೆ (ಉದಾಹರಣೆಗೆ ಫುಡ್, ಜರ್ನಿ ಅಥವಾ ಶಾಪಿಂಗ್) ಎಷ್ಟು ಹಣ ಹೋಗಿದೆ ಅಂತ ಕಂಪ್ಲೀಟ್ ರಿಪೋರ್ಟ್ ಸಿಗುತ್ತೆ. ಪೋಷಕರು ಯಾವಾಗ ಬೇಕಾದರೂ ತಮ್ಮ ಯುಪಿಐ ಪಿನ್ ಬಳಸಿ ಮಕ್ಕಳ ಖಾತೆಯ ಮಿತಿಯನ್ನು ಚೇಂಜ್ ಮಾಡಬಹುದು ಅಥವಾ ಬೇಡ ಅನ್ಸಿದ್ರೆ ಈ ಸೇವೆಯನ್ನು ಕಂಪ್ಲೀಟ್ ಆಗಿ ಸ್ಟಾಪ್ ಮಾಡಬಹುದು.

ಆದ್ರೆ ನೆನಪಿರಲಿ, ಈ ಫೀಚರ್ ಬಳಸಿ ಅಂತರರಾಷ್ಟ್ರೀಯ ಪಾವತಿ (International Payments) ಮಾಡೋಕಾಗಲಿ ಅಥವಾ ಎಟಿಎಂಗೆ ಹೋಗಿ ಹಣ ವಿತ್​ಡ್ರಾ ಮಾಡೋಕಾಗಲಿ ಯಾವುದೇ ಚಾನ್ಸ್ ಇಲ್ಲ. ಒಟ್ಟಿನಲ್ಲಿ ಪೋಷಕರಿಗೂ ಟೆನ್ಷನ್ ಇಲ್ಲ, ಮಕ್ಕಳಿಗೂ ಡಿಜಿಟಲ್ ಪಾಕೆಟ್ ಮನಿ ಸಿಕ್ಕ ಹಾಗಾಯ್ತು!

Latest News