CJP ಸಭೆಗೆ ಪೊಲೀಸ್ ಬ್ರೇಕ್ - ದರ್ಶನ್ ಬಗ್ಗೆ ಎದ್ದಿರುವ ಆ ವದಂತಿ ಹಾಗೂ ಸಂಪುಟ ಕಸರತ್ತಿನ ಬಗ್ಗೆ ಪರಮೇಶ್ವರ್ ಖಡಕ್ ಮಾತು;

ರಾಜ್ಯ ರಾಜಕಾರಣ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆ ಹುಟ್ಟುಹಾಕಿರುವ ಕೆಲವು ಪ್ರಮುಖ ವಿಚಾರಗಳ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಅವರು ಶನಿವಾರ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ನಾಳೆ ನಡೆಯಬೇಕಿದ್ದ ಜಿರಳೆ ಜನತಾ ಪಾರ್ಟಿ (CJP) ಸಮಾವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವ ವಿಚಾರ, ಜೈಲಿನಲ್ಲಿ ನಟ ದರ್ಶನ್ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹಾಗೂ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ಸಂಪುಟ ಪುನಾರಚನೆ ಕುರಿತು ಸಚಿವರು ಸುದ್ದಿಗಾರರ ಮುಂದೆ ಮುಕ್ತವಾಗಿ ಮಾತನಾಡಿದ್ದಾರೆ.

ಸಿಜೆಪಿ ಸಭೆಗೆ ಅನುಮತಿ ನಿರಾಕರಣೆ – ಗೃಹ ಸಚಿವರ ಸ್ಪಷ್ಟನೆ; | Photo Credit: https://www.daijiworld.com
ಸಿಜೆಪಿ ಸಭೆಗೆ ಅನುಮತಿ ನಿರಾಕರಣೆ – ಗೃಹ ಸಚಿವರ ಸ್ಪಷ್ಟನೆ; | Photo Credit: https://www.daijiworld.com

ಸಿಜೆಪಿ ಸಭೆಗೆ ಅನುಮತಿ ಇಲ್ಲ: ಇದು ಪೊಲೀಸರ ನಿರ್ಧಾರ!

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಾ, ದೇಶಾದ್ಯಂತ ಅತ್ಯಧಿಕ ಫಾಲೋವರ್ಸ್ ಪಡೆದುಕೊಳ್ಳುತ್ತಿರುವ 'ಜಿರಳೆ ಜನತಾ ಪಾರ್ಟಿ' ಅಥವಾ 'ಕಾಕ್ರೋಜ್ ಜನತಾ ಪಾರ್ಟಿ' (CJP) ಮುಖಂಡರಿಗೆ ಬೆಂಗಳೂರಿನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಭಾನುವಾರ (ಮೇ 24) ನಗರದ ಟೌನ್‌ಹಾಲ್ ಬಳಿ ಹಮ್ಮಿಕೊಂಡಿದ್ದ ಈ ಪಕ್ಷದ ಬಹಿರಂಗ ಸಭೆಗೆ ಪೊಲೀಸರು ಪರ್ಮಿಷನ್ ಕೊಟ್ಟಿಲ್ಲ.

ಈ ಬಗ್ಗೆ ಮಾತನಾಡಿದ ಗೃಹ ಸಚಿವರು, "ಸಿಜೆಪಿ ಅವರು ಯಾವ ಕಾರಣಕ್ಕೆ ಸಭೆ ಮಾಡುತ್ತಿದ್ದಾರೆ? ಸಮಾವೇಶ ಮಾಡಿದರೆ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬುದನ್ನು ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಪರಿಶೀಲಿಸುತ್ತಾರೆ. ಅದಾದ ಮೇಲೆಯೇ ಅನುಮತಿ ನೀಡಬೇಕೋ ಬೇಡವೋ ಎಂದು ಡಿಸೈಡ್ ಮಾಡ್ತಾರೆ. ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದರೆ ಅದರ ಹಿಂದೆ ಒಂದಷ್ಟು ಸುರಕ್ಷತೆಯ ಕಾರಣಗಳು ಇರುತ್ತವೆ. ಪೊಲೀಸರ ಕೆಲಸವನ್ನು ಅವರು ಮಾಡುತ್ತಾರೆ, ರಾಜಕಾರಣಿಗಳ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ" ಎಂದು ಸ್ಪಷ್ಟಪಡಿಸಿದರು.

ಜೈಲಲ್ಲಿ ದರ್ಶನ್ ಆತ್ಮಹ*ತ್ಯೆ ಯತ್ನ?

ಇನ್ನು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದ "ಜೈಲಿನಲ್ಲಿ ನಟ ದರ್ಶನ್ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ" ಎಂಬ ಶಾಕಿಂಗ್ ವದಂತಿಗೂ ಗೃಹ ಸಚಿವರು ಫುಲ್ ಸ್ಟಾಪ್ ಇಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, "ಈ ರೀತಿಯ ಅಫವಾಹಗಳು ಕೇಳಿಬಂದ ತಕ್ಷಣ ನಾನು ಸ್ವತಃ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಮೌಖಿಕವಾಗಿ ವರದಿ ಕೇಳಿದ್ದೆ. ಅಧಿಕಾರಿಗಳು ಜೈಲಿನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳನ್ನು ನಂಬಬಾರದು" ಎಂದು ತಿಳಿಸಿದರು.

ಸಂಪುಟ ಪುನಾರಚನೆಗೆ ಶಾಸಕರು ಕೇಳುವುದರಲ್ಲಿ ತಪ್ಪೇನಿಲ್ಲ

ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ಕೆಲ ಹಿರಿಯ ಮಂತ್ರಿಗಳನ್ನು ಕೈಬಿಡುತ್ತಾರೆ ಎಂಬ ಚರ್ಚೆಗಳ ಬಗ್ಗೆ ಮಾತನಾಡಿದ ಪರಮೇಶ್ವರ್, "ಶಾಸಕರು ಸಚಿವರಾಗಲು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಅವರಿಗೂ ಆಡಳಿತ ನಡೆಸುವ ಸಾಮರ್ಥ್ಯ ಇರುತ್ತದೆ. ಆದರೆ, ನಿಯಮಗಳ ಪ್ರಕಾರ ಸಂಪುಟದಲ್ಲಿ ಕೇವಲ ಶೇಕಡಾ 15 ರಷ್ಟು ಮಾತ್ರ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಅವಕಾಶ ಇರುತ್ತದೆ. ಹಾಗಾಗಿ ಎಲ್ಲರಿಗೂ ಸ್ಥಾನ ಸಿಗಲ್ಲ. ಹಿರಿಯ ಮಂತ್ರಿಗಳನ್ನು ಕೈ ಬಿಡುವ ಅಥವಾ ಉಳಿಸಿಕೊಳ್ಳುವ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಮತ್ತು ಸಿಎಂ ತೆಗೆದುಕೊಳ್ಳುತ್ತಾರೆ" ಎಂದರು.

ಇದೇ ವೇಳೆ ತಮ್ಮ ಖಾತೆ ಬದಲಾವಣೆ ಕುರಿತು ಮಾತನಾಡುತ್ತಾ, "ಸಂಪುಟ ಪುನಾರಚನೆಯಾದರೂ ನನ್ನ ಹೋಮ್ ಮಿನಿಸ್ಟರ್ ಖಾತೆ ಬದಲಾಗಲ್ಲ. ನನಗೆ ನನ್ನ ಇಲಾಖೆಯ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಕಳೆದ ಎಂಟು ವರ್ಷಗಳಿಂದ ಗೃಹ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಒಂದು ವೇಳೆ ಹೈಕಮಾಂಡ್ ಗೃಹ ಇಲಾಖೆಯ ಜೊತೆಗೆ ಬೇರೆ ಯಾವುದೇ ಹೆಚ್ಚುವರಿ ಖಾತೆ ನೀಡಿದರೂ ನಿಭಾಯಿಸುತ್ತೇನೆ, ಅಷ್ಟೇ ಯಾಕೆ ಸಿಎಂ ಸ್ಥಾನ ಕೊಟ್ಟರೂ ಜವಾಬ್ದಾರಿಯಿಂದ ಕೆಲಸ ಮಾಡಲು ನಾನು ರೆಡಿ" ಎಂದು ನಗುತ್ತಲೇ ಉತ್ತರಿಸಿದರು.

ಬಕ್ರೀದ್ ಹಬ್ಬ ಹಾಗೂ ದರ್ಗಾ ಕೇಸ್ ವಾಪಸ್ ವಿಚಾರ:

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರ್ಬಾನಿಗೆ ರಕ್ಷಣೆ ಕೋರಿ ವಕ್ಫ್ ಬೋರ್ಡ್ ಪತ್ರ ಬರೆದಿರುವ ಬಗ್ಗೆ ಮಾತನಾಡಿದ ಅವರು, "ದೊಡ್ಡ ದೊಡ್ಡ ಹಬ್ಬಗಳ ಬಂದಾಗ ಪೊಲೀಸರು ಸಾಮಾನ್ಯವಾಗಿ ಅಲರ್ಟ್ ಆಗಿರುತ್ತಾರೆ. ಅಗತ್ಯವಿದ್ದರೆ ಹೆಚ್ಚುವರಿ ಸೆಕ್ಯೂರಿಟಿ ಒದಗಿಸುತ್ತಾರೆ. ವಕ್ಫ್ ಬೋರ್ಡ್ ಪತ್ರಕ್ಕೆ ಪೊಲೀಸರು ಸೂಕ್ತವಾಗಿ ಸ್ಪಂದಿಸಲಿದ್ದಾರೆ" ಎಂದರು.

ಇನ್ನು ಲಾಡ್ಲೆ ಮಶಾಕ್ ದರ್ಗಾ ಕೇಸ್‌ಗಳ ವಾಪಸ್ ಪಡೆಯುವ ನಿರ್ಧಾರಕ್ಕೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ವಿರೋಧದ ಬಗ್ಗೆ ಪ್ರತಿಕ್ರಿಯಿಸಿ, "ವಿರೋಧ ಮಾಡುವುದು ಅವರಿಗೆ ಬಿಟ್ಟ ವಿಚಾರ. ಸಂವಿಧಾನದ ಪ್ರಕಾರ ಎಲ್ಲರನ್ನೂ ಸಮಾನವಾಗಿ ನೋಡುವುದು ಸರ್ಕಾರದ ಕರ್ತವ್ಯ. ಕಾಂಗ್ರೆಸ್ ಸದಾ ಹಿಂದುಳಿದವರು ಹಾಗೂ ತುಳಿತಕ್ಕೆ ಒಳಗಾದವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ, ಮುಂದೆಯೂ ಅದನ್ನೇ ಮಾಡುತ್ತದೆ" ಎಂದು ಹೇಳಿದರು.

Latest News