ಸಾಫ್ಟ್‌ವೇರ್ ಲೋಕದ ದಿಗ್ಗಜ ಕಂಪನಿ ಒರಾಕಲ್‌ನಲ್ಲಿ ಸದ್ಯಕ್ಕೆ ನಡುಕ ಶುರುವಾಗಿದೆ. ಜೂನ್ 15ರ ಒಳಗಾಗಿ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಶೇಕಡ 18 ರಷ್ಟು ಅಂದರೆ ಸುಮಾರು 30,000 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಯಾವುದೇ ಕಂಪನಿ ನಷ್ಟದಲ್ಲಿದ್ದಾಗ ಅಥವಾ ಆರ್ಥಿಕ ಮಂದಗತಿ ಇದ್ದಾಗ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತದೆ. ಆದರೆ ಒರಾಕಲ್ ಕಥೆ ಉಲ್ಟಾ ಇದೆ! ಕಂಪನಿ ಭರ್ಜರಿ ಲಾಭದಲ್ಲಿದೆ, ಆದರೂ ಇಷ್ಟೊಂದು ಜನರನ್ನು ಕೆಲಸದಿಂದ ತೆಗೆದುಹಾಕ್ತಾ ಇರೋದು ಇಡೀ ಟೆಕ್ ಪ್ರಪಂಚದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ.
ಬಿಸಿನೆಸ್ ಸೂಪರ್ ಹಿಟ್, ಆದ್ರೂ ಕೆಲಸ ಔಟ್
ಒರಾಕಲ್ ಇತ್ತೀಚೆಗೆ ರಿಲೀಸ್ ಮಾಡಿದ 2026 ರ ಮೂರನೇ ತ್ರೈಮಾಸಿಕದ (Q3) ಫೈನಾನ್ಷಿಯಲ್ ರಿಪೋರ್ಟ್ ನೋಡಿದರೆ ಯಾರಿಗಾದರೂ ತಲೆ ತಿರುಗುತ್ತೆ. ಈ ಕ್ವಾರ್ಟರ್‌ನಲ್ಲಿ ಕಂಪನಿಯ ಒಟ್ಟು ಆದಾಯ ಬರೋಬ್ಬರಿ 22% ಹೆಚ್ಚಳವಾಗಿ 17.2 ಬಿಲಿಯನ್ ಡಾಲರ್‌ಗೆ ತಲುಪಿದೆ! ಇನ್ನು ಕಂಪನಿಯ ಮೇನ್ ಬಿಸಿನೆಸ್ ಆದ ಕ್ಲೌಡ್ ಆಪರೇಷನ್ಸ್ ಆದಾಯವಂತೂ ವರ್ಷದಿಂದ ವರ್ಷಕ್ಕೆ 44% ಬಂಫರ್ ಗ್ರೋತ್ ಕಂಡು 8.9 ಬಿಲಿಯನ್ ಡಾಲರ್ ತಲುಪಿದೆ. ಒರಾಕಲ್‌ನ ಒಟ್ಟು ಬಿಸಿನೆಸ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ಕ್ಲೌಡ್ ಸಾಫ್ಟ್‌ವೇರ್‌ನಿಂದಲೇ ಬರ್ತಾ ಇದೆ.
ಅದರಲ್ಲೂ ಮುಖ್ಯವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಬಿಸಿನೆಸ್‌ನಲ್ಲಿ ಒರಾಕಲ್ ಆದಾಯ ಬರೋಬ್ಬರಿ 243% ರಷ್ಟು ರಾಕೆಟ್ ವೇಗದಲ್ಲಿ ಜಿಗಿದಿದೆ! ಇಷ್ಟೆಲ್ಲಾ ಭರ್ಜರಿ ಲಾಭ ಮಾಡಿಕೊಂಡು, 3.7 ಬಿಲಿಯನ್ ಡಾಲರ್ ನಿವ್ವಳ ಲಾಭ (Net Income) ಜೇಬಿಗೆ ಇಳಿಸಿಕೊಂಡರೂ ಕಂಪನಿ ಮಾತ್ರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೈಗೆ ಕೊಡ್ತಾ ಇದೆ.
ಕಂಪನಿಯ ಬಾಸ್‌ಗಳು ಹೇಳುವ ಪ್ರಕಾರ, ಇದು ಆರ್ಥಿಕ ಸಂಕಷ್ಟದಿಂದ ಮಾಡುತ್ತಿರುವ ಲೇ-ಆಫ್ ಖಂಡಿತಾ ಅಲ್ಲ. ಇದೊಂದು ‘ಸ್ಟ್ರಾಟೆಜಿಕ್ ಮೂವ್’ (ತಾಂತ್ರಿಕ ರಣತಂತ್ರ). ಸರಳವಾಗಿ ಹೇಳಬೇಕೆಂದರೆ, ಒರಾಕಲ್ ಈಗ ತನ್ನ ಹಳೆಯ ಮತ್ತು ಹೆಚ್ಚು ಮ್ಯಾನ್‌ಪವರ್ ಬೇಕಾಗುವ ಕೆಲಸಗಳನ್ನು ಸೈಡ್‌ಲೈನ್ ಮಾಡಿ, ಭವಿಷ್ಯದ ಮಾರುಕಟ್ಟೆಯಾದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (AI) ಕಡೆಗೆ ತನ್ನ ಸಂಪೂರ್ಣ ಗಮನ ಹರಿಸುತ್ತಿದೆ.
2026 ರಲ್ಲಿ ಒರಾಕಲ್ ಬರೋಬ್ಬರಿ 50 ಬಿಲಿಯನ್ ಡಾಲರ್ ಹಣವನ್ನು ಬಂಡವಾಳ ಹೂಡಿಕೆ (Capital Expenditure) ಮಾಡಲು ಪ್ಲಾನ್ ಮಾಡಿದೆ. ಈ ಹಣದ ಸಿಂಹಪಾಲನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಮತ್ತು AI ಇನ್‌ಫ್ರಾಸ್ಟ್ರಕ್ಚರ್ ಬೆಳೆಸಲು ಬಳಸಲಾಗುತ್ತಿದೆ.
‘ಸ್ಟಾರ್ ಗೇಟ್’ ಪ್ರಾಜೆಕ್ಟ್ ಮೇಲೆ ಕಣ್ಣು
ವಿಶ್ವದ ಫೇಮಸ್ AI ಸಂಸ್ಥೆ OpenAI ಮತ್ತು ಸಾಫ್ಟ್‌ಬ್ಯಾಂಕ್ (SoftBank) ಜೊತೆಯಾಗಿ ಜಗತ್ತಿನ ಅತಿ ದೊಡ್ಡ AI ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಆದ ‘ಸ್ಟಾರ್ ಗೇಟ್’ (Stargate) ಅನ್ನು ರೆಡಿ ಮಾಡ್ತಾ ಇವೆ. ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಒರಾಕಲ್ ಕೂಡ ಪ್ರಮುಖ ಪಾಲುದಾರನಾಗಿ ಭಾಗವಹಿಸುತ್ತಿದೆ. ಮುಂದಿನ ಜನರೇಷನ್‌ನ AI ಕಂಪ್ಯೂಟಿಂಗ್ ಪವರ್‌ಗೆ ಈ ಪ್ರಾಜೆಕ್ಟ್ ತುಂಬಾ ಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ಒರಾಕಲ್ ಮ್ಯಾನೇಜ್‌ಮೆಂಟ್ ಹಳೆಯ ಉದ್ಯೋಗಿಗಳನ್ನು ಕಡಿಮೆ ಮಾಡಿ, ಆ ದುಡ್ಡನ್ನು ತಂತ್ರಜ್ಞಾನದ ಮೇಲೆ ಇನ್ವೆಸ್ಟ್ ಮಾಡ್ತಾ ಇದೆ.
ಭವಿಷ್ಯದಲ್ಲಿ ಬೇಡಿಕೆ ಇನ್ನು ಜಾಸ್ತಿ
ಒರಾಕಲ್‌ನ ಲಾಂಗ್ ಟರ್ಮ್ ಗ್ರೋತ್ ಸಖತ್ ಸ್ಟ್ರಾಂಗ್ ಆಗಿದೆ ಅನ್ನೋದಕ್ಕೆ ಕಂಪನಿಯ ಬುಕ್ಕಿಂಗ್ ಆರ್ಡರ್‌ಗಳೇ ಸಾಕ್ಷಿ. ಸದ್ಯಕ್ಕೆ ಕಂಪನಿಯ ಕೈಯಲ್ಲಿ ಬರೋಬ್ಬರಿ 553 ಬಿಲಿಯನ್ ಡಾಲರ್ ಮೌಲ್ಯದ ಭವಿಷ್ಯದ ಕರಾರು ಒಪ್ಪಂದಗಳು (Remaining Performance Obligations) ಇವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 325% ಹೆಚ್ಚಾಗಿದೆ! ಅಂದರೆ ಮುಂದಿನ ದಿನಗಳಲ್ಲಿ ಒರಾಕಲ್ ಕ್ಲೌಡ್‌ಗೆ ಭಾರಿ ಡಿಮ್ಯಾಂಡ್ ಇರೋದು ಪಕ್ಕಾ ಆಗಿದೆ.
ಇಡೀ ಟೆಕ್ ಲೋಕದ ಹೊಸ ಟ್ರೆಂಡ್
ಒರಾಕಲ್‌ನಲ್ಲಿ ನಡೆಯುತ್ತಿರುವ ಈ ಬದಲಾವಣೆ ಕೇವಲ ಒಂದು ಕಂಪನಿಗೆ ಸೀಮಿತವಾಗಿಲ್ಲ. ಇಡೀ ಜಾಗತಿಕ ಐಟಿ ವಲಯದಲ್ಲೇ ಈಗ ಇಂತಹದೊಂದು ಟ್ರೆಂಡ್ ಶುರುವಾಗಿದೆ. ಗೂಗಲ್, ಮೈಕ್ರೋಸಾಫ್ಟ್, ಮೆಟಾ ಸೇರಿದಂತೆ ಎಲ್ಲಾ ದೊಡ್ಡ ಟೆಕ್ ಕಂಪನಿಗಳು ಈಗ ಸಾಂಪ್ರದಾಯಿಕ ಸಾಫ್ಟ್‌ವೇರ್ ಮತ್ತು ಮ್ಯಾನುಯಲ್ ಕೆಲಸಗಳಿಗಿಂತ ಹೆಚ್ಚಾಗಿ ಆಟೊಮೇಷನ್, ಕ್ಲೌಡ್ ಮತ್ತು ಎಐ ತಂತ್ರಜ್ಞಾನಕ್ಕೆ ಮೊದಲ ಆದ್ಯತೆ ಕೊಡ್ತಾ ಇವೆ.