ಬ್ಯಾಂಕ್ ಕೆಲಸ ಅಂದರೆ ಸುಲಭನಾ? ಹತ್ತು ಎಂಟು ದಾಖಲೆಗಳು ಬೇಕೇ ಬೇಕು. ಅದರಲ್ಲೂ ಮೃತಪಟ್ಟವರ ಖಾತೆಯಲ್ಲಿರೋ ಹಣ ತೆಗಿಬೇಕಂದ್ರೆ ಮರಣ ಪತ್ರ (Death Certificate) ಕೊಡಲೇಬೇಕು. ಆದರೆ ಈ ಯಾವ ನಿಯಮಗಳೂ ಗೊತ್ತಿರದ ಒಬ್ಬ ವ್ಯಕ್ತಿ, ತನ್ನ ಅಕ್ಕ ಸತ್ತಿದ್ದಾಳೆ ಅಂತ ಬ್ಯಾಂಕ್‌ನವರಿಗೆ ಸಾಬೀತುಪಡಿಸಲು ನೇರವಾಗಿ ಆಕೆಯ ಅಸ್ಥಿಪಂಜರವನ್ನೇ ಹೊತ್ತು ಬ್ಯಾಂಕ್‌ಗೆ ಬಂದಿದ್ದಾನೆ!
ಅಸಲಿಗೆ ನಡೆದಿದ್ದೇನು?
ಒಡಿಶಾದ ಕಿಯೊಂಝರ್ ಜಿಲ್ಲೆಯ ಜೀತು ಮುಂಡಾ ಎಂಬುವವರೇ ಈ ಕಥೆಯ ನಾಯಕ. ಇವರ ಅಕ್ಕ ಕರ್ಲಾ ಮುಂಡಾ ಸುಮಾರು ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ತೀರಿಹೋಗಿದ್ದರು. ಅಕ್ಕ ಸಾಯುವ ಮುನ್ನ ತನ್ನಲ್ಲಿದ್ದ ಜಾನುವಾರುಗಳನ್ನು ಮಾರಿ 20 ಸಾವಿರ ರೂಪಾಯಿ ಹಣವನ್ನು ಬ್ಯಾಂಕ್‌ಗೆ ಹಾಕಿದ್ದರು. ಅಕ್ಕನಿಗೆ ಮಕ್ಕಳಿಲ್ಲದ ಕಾರಣ, ಆ ಹಣಕ್ಕೆ ತಮ್ಮ ಜೀತು ಅವರೇ ವಾರಸುದಾರರು.
ಅಕ್ಕ ಸತ್ತ ಮೇಲೆ ಮನೆಯ ಖರ್ಚಿಗೆ ಹಣ ಬೇಕೆಂದು ಜೀತು ಬ್ಯಾಂಕ್‌ಗೆ ಹೋದರು. ಅಲ್ಲಿನ ಸಿಬ್ಬಂದಿ "ಅಕ್ಕನ ಮರಣ ಪತ್ರ ತನ್ನಿ ಅಥವಾ ಅವರನ್ನೇ ಕರೆದುಕೊಂಡು ಬನ್ನಿ" ಅಂದಿದ್ದಾರೆ ಎನ್ನಲಾಗಿದೆ. ಅನಕ್ಷರಸ್ಥರಾದ ಜೀತು ಅವರಿಗೆ ಮರಣ ಪತ್ರ ಅಂದ್ರೆ ಏನು? ಅದನ್ನ ಎಲ್ಲಿಂದ ತರಬೇಕು? ಅನ್ನೋದು ಗೊತ್ತಿರಲಿಲ್ಲ. ಹತ್ತಾರು ಬಾರಿ ಬ್ಯಾಂಕ್‌ಗೆ ಅಲೆದರೂ ಹಣ ಮಾತ್ರ ಕೈಗೆ ಸಿಗಲಿಲ್ಲ.
A man in Odisha dug up his deceased sister’s grave and brought her skeleton to the bank Just to prove she had died.
— Woke Eminent (@WokePandemic) April 28, 2026
He had been trying to withdraw ₹20,000 from her account, but bank officials kept insisting he bring the account holder in person. Despite repeatedly telling them… pic.twitter.com/hICEqwvPFu
ಸ್ಮಶಾ*ನದಿಂದ ಅಸ್ಥಿಪಂಜರ ಹೊತ್ತು ಬಂದ ಜೀತು!
ಬ್ಯಾಂಕ್ ಅಧಿಕಾರಿಗಳು "ಖಾತೆದಾರರನ್ನೇ ಕರೆತನ್ನಿ" ಅಂತ ಪದೇ ಪದೇ ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಜೀತು, ಹತಾಶೆಯಿಂದ ಒಂದು ಸಾಹಸಕ್ಕೆ ಕೈಹಾಕಿದರು. ನೇರವಾಗಿ ಸ್ಮಶಾನಕ್ಕೆ ಹೋಗಿ, ಹೂತು ಹಾಕಿದ್ದ ಅಕ್ಕನ ಶವವನ್ನು ಹೊರತೆಗೆದಿದ್ದಾರೆ. ಎರಡು ತಿಂಗಳಾಗಿದ್ದರಿಂದ ಶವ ಅಸ್ಥಿಪಂಜರವಾಗಿತ್ತು. ಜೀತು ಅಷ್ಟಕ್ಕೇ ನಿಲ್ಲದೆ, ಆ ಅಸ್ಥಿಪಂಜರವನ್ನೇ ತನ್ನ ಹೆಗಲ ಮೇಲೆ ಹಾಕಿಕೊಂಡು ನೇರವಾಗಿ ಬ್ಯಾಂಕ್ ಒಳಗೆ ಎಂಟ್ರಿ ಕೊಟ್ಟಿದ್ದಾರೆ!
ಬ್ಯಾಂಕ್ ಒಳಗೆ ಅಸ್ಥಿಪಂಜರ ನೋಡಿ ಅಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. "ಅಕ್ಕ ಸತ್ತಿದ್ದಾಳೆ ಅಂತ ಎಷ್ಟೇ ಹೇಳಿದ್ರೂ ನೀವು ನಂಬಲಿಲ್ಲ, ನೋಡಿ ಇದೇ ನನ್ನ ಅಕ್ಕ, ಈಗಲಾದರೂ ಹಣ ಕೊಡಿ" ಎಂದು ಜೀತು ಕೇಳಿದಾಗ ಎಲ್ಲರೂ ದಂಗಾಗಿದ್ದಾರೆ.
ಪೊಲೀಸರ ಎಂಟ್ರಿ ಮತ್ತು ಅಸಲಿ ಸಮಸ್ಯೆ
ಬ್ಯಾಂಕ್ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಫೋನ್ ಮಾಡಿದರು. ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಕಿರಣ್ ಪ್ರಸಾದ್ ಅವರಿಗೆ ಜೀತು ಅವರ ಮುಗ್ಧತೆ ಅರ್ಥವಾಯಿತು. "ಜೀತು ಒಬ್ಬ ಅನಕ್ಷರಸ್ಥ ಆದಿವಾಸಿ. ಅವರಿಗೆ ಬ್ಯಾಂಕ್ ನಿಯಮಗಳು ಅಥವಾ ನಾಮಿನಿ ಅಂದ್ರೆ ಏನು ಅಂತ ಗೊತ್ತಿಲ್ಲ. ಬ್ಯಾಂಕ್‌ನವರು ಕೂಡ ಅವರಿಗೆ ಸರಿಯಾಗಿ ವಿವರಿಸಿ ಹೇಳುವಲ್ಲಿ ಸೋತಿದ್ದಾರೆ" ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದರು.
ಕೊನೆಗೆ ಪೊಲೀಸರೇ ಜೀತು ಅವರಿಗೆ ಸಮಾಧಾನ ಮಾಡಿ, ಅಕ್ಕನ ಅಸ್ಥಿಪಂಜರವನ್ನು ಗೌರವಯುತವಾಗಿ ಮತ್ತೆ ಹೂಳಲು ವ್ಯವಸ್ಥೆ ಮಾಡಿದರು. ಅಷ್ಟೇ ಅಲ್ಲದೆ, ಕಾನೂನುಬದ್ಧವಾಗಿ ಆ 20 ಸಾವಿರ ರೂಪಾಯಿ ಅವರಿಗೆ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಸ್ಪಷ್ಟನೆ
ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಮಾತನಾಡಿ, "ಜೀತು ಮುಂಡಾ ಅವರು ನಮ್ಮ ಬಳಿ ಬಂದು ಸಹಾಯ ಕೇಳಿರಲಿಲ್ಲ. ಈ ಘಟನೆ ನಡೆದ ಮೇಲೆಯೇ ನಮಗೆ ವಿಷಯ ತಿಳಿದಿದ್ದು, ಈಗ ಅವರಿಗೆ ಹಣ ಕೊಡಿಸಲು ಅಗತ್ಯ ದಾಖಲೆ ಸಿದ್ಧಪಡಿಸುತ್ತಿದ್ದೇವೆ" ಎಂದಿದ್ದಾರೆ. ಬ್ಯಾಂಕ್ ಮೂಲಗಳ ಪ್ರಕಾರ, ಜೀತು ಒಬ್ಬರೇ ಈಗ ಆ ಹಣಕ್ಕೆ ನಿಜವಾದ ವಾರಸುದಾರರಾಗಿದ್ದಾರೆ.
ಈ ಘಟನೆ ನಮಗೆ ಎರಡು ಪಾಠ ಕಲಿಸುತ್ತದೆ. ಒಂದು, ಬ್ಯಾಂಕ್ ಖಾತೆ ತೆರೆಯುವಾಗ 'ನಾಮಿನಿ' ಹೆಸರನ್ನು ತಪ್ಪದೇ ಸೇರಿಸುವುದು ಎಷ್ಟು ಮುಖ್ಯ ಅನ್ನೋದು. ಎರಡನೆಯದು, ಅನಕ್ಷರಸ್ಥರು ಅಥವಾ ಗ್ರಾಹಕರು ಬ್ಯಾಂಕ್‌ಗೆ ಬಂದಾಗ ಅವರಿಗೆ ನಿಯಮಗಳನ್ನು ಸರಳವಾಗಿ ವಿವರಿಸುವ ಜವಾಬ್ದಾರಿ ಸಿಬ್ಬಂದಿಯ ಮೇಲಿದೆ. ಇಲ್ಲದಿದ್ದರೆ ಇಂತಹ ಆಘಾತಕಾರಿ ಘಟನೆಗಳು ನಡೆಯುತ್ತಲೇ ಇರುತ್ತವೆ.