ಬೆಂಗಳೂರಿನ ಐಟಿ ಉದ್ಯೋಗಿಗಳು ಹಾಗೂ ನಿತ್ಯ ಪ್ರಯಾಣಿಕರ ಜೇಬಿಗೆ ಮತ್ತೊಂದು ಭಾರಿ ಕತ್ತರಿ ಬಿದ್ದಿದೆ. ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಟೋಲ್ ಕಾರಿಡಾರ್‌ಗಳಾದ ಹೊಸೂರು ರಸ್ತೆಯ 'ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ' ಮತ್ತು 'ನೈಸ್ (NICE) ರಸ್ತೆ'ಯನ್ನು ಬಳಸುವ ಪ್ರಯಾಣಿಕರು ಜುಲೈ 1, 2026ರ ಬುಧವಾರದಿಂದ ಪರಿಷ್ಕೃತ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಂದಿನಿಂದಲೇ ಜಾರಿಗೆ ಬರುವ ಈ ಹೊಸ ನಿಯಮದಿಂದಾಗಿ ಕಾರು ಮಾತ್ರವಲ್ಲದೆ ಬೈಕ್ ಸವಾರರ ಪ್ರಯಾಣವೂ ಇನ್ನಷ್ಟು ದುಬಾರಿಯಾಗಲಿದೆ.
ನೈಸ್ ರಸ್ತೆ ಟೋಲ್ ದರ ಕನಿಷ್ಠ ಶೇ. 10 ರಷ್ಟು ಹೆಚ್ಚಳ
ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE), ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆ ಘಟಕಗಳ ಟೋಲ್ ಶುಲ್ಕವನ್ನು ಪರಿಷ್ಕರಿಸುವ ಕುರಿತು ಅಧಿಕೃತ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್ 4, 2000 ರಂದು ರಾಜ್ಯ ಸರ್ಕಾರದೊಂದಿಗೆ ಸಹಿ ಹಾಕಿದ ರಿಯಾಯಿತಿ ಒಪ್ಪಂದದ ಪ್ರಕಾರ ಇದು ವಾರ್ಷಿಕವಾಗಿ ನಡೆಯುವ ನಿಯಮಿತ ದರ ಪರಿಷ್ಕರಣೆಯಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಸಾಗುವ ಬೆಂಗಳೂರಿನ ಸೆಮಿ-ರಿಂಗ್ ರಸ್ತೆಯಾದ ಪೆರಿಫೆರಲ್ ರಸ್ತೆ 40.8 ಕಿ.ಮೀ ಉದ್ದವಿದ್ದರೆ, ಲಿಂಕ್ ರಸ್ತೆ 8.1 ಕಿ.ಮೀ ಉದ್ದವಿದೆ.
ಈ ಹೊಸ ಪರಿಷ್ಕರಣೆಯ ಅನ್ವಯ ದ್ವಿಚಕ್ರ ವಾಹನಗಳು ಮತ್ತು ಕಾರು ಸವಾರರು ಸಂಚರಿಸುವ ದೂರದ ಆಧಾರದ ಮೇಲೆ ಕನಿಷ್ಠ ಶೇ. 10 ರಷ್ಟು ಹೆಚ್ಚು ಟೋಲ್ ಪಾವತಿಸಬೇಕಾಗುತ್ತದೆ. ಸಾರ್ವಜನಿಕರಿಗೆ ಚಿಲ್ಲರೆ ಹಣದ ಸಮಸ್ಯೆಯಾಗದಂತೆ ಈ ಹೆಚ್ಚಳದ ಮೊತ್ತವನ್ನು ಮುಂದಿನ ಪೂರ್ಣ ಸಂಖ್ಯೆಗೆ (Round figure) ಹೊಂದಿಸಲಾಗುತ್ತದೆ ಎಂದು ನೈಸ್ ಸಂಸ್ಥೆ ತಿಳಿಸಿದೆ.
ಸಾಮಾನ್ಯ ಪ್ರಯಾಣಿಕರ ಮೇಲೆ ಬಿಎಂಟಿಸಿ ಬರೆ?
ನೈಸ್ ರಸ್ತೆ ಟೋಲ್ ದರ ಹೆಚ್ಚಳವಾಗಿರುವುದು ಕೇವಲ ಸ್ವಂತ ವಾಹನ ಸವಾರರಿಗೆ ಮಾತ್ರವಲ್ಲದೆ ಸಾರ್ವಜನಿಕ ಸಾರಿಗೆ ಅವಲಂಬಿಸಿರುವ ಸಾಮಾನ್ಯ ಜನರಿಗೂ ಬಿಸಿ ಮುಟ್ಟಿಸಲಿದೆ. ಬನಶಂಕರಿ, ತಾವರೆಕೆರೆ, ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ವಿವಿಧ ಐಟಿ ಹಬ್ ಹಾಗೂ ವಸತಿ ಪ್ರದೇಶಗಳಿಗೆ ನೈಸ್ ರಸ್ತೆ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನೂರಾರು ಬಸ್ ಸೇವೆಗಳನ್ನು ಒದಗಿಸುತ್ತಿದೆ.
ಟೋಲ್ ದರ ಹೆಚ್ಚಳದಿಂದಾಗಿ ಬಿಎಂಟಿಸಿಗೆ ದೈನಂದಿನ ಕಾರ್ಯಾಚರಣೆಯ ವೆಚ್ಚ ಗಣನೀಯವಾಗಿ ಹೆಚ್ಚಾಗಲಿದೆ. ಹೀಗಾಗಿ, ಈ ಹೆಚ್ಚುವರಿ ಟೋಲ್ ವೆಚ್ಚದ ಹೊರೆಯನ್ನು ಸಂಸ್ಥೆಯು ಪ್ರಯಾಣಿಕರ ಟಿಕೆಟ್ ದರವನ್ನು ಸಲ್ಪ ಮಟ್ಟಿಗೆ ಹೆಚ್ಚಿಸುವ ಮೂಲಕ ಸಾರ್ವಜನಿಕರ ಮೇಲೆಯೇ ವರ್ಗಾಯಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್ (BETPL) ಟೋಲ್ ಪರಿಷ್ಕರಣೆ
ಮತ್ತೊಂದೆಡೆ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುವ 9.98 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಹಾಗೂ ಸಿಲ್ಕ್ ಬೋರ್ಡ್‌ನಿಂದ ಕರ್ನಾಟಕ-ತಮಿಳುನಾಡು ಗಡಿಯವರೆಗಿನ (ಅತ್ತಿಬೆಲೆ) 24.36 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 44 ರ ಟೋಲ್ ಶುಲ್ಕವನ್ನೂ ಸಹ ಇಂದಿನಿಂದಲೇ ಹೆಚ್ಚಿಸಲಾಗಿದೆ.
ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (BETPL) ಪ್ರಕಟಣೆಯ ಪ್ರಕಾರ, ಮಾರ್ಚ್ 31, 2026 ರ ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿ ಈ ದರಗಳನ್ನು ಪರಿಷ್ಕರಿಸಲಾಗಿದ್ದು, ಇವು ಜೂನ್ 30, 2027 ರವರೆಗೆ ಜಾರಿಯಲ್ಲಿರಲಿವೆ. ನಾಲ್ಕು ಪಥಗಳನ್ನು ಹೊಂದಿರುವ ಈ ಎತ್ತರಿಸಿದ ಎಕ್ಸ್‌ಪ್ರೆಸ್‌ವೇ ಬೆಂಗಳೂರಿನ ಅತಿ ಉದ್ದದ ಫ್ಲೈಓವರ್ ಎಂಬ ಹೆಗ್ಗಳಿಕೆ ಪಡೆದಿದೆ.
BETPL ಇಂದಿನ ಹೊಸ ದರ ಪಟ್ಟಿ ಇಂತಿದೆ:
- ಕಾರು / ಜೀಪ್ / ವ್ಯಾನ್ (Multiple Trips) - 100
- ಕಾರು / ಜೀಪ್ / ವ್ಯಾನ್ (Monthly Pass) - 1,960
- ದ್ವಿಚಕ್ರ ವಾಹನಗಳು (Monthly Pass) - 785
- ಅತ್ತಿಬೆಲೆ ಟೋಲ್ ಪ್ಲಾಜಾ (ಕಾರುಗಳ ಬಹು ಪ್ರಯಾಣ) - 60
ಐಟಿ ಉದ್ಯೋಗಿಗಳಿಗೆ ಮತ್ತು ವಾಣಿಜ್ಯ ವಾಹನಗಳಿಗೆ ಆರ್ಥಿಕ ಹೊರೆ
ರಾಷ್ಟ್ರೀಯ ಹೆದ್ದಾರಿ-44 ರ (NH-44) ಈ 24.365 ಕಿಲೋಮೀಟರ್ ಉದ್ದದ ವಿಭಾಗವನ್ನು ಸಮರ್ಪಕವಾಗಿ ನಿರ್ವಹಿಸಲು ಸ್ಥಾಪಿಸಲಾದ ವಿಶೇಷ ಉದ್ದೇಶದ ವಾಹನವೇ (SPV) ಈ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್ (BETPL) ಆಗಿದೆ. ಮುಂಬೈ ಮೂಲದ ಗ್ಲೋಬಲ್ ಇನ್‌ಫ್ರಾಸ್ಟ್ರಕ್ಚರ್ ಪಾರ್ಟ್‌ನರ್ಸ್ (GIP) ಸಂಸ್ಥೆಯು ಸದ್ಯ ಇದರ ರಿಯಾಯಿತಿ ಉಸ್ತುವಾರಿ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.
ಇಂದಿನಿಂದಲೇ ಜಾರಿಗೆ ಬಂದಿರುವ ಈ ದ್ವಿಮುಖ ಟೋಲ್ ದರ ಹೆಚ್ಚಳವು ದಿನನಿತ್ಯ ಆಫೀಸ್‌ಗೆ ಓಡಾಡುವ ಎಲೆಕ್ಟ್ರಾನಿಕ್ಸ್ ಸಿಟಿಯ ಸಾವಿರಾರು ಐಟಿ ಉದ್ಯೋಗಿಗಳಿಗೆ, ಟೆಕ್ಕಿಗಳಿಗೆ ಮತ್ತು ನಿರಂತರವಾಗಿ ಸಂಚರಿಸುವ ಸರಕು ಸಾಗಣೆ ವಾಣಿಜ್ಯ ವಾಹನಗಳ ಮಾಲೀಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಮಾಸಿಕ ಪಾಸ್‌ಗಳ ದರದಲ್ಲೂ ಭಾರಿ ಏರಿಕೆಯಾಗಿರುವುದರಿಂದ ತಿಂಗಳ ಬಜೆಟ್‌ನಲ್ಲಿ ಸಾರಿಗೆ ವೆಚ್ಚದ ಪಾಲು ಹೆಚ್ಚಾಗುವುದು ಅನಿವಾರ್ಯವಾಗಿದೆ.