May 9, 2026 Languages : ಕನ್ನಡ | English

ನಂಬಿಸಿ ಕುತ್ತಿಗೆ ಹಿಸುಕಿದ ಪಾಪಿ - 90 ವರ್ಷದ ವೃದ್ಧೆಯ ಜೀವ ತೆಗೆದು ಯುಜಿಡಿ ಗುಂಡಿಯಲ್ಲಿ ಹೂತು ಹಾಕಿದ್ದ ಘಟನೆ!!

ಮೈಸೂರು: ಹಣದಾಸೆ ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಕೆ.ಆರ್. ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನನ್ನು ನಂಬಿ ಸಣ್ಣಪುಟ್ಟ ಕೆಲಸಕ್ಕೆ ಆಸರೆಯಾಗಿದ್ದ 90 ವರ್ಷದ ಅಜ್ಜಿಯನ್ನೇ ಹಣಕ್ಕಾಗಿ ಕೊ*ಲೆ ಮಾಡಿ, ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ನರಹಂತಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮೈಸೂರಿನಲ್ಲಿ ಹಣದಾಸೆ ಕೊ*ಲೆ;
ಮೈಸೂರಿನಲ್ಲಿ ಹಣದಾಸೆ ಕೊ*ಲೆ;

ವಿಶ್ವಾಸ ಗಳಿಸಿ ಸಂಚು ರೂಪಿಸಿದ 'ವೀರಭದ್ರ'

ಈ ಕಥೆಯ ವಿಲನ್ ವೀರಭದ್ರ. ತಿಪ್ಪೂರು ಗ್ರಾಮದ ಗೌರಮ್ಮ (90) ಎಂಬ ವೃದ್ಧೆಯ ಜೊತೆ ಈತ ತುಂಬಾ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ. ಅಜ್ಜಿ ಒಬ್ಬರೇ ಇರುತ್ತಿದ್ದರಿಂದ ಅವರಿಗೆ ಬ್ಯಾಂಕ್ ಕೆಲಸ, ಮನೆಯ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಅವರ ಸಂಪೂರ್ಣ ವಿಶ್ವಾಸ ಗಳಿಸಿಕೊಂಡಿದ್ದ. ಅಜ್ಜಿಯೂ ಈತನನ್ನು ತನ್ನ ಮನೆಯ ಮಗನಂತೆಯೇ ನಂಬಿದ್ದರು. ಆದರೆ ಈತನ ಕಣ್ಣು ಮಾತ್ರ ಅಜ್ಜಿಯ ಬಳಿ ಇದ್ದ ಹಣದ ಮೇಲಿತ್ತು.

75 ಸಾವಿರ ಹಣಕ್ಕಾಗಿ ಶುರುವಾಯ್ತು ಸ್ಕೆಚ್

ಸುಮಾರು 15 ದಿನಗಳ ಹಿಂದೆ ಗೌರಮ್ಮ ಅವರು ಬ್ಯಾಂಕ್‌ನಿಂದ 75 ಸಾವಿರ ರೂಪಾಯಿ ಹಣವನ್ನು ಡ್ರಾ ಮಾಡಿದ್ದರು. ಈ ಕೆಲಸವನ್ನೂ ಇದೇ ವೀರಭದ್ರ ಮಾಡಿಕೊಟ್ಟಿದ್ದ. ಹಣ ಕೈಗೆ ಬರುತ್ತಿದ್ದಂತೆ ಅಜ್ಜಿಯ ಬಳಿ ಹೋಗಿ, "ನನಗೆ ಅರ್ಜೆಂಟ್ ಕೆಲಸವಿದೆ, ಎರಡು ದಿನದಲ್ಲಿ ವಾಪಸ್ ಕೊಡುತ್ತೇನೆ" ಎಂದು ಹೇಳಿ ಆ ಹಣವನ್ನು ಕಿತ್ತುಕೊಂಡಿದ್ದ. ಆದರೆ ಎರಡು ದಿನ ಕಳೆದರೂ ಹಣ ವಾಪಸ್ ಕೊಡದೆ ಸತಾಯಿಸಲು ಶುರು ಮಾಡಿದ್ದ. ಒಂದು ವಾರದ ನಂತರ ಗೌರಮ್ಮ ಅವರು ಆತನನ್ನು ಗಟ್ಟಿಯಾಗಿ ಹಣ ಕೇಳಲು ಶುರು ಮಾಡಿದಾಗ, ಈ ಪಾಪಿ ಆಕೆಯನ್ನು ಮುಗಿಸಲು ಪ್ಲಾನ್ ಮಾಡಿದ್ದ.

ಉಸಿರುಗಟ್ಟಿಸಿ ಕೊ*ಲೆ.. ಶೌಚಾಲಯದ ಗುಂಡಿಯೇ ಸ್ಮಶಾನ!

ಕಳೆದ 15 ದಿನಗಳ ಹಿಂದೆ ಗೌರಮ್ಮ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಸಮಯ ಸಾಧಿಸಿ ಹೋದ ವೀರಭದ್ರ, ಆಕೆಯ ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಈ ಕಿರಾತಕ, ಯಾರಿಗೂ ಅನುಮಾನ ಬರಬಾರದು ಎಂದು ಮನೆಯ ಶೌಚಾಲಯದ ಯುಜಿಡಿ (ಒಳಚರಂಡಿ) ಗುಂಡಿಯಲ್ಲಿ ಅಜ್ಜಿಯ ಮೃತದೇಹವನ್ನು ಹಾಕಿ ಮಣ್ಣು ಮುಚ್ಚಿ ಎಸ್ಕೇಪ್ ಆಗಿದ್ದ.

ಪೊಲೀಸರಿಗೆ ಅನುಮಾನ ಬಂದಿದ್ದು ಎಲ್ಲಿ?

ಅಜ್ಜಿ ಕಾಣೆಯಾಗಿ 15 ದಿನಗಳಾದರೂ ಪತ್ತೆಯಾಗದಿದ್ದಾಗ, ಆಕೆಯ ಮಕ್ಕಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಅಜ್ಜಿಯ ಜೊತೆ ಯಾವಾಗಲೂ ಇರುತ್ತಿದ್ದ ವೀರಭದ್ರ ಕೂಡ ನಾಪತ್ತೆಯಾಗಿರುವುದು ಗೊತ್ತಾಯಿತು. ಪೊಲೀಸರ ಅನುಮಾನ ತಕ್ಷಣ ಆತನ ಮೇಲೆ ತಿರುಗಿತು. ಕೂಡಲೇ ಕಾರ್ಯಾಚರಣೆ ನಡೆಸಿ ಆತನನ್ನು ಪತ್ತೆ ಹಚ್ಚಿ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಆತ ಮಾಡಿದ ಪಾಪದ ಕೆಲಸ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಮೃತದೇಹ ಹೊರಕ್ಕೆ: ಗ್ರಾಮಸ್ಥರ ಆಕ್ರೋಶ

ಆರೋಪಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಶೌಚಾಲಯದ ಗುಂಡಿಯನ್ನು ಅಗೆದು ಗೌರಮ್ಮ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ವೀರಭದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. "ನಂಬಿದವರನ್ನೇ ಈ ರೀತಿ ಕೊ*ಲ್ಲುವುದಾದರೆ ಇನ್ನು ಯಾರನ್ನು ನಂಬಬೇಕು?" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿರಿಯ ನಾಗರಿಕರು ಅದರಲ್ಲೂ ಒಬ್ಬರೇ ಇರುವವರು ಜಾಗರೂಕರಾಗಿರಬೇಕು. ಯಾರನ್ನೋ ಅತಿಯಾಗಿ ನಂಬುವ ಮೊದಲು ಹತ್ತಿರದ ಸಂಬಂಧಿಕರಿಗೆ ಅಥವಾ ನೆರೆಹೊರೆಯವರಿಗೆ ಮಾಹಿತಿ ನೀಡುವುದು ಒಳ್ಳೆಯದು. ಅಜ್ಜಿಯ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಕೊಲೆ ಮಾಡಿದ ಈ ವೀರಭದ್ರನಿಗೆ ಕಠಿಣ ಶಿಕ್ಷೆಯಾಗಲಿ ಎನ್ನುವುದೇ ಎಲ್ಲರ ಆಶಯ. 

Latest News