ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದ ಚಿನ್ನದಂಗಡಿ ದರೋಡೆ ಪ್ರಕರಣವು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣವನ್ನು ಬಿಚ್ಚಿಡಲು ಮೈಸೂರು ಪೊಲೀಸರು ಬೃಹತ್ ಮಟ್ಟದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೈಸೂರು ಪೊಲೀಸರು ಆರೋಪಿಗಳ ಸೆರೆಗೆ ಒಟ್ಟು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪ್ರತಿಯೊಂದು ತಂಡವನ್ನು ಒಬ್ಬ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಐದು ಮಂದಿ ಪೊಲೀಸರು ಮುನ್ನಡೆಸುತ್ತಿದ್ದಾರೆ. ಈ ತಂಡಗಳು ಆರೋಪಿಗಳ ಹಾದಿ ಪತ್ತೆಹಚ್ಚಲು ವಿವಿಧ ದಿಕ್ಕುಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಚಿನ್ನದಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಮುಖಗಳು ಪತ್ತೆಯಾಗಿವೆ. ಆ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರು ಹಾಗೂ ವ್ಯಾಪಾರಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 18 ಚಕ್‌ಪೋಸ್ಟ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಎಲ್ಲಾ ಕಡೆಗಳಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಆರೋಪಿಗಳು ಕೇರಳದ ಕಡೆಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ದರೋಡೆಗೆ ಚಿನ್ನದಂಗಡಿ ಮ್ಯಾನೇಜರ್ ಹಾಗೂ ಸಿಬ್ಬಂದಿ ಕೈವಾಡವಿದೆಯೇ ಎಂಬುದರ ಮೇಲೂ ತನಿಖೆ ನಡೆಯುತ್ತಿದೆ. ಆರೋಪಿಗಳು ಪರಿಚಿತರೇ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಯಾವುದೇ ಸುಳಿವು ತಪ್ಪಿಸಿಕೊಳ್ಳದಂತೆ ಕಾರ್ಯಾಚರಣೆ ಮುಂದುವರಿಸುತ್ತಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಸಂದೇಹಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ದರೋಡೆ ಪ್ರಕರಣದ ತನಿಖೆಗೆ ಸಹಕಾರ ನೀಡುವಂತೆ ವ್ಯಾಪಾರಿಗಳು ಹಾಗೂ ಸ್ಥಳೀಯರನ್ನು ವಿನಂತಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದ ಚಿನ್ನದಂಗಡಿ ದರೋಡೆ ಪ್ರಕರಣದಲ್ಲಿ ಸಿಸಿ ಟಿವಿ ದೃಶ್ಯಗಳು ಪ್ರಮುಖ ಸುಳಿವನ್ನು ಒದಗಿಸಿವೆ. ಆರೋಪಿಗಳ ಭಾವಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ಆಧಾರದ ಮೇಲೆ ಪೊಲೀಸರು ತಲಾಶ್ ಆರಂಭಿಸಿದ್ದಾರೆ. ಈ ದರೋಡೆಯಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದ ಐವರು ಆರೋಪಿಗಳು ಭಾಗಿಯಾಗಿದ್ದಾರೆ. ಕೈಯಲ್ಲಿ ಎರಡೆರಡು ಪಿಸ್ತೂಲ್ ಹಿಡಿದು ಅಂಗಡಿಗೆ ಒಳನುಗ್ಗಿದ ಅವರು, ಕ್ಷಣಾರ್ಧದಲ್ಲಿ ಚಿನ್ನಾಭರಣ ಕದ್ದು ಗಾಳಿಯಲ್ಲಿ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಬೈಪಾಸ್ ರಸ್ತೆಯ ಮೂಲಕ ಮಡಿಕೇರಿ ಕಡೆಗೆ ತೆರಳಿರುವ ಮಾಹಿತಿ ದೊರೆತಿದೆ.
ದುಷ್ಕರ್ಮಿಗಳ ನಡೆ ಪೊಲೀಸರಿಗೆ ಅನುಮಾನ ಹುಟ್ಟಿಸಿದ್ದು, ಕೇರಳ ಮೂಲದ ಮಾಲೀಕರಾದ ಕಾರಣ ಆರೋಪಿಗಳು ಕೇರಳದತ್ತ ತೆರಳಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗಾಗಿ ಮೈಸೂರು ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಒಂದು ತಂಡ ಕೇರಳದತ್ತ, ಮತ್ತೊಂದು ಮಡಿಕೇರಿಯತ್ತ, ಮೂರನೇ ತಂಡ ಮೈಸೂರು ಸುತ್ತಲೂ, ನಾಲ್ಕನೇ ತಂಡ ಹಾಸನದತ್ತ, ಐದನೇ ತಂಡ ಹುಣಸೂರಿನ ಚಿನ್ನದ ಅಂಗಡಿ ಸುತ್ತಮುತ್ತ ತನಿಖೆ ನಡೆಸುತ್ತಿದೆ. ಈ ದರೋಡೆ ಪ್ರಕರಣವು ಮೈಸೂರಿನ ವ್ಯಾಪಾರ ವಲಯದಲ್ಲಿ ಆತಂಕವನ್ನು ಉಂಟುಮಾಡಿದೆ. ಚಿನ್ನದಂಗಡಿಗಳಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸುವ ಅಗತ್ಯವನ್ನು ಪೊಲೀಸರು ಸೂಚಿಸಿದ್ದಾರೆ.