ಸಿನಿಮಾಗಳಲ್ಲಿ ಅತ್ತೆ-ಅಳಿಯನ ಜಗಳ ನೋಡಿರುತ್ತೀರಿ, ಆದರೆ ಬೆಳಗಾವಿಯಲ್ಲಿ ನಡೆದ ಈ ಘಟನೆ ಮಾತ್ರ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ತನ್ನಿಬ್ಬರು ಹೆಣ್ಣುಮಕ್ಕಳ ಮದುವೆ ಸಾಲ ತೀರಿಸಲು ದಾರಿ ಕಾಣದ ಅತ್ತೆಯೊಬ್ಬರು, ಸ್ವತಃ ತನ್ನ ಹಿರಿಯ ಅಳಿಯನ ಮನೆಯಲ್ಲೇ ಕೈಚಳಕ ತೋರಿಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ!
ಏನಿದು ಘಟನೆ?
ಬೆಳಗಾವಿಯ ಪಿರಣವಾಡಿ ನಿವಾಸಿ ಉಜ್ವಲಾ ಕಮ್ಮಾರ ಎಂಬುವವರೇ ಈ ಕೃತ್ಯ ಎಸಗಿದ ಅತ್ತೆ. ಈಕೆಗೆ ಮೂವರು ಹೆಣ್ಣುಮಕ್ಕಳು. ಹಿರಿಯ ಮಗಳ ಮದುವೆಯಾಗಿ ಆಕೆ ಪತಿ ಮತ್ತು ಮಕ್ಕಳೊಂದಿಗೆ ಸುಖವಾಗಿದ್ದಳು. ಆದರೆ, ಉಳಿದಿಬ್ಬರು ಹೆಣ್ಣುಮಕ್ಕಳ ಮದುವೆ ಮಾಡಲು ಉಜ್ವಲಾ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಾಲ ತೀರಿಸಲು ಪ್ಲಾನ್ ಮಾಡಿದ ಅತ್ತೆ, ಕಣ್ಣಿಟ್ಟಿದ್ದು ತನ್ನ ಹಿರಿಯ ಅಳಿಯ ಕಷ್ಟಪಟ್ಟು ಸಂಪಾದಿಸಿ ಮಾಡಿಸಿದ್ದ ಚಿನ್ನದ ಮೇಲೆ!
ದಂಪತಿ ಇಲ್ಲದ ಸಮಯ ನೋಡಿ ಸ್ಕೆಚ್!
ಇತ್ತೀಚೆಗೆ ಹಿರಿಯ ಅಳಿಯ ಮತ್ತು ಮಗಳು ತಮ್ಮ ಸ್ನೇಹಿತರ ಮದುವೆಗೆ ಹೋಗಬೇಕಿತ್ತು. "ಮನೆ ಖಾಲಿ ಇರುವುದು ಬೇಡ, ನೀವು ಬಂದು ಮನೆಯಲ್ಲಿರಿ" ಎಂದು ಅಳಿಯ ತನ್ನ ಅತ್ತೆ ಉಜ್ವಲಾ ಅವರನ್ನೇ ಕರೆಸಿ ಮನೆಯಲ್ಲಿ ಬಿಟ್ಟಿದ್ದ. ಆದರೆ ಅತ್ತೆ ಮಾತ್ರ ಇದನ್ನು ಸುವರ್ಣಾವಕಾಶ ಎಂದು ಭಾವಿಸಿದರು. ತನ್ನ ಸಂಬಂಧಿ ಶಿವಾ ಅಪ್ಪಯನವರ ಎಂಬಾತನ ಜೊತೆ ಸೇರಿ ಅಳಿಯನ ಮನೆಯಲ್ಲಿದ್ದ ಬೀರು ಒಡೆದಿದ್ದಾರೆ.
ಮನೆಯಲ್ಲಿದ್ದ ಮಗಳ ಚಿನ್ನದ ಬಳೆ, ಉಂಗುರ, ನೆಕ್ಲೇಸ್, ಗಂಟನ್ ಸೇರಿದಂತೆ ಸುಮಾರು 16.57 ಲಕ್ಷ ರೂಪಾಯಿ ಮೌಲ್ಯದ 110 ಗ್ರಾಂ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.
ಅಳಿಯನಿಗೆ ಸಂಶಯ, ಅತ್ತೆಯ ಹೈಡ್ರಾಮಾ!
ದಂಪತಿ ಮದುವೆ ಮುಗಿಸಿ ಮನೆಗೆ ಬಂದಾಗ ಬೀರು ಖಾಲಿಯಾಗಿರುವುದನ್ನು ಕಂಡು ದಿಗಿಲು ಬಿದ್ದಿದ್ದಾರೆ. ಮನೆಯಲ್ಲೇ ಇದ್ದ ಅತ್ತೆಯನ್ನು ವಿಚಾರಿಸಿದಾಗ, "ನನಗೇನೂ ಗೊತ್ತಿಲ್ಲ, ಯಾರೋ ಕಳ್ಳರು ಬಂದಿರಬೇಕು" ಎಂದು ಅತ್ತೆ ಉಜ್ವಲಾ ಭರ್ಜರಿ ನಾಟಕವಾಡಿದ್ದಾರೆ. ಅತ್ತೆಯ ಮಾತನ್ನು ನಂಬದ ಅಳಿಯ, ತಕ್ಷಣವೇ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಬಣ್ಣ ಬಯಲು!
ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದಾಗ ಅತ್ತೆಯ ನಡವಳಿಕೆ ಮೇಲೆ ಅನುಮಾನ ಬಂದಿದೆ. ಮೊದಮೊದಲು ಪೊಲೀಸರ ಮುಂದೆಯೂ ತನಗೇನೂ ತಿಳಿಯದು ಎಂದು ಹೈಡ್ರಾಮಾ ಮಾಡಿದ ಉಜ್ವಲಾ, ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬಾಯಿಬಿಟ್ಟಿದ್ದಾರೆ. ತನ್ನಿಬ್ಬರು ಹೆಣ್ಣುಮಕ್ಕಳ ಮದುವೆ ಸಾಲ ತೀರಿಸಲು ಈ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ತಕ್ಷಣವೇ ಉಜ್ವಲಾ ಮತ್ತು ಆಕೆಗೆ ಸಾಥ್ ನೀಡಿದ ಶಿವಾ ಅಪ್ಪಯನವರನ್ನು ಬಂಧಿಸಿ, ಅವರಿಂದ ಕಳುವಾಗಿದ್ದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಂಬಿ ಮನೆ ಕಾಯಲು ಬಿಟ್ಟ ಅತ್ತೆಯೇ ಇಂತಹ ಕೆಲಸ ಮಾಡಿದ್ದು ನೋಡಿ ಅಳಿಯ ಮತ್ತು ಮಗಳು ಕಂಗಾಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಈ ಘಟನೆಗೆ ಸರಿಯಾಗಿ ಒಪ್ಪುತ್ತದೆ. ಸದ್ಯಕ್ಕೆ ಈ ಖತರ್ನಾಕ್ ಅತ್ತೆ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.