Mar 23, 2026 Languages : ಕನ್ನಡ | English

ಖಾಕಿ ಉಡುಪಿನ ಹಿಂದಿದೆ ಕಾಮುಕ ಮುಖ - ಅಪ್ರಾಪ್ತೆಗೂ ಬೆದರಿಕೆ ಹಾಕಿದ ಇನ್ಸ್‌ಪೆಕ್ಟರ್ ಆಡಿಯೋ ವೈರಲ್!!

ಸಮಾಜದಲ್ಲಿ ಶಾಂತಿ ಮತ್ತು ಸುಸ್ಥಿತಿಯನ್ನು ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಸಾಮಾನ್ಯ ಜನರ ಸ್ಥಿತಿ ಏನಾಗಬೇಡ? ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಈಗ ಇಡೀ ಪೊಲೀಸ್ ಇಲಾಖೆಯನ್ನೇ ಮುಜುಗರಕ್ಕೀಡು ಮಾಡಿದೆ. ದೂರು ನೀಡಲು ಬಂದ ಮಹಿಳೆಯರಿಗೆ ನ್ಯಾಯ ಒದಗಿಸುವ ಬದಲು, ಅವರನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಈ ಅಧಿಕಾರಿಯ ಅಸಲಿ ಮುಖ ಈಗ ಬಯಲಾಗಿದೆ.

ಗೃಹ ಸಚಿವರಿಗೇ 50 ಲಕ್ಷ ಕೊಟ್ಟಿದ್ದೀನಿ ಅಂದಿದ್ದ ಇನ್ಸ್‌ಪೆಕ್ಟರ್
ಗೃಹ ಸಚಿವರಿಗೇ 50 ಲಕ್ಷ ಕೊಟ್ಟಿದ್ದೀನಿ ಅಂದಿದ್ದ ಇನ್ಸ್‌ಪೆಕ್ಟರ್

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್ ಪಿ.ಜಿ., ಪೊಲೀಸ್ ಠಾಣೆಗೆ ಬರುವ ಅಸಹಾಯಕ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಕೌಟುಂಬಿಕ ಕಲಹ ಅಥವಾ ಇತರೆ ದೂರುಗಳನ್ನು ಹೊತ್ತು ಬರುವ ಮಹಿಳೆಯರ ದೌರ್ಬಲ್ಯವನ್ನು ಈತ ಬಂಡವಾಳ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಒಂದು ಪ್ರಕರಣದಲ್ಲಿ, ಸಂತ್ರಸ್ತ ಮಹಿಳೆಯ ಪತಿಯನ್ನು ಸುಳ್ಳು ಕೇಸ್‌ನಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದ ಈ ಇನ್ಸ್‌ಪೆಕ್ಟರ್, ಆತನನ್ನು ಬಿಡುಗಡೆ ಮಾಡಲು "ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ಹಣ ನೀಡಬೇಕು" ಎಂದು ಬೇಡಿಕೆಯಿಟ್ಟಿದ್ದನೆಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ತಾನು ಈ ಹುದ್ದೆ ಪಡೆಯಲು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ನೀಡಿದ್ದೇನೆ, ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅತ್ಯಂತ ಅಹಂಕಾರದಿಂದ ವರ್ತಿಸುತ್ತಿದ್ದ ಎನ್ನಲಾಗಿದೆ.

ಈ ಇನ್ಸ್‌ಪೆಕ್ಟರ್‌ನ ಕ್ರೌರ್ಯ ಇಷ್ಟಕ್ಕೇ ನಿಂತಿಲ್ಲ. ಈತ ಈ ಹಿಂದೆ ಲೈಂಗಿಕವಾಗಿ ಬಳಸಿಕೊಂಡಿದ್ದ ಮಹಿಳೆಯೊಬ್ಬರ ಅಪ್ರಾಪ್ತ ಮಗಳ ಮೇಲೂ ಕಣ್ಣು ಹಾಕಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಸಂತ್ರಸ್ತ ಮಹಿಳೆಗೆ ಫೋನ್ ಮಾಡಿ, ಆಕೆಯ ಮಗಳ ವಿಷಯವಾಗಿ ಬೆದರಿಕೆ ಹಾಕಿದ್ದಾನೆ. "ನಿನ್ನ ಮಗಳು ಓದುತ್ತಿರುವ ಕಾಲೇಜಿಗೆ ಬರುತ್ತೇನೆ" ಎಂದು ಆಕೆಯನ್ನು ಭಯಪಡಿಸುವ ಸಂಭಾಷಣೆಯ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂತಹ ಕಾಮುಕ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ ಈ ಅಧಿಕಾರಿಯ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಆರಂಭದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ಹಿರಿಯ ಅಧಿಕಾರಿಗಳೇ ಈತನನ್ನು ರಕ್ಷಿಸುತ್ತಿದ್ದಾರೆ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ, ಈಗ ಆಡಿಯೋ ವೈರಲ್ ಆಗಿ ಪ್ರಕರಣ ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಮಿಷನರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಯಾರಾದರೂ ಮಹಿಳೆಯರು ಈ ಅಧಿಕಾರಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ. ನಾವು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ. ಆದರೆ ಸಂತ್ರಸ್ತ ಮಹಿಳೆಯು ಈಗಾಗಲೇ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ರಕ್ಷಿಸಬೇಕಾದವರೇ ದೌರ್ಜನ್ಯ ಎಸಗಿದರೆ ಜನರ ನಂಬಿಕೆ ಕುಸಿಯುತ್ತದೆ. ಇನ್ಸ್‌ಪೆಕ್ಟರ್ ಸಂದೇಶ್ ಮೇಲಿರುವ ಆರೋಪಗಳು ಸಾಬೀತಾದರೆ, ಅದು ಕೇವಲ ಒಬ್ಬ ಅಧಿಕಾರಿಯ ವೈಫಲ್ಯವಲ್ಲ, ಬದಲಾಗಿ ಇಡೀ ಇಲಾಖೆಗೆ ಕಪ್ಪು ಚುಕ್ಕೆಯಾಗಲಿದೆ. ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Latest News