ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುವಾಗ ತನ್ನ ಆಕರ್ಷಕ ಕಣ್ಣುಗಳಿಂದಲೇ ಇಡೀ ದೇಶದ ಗಮನ ಸೆಳೆದಿದ್ದ ಮೋನಿ ಭೋಂಸ್ಲೆ ಅಲಿಯಾಸ್ ಮೋನಾಲಿಸಾ, ಇದೀಗ ತನ್ನ ಪ್ರೇಮ ಜೀವನದ ರಕ್ಷಣೆಗಾಗಿ ಕೇರಳ ಪೊಲೀಸರ ಮೊರೆ ಹೋಗಿದ್ದಾರೆ. ತಾನು ಫರ್ಮಾನ್ ಖಾನ್ ಎಂಬುವವರನ್ನು ಪ್ರೀತಿಸುತ್ತಿದ್ದು, ತಮ್ಮ ಕುಟುಂಬದ ವಿರೋಧದಿಂದಾಗಿ ರಕ್ಷಣೆ ನೀಡುವಂತೆ ಅವರು ತಿರುವನಂತಪುರಂನ ತಂಬನೂರು ಪೊಲೀಸ್ ಠಾಣೆಗೆ ತೆರಳಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಮೂಲದ ಮೋನಿ ಮತ್ತು ಮಹಾರಾಷ್ಟ್ರದ ಫರ್ಮಾನ್ ಖಾನ್ ಕಳೆದ ಒಂದೂವರೆ ವರ್ಷಗಳಿಂದ ಫೇಸ್‌ಬುಕ್ ಮೂಲಕ ಪರಿಚಯವಾಗಿ, ಪ್ರೀತಿಸುತ್ತಿದ್ದರು. ಆದರೆ, ಈ ಸಂಬಂಧಕ್ಕೆ ಮೋನಿ ಅವರ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮೋನಿ ಅವರ ತಂದೆ ಜೈ ಸಿಂಗ್ ಭೋಂಸ್ಲೆ ಅವರು, ಆಕೆಯನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹ ಮಾಡಲು ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ಮೋನಿ, ಫರ್ಮಾನ್ ಅವರೊಂದಿಗೆ ಬದುಕುವ ನಿರ್ಧಾರ ಕೈಗೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದರು.
The #KeralaStory keeps proving itself true.
— നചികേതസ് / Nachiketas (@nach1keta) March 11, 2026
Monalisa Bhosle from MP — viral KumbhMela girl— has arrived at the Thiruvananthapuram Police Station with her Abdul, Farman Khan from Maharashtra, seeking protection for their wedding.
The two met online & in relationship for 1.5 years. pic.twitter.com/9IlsowOWjz
ಸದ್ಯ ಮೋನಿ ಅವರು ಬಾಬಿ ಚೆಮ್ಮಣ್ಣೂರು ಜ್ಯುವೆಲ್ಲರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುತ್ತಿದ್ದು, ಸಿನಿಮಾ ಶೂಟಿಂಗ್ ನಿಮಿತ್ತ ಕೇರಳದಲ್ಲಿದ್ದರು. ಶೂಟಿಂಗ್ ಮುಗಿದ ತಕ್ಷಣ, ತನ್ನ ಪ್ರಿಯಕರನೊಂದಿಗೆ ನೇರವಾಗಿ ತಂಬನೂರು ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದರು. ಈ ವೇಳೆ ಪೊಲೀಸರು ಆಕೆಯ ತಂದೆಯನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದರು. ಮೋನಿಗೆ ಈಗ 18 ವರ್ಷ ತುಂಬಿರುವುದರಿಂದ, ಕಾನೂನು ಪ್ರಕಾರ ತನಗೆ ಇಷ್ಟವಾದವರೊಂದಿಗೆ ಬದುಕುವ ಹಕ್ಕು ಆಕೆಗಿದೆ ಎಂದು ಪೊಲೀಸರು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ, ಮೋನಿ ಅವರು ತನ್ನ ಪ್ರಿಯಕರ ಫರ್ಮಾನ್ ಅವರೊಂದಿಗೆ ತೆರಳಿದರು.
ಒಂದು ಕಾಲದಲ್ಲಿ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೋನಿ ಅವರ ಜೀವನವೇ ಬದಲಾಗಿಹೋಗಿದೆ. ಆಕೆಯ ಸೌಂದರ್ಯಕ್ಕೆ ಸೋತ ನೆಟ್ಟಿಗರು ಆಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಮಾಡಿದ್ದರು. ಈ ವೈರಲ್ ಹವಾ ಅವರಿಗೆ ಸಿನಿಮಾ ರಂಗದ ಬಾಗಿಲು ತೆರೆಯಿತು. ಸನೋಜ್ ಮಿಶ್ರಾ ನಿರ್ದೇಶನದ 'ದಿ ಡೈರಿ ಆಫ್ ಮಣಿಪುರ್' ಎಂಬ ಬಾಲಿವುಡ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಮೋನಿ ಇದೀಗ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಮಾಡೆಲಿಂಗ್ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯರಾಗಿದ್ದು, ಇದೀಗ ತನ್ನ ವೈಯಕ್ತಿಕ ಜೀವನದ ನಿರ್ಧಾರದಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಈ ಘಟನೆಯು ಕೌಟುಂಬಿಕ ಒತ್ತಡ ಮತ್ತು ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯದ ಕುರಿತು ಮತ್ತೊಮ್ಮೆ ಸಾಮಾಜಿಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.