ಈಗಿನ ಕಾಲದಲ್ಲಿ ಎಲ್ಲರಂತೆ ಮಾಮೂಲಿಯಾಗಿ ಬದುಕೋದಕ್ಕಿಂತ, ಸಖತ್ ಆಗಿ ದುಡ್ಡು ಮಾಡಬೇಕಂದ್ರೆ ಸ್ವಲ್ಪ ಡಿಫರೆಂಟ್ ಆದ ಬುದ್ಧಿವಂತಿಕೆ ಇರಲೇಬೇಕು. ಹೆಚ್ಚಿನವರು ಕೈಯಲ್ಲೊಂದು ಕೆಲಸ ಇಲ್ಲದಿದ್ದರೆ ಸ್ವಂತ ಬ್ಯುಸಿನೆಸ್ ಮಾಡಲು ಯೋಚಿಸುತ್ತಾರೆ. ಆದರೆ ಉತ್ತರ ಪ್ರದೇಶದ ಮೀರತ್‌ನ ಈ ವ್ಯಕ್ತಿ ಮಾತ್ರ ಯಾರೂ ಯೋಚಿಸದ ಕಡಕ್ ಐಡಿಯಾ ಒಂದನ್ನು ಮಾಡಿಕೊಂಡಿದ್ದಾರೆ. ತಮ್ಮ ಬಳಿಯಿದ್ದ ಒಂದು ಖಾಲಿ ಜಾಗವನ್ನು ಇವರು ಬಂಡವಾಳವನ್ನಾಗಿ ಮಾಡಿಕೊಂಡು, ಅಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ತಿಂಗಳಿಗೆ ಲಕ್ಷ ಲಕ್ಷ ಬಾಚುತ್ತಿದ್ದಾರೆ.
ಖಾಲಿ ಸೈಟು ಅಥವಾ ಜಾಗದಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಂಪಾದನೆ ಮಾಡಲು ಸಾಧ್ಯನಾ? ಅಂತ ಮೂಗಿನ ಮೇಲೆ ಬೆರಳಿಡುವವರಿಗೆ ಈ ಸ್ಟೋರಿ ಪಕ್ಕಾ ಉತ್ತರ ನೀಡುತ್ತದೆ. ಈ ವ್ಯಕ್ತಿಯ ಯಶಸ್ಸಿನ ಸೀಕ್ರೆಟ್ ಬ್ಯುಸಿನೆಸ್ ಪ್ಲಾನ್ ಬಗ್ಗೆ ಯುವತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.
ಬೇಸಿಗೆಯಲ್ಲಿ ತಿಂಗಳಿಗೆ 22 ಲಕ್ಷ ಆದಾಯ
ಪೂಜಾ (@poojaofficial5) ಹೆಸರಿನ ಕಂಟೆಂಟ್ ಕ್ರಿಯೇಟರ್ ಯುವತಿಯೊಬ್ಬರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತನ್ನ ಸ್ನೇಹಿತನ ಈ ಕ್ರಿಯೇಟಿವ್ ಬ್ಯುಸಿನೆಸ್ ಐಡಿಯಾವನ್ನು ಕಂಪ್ಲೀಟ್ ಆಗಿ ರಿವೀಲ್ ಮಾಡಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿರುವ (Meerut) ತನ್ನ ಸ್ನೇಹಿತ, ಕೇವಲ ಒಂದು ಸ್ವಿಮ್ಮಿಂಗ್ ಪೂಲ್ ಬ್ಯುಸಿನೆಸ್‌ನಿಂದ ಬೇಸಿಗೆಯ ಸೀಸನ್‌ನಲ್ಲಿ ತಿಂಗಳಿಗೆ ಬರೋಬ್ಬರಿ 22 ಲಕ್ಷ ರೂಪಾಯಿಗಿಂತ ಹೆಚ್ಚು ಇನ್ಕಮ್ ತೆಗಿತಾರೆ! ಇನ್ನುಳಿದ ಸಾಮಾನ್ಯ ತಿಂಗಳುಗಳಲ್ಲೂ ಸಹ ಅವರಿಗೆ ಯಾವುದೇ ಟೆನ್ಷನ್ ಇಲ್ಲದೆ ತಿಂಗಳಿಗೆ 7.5 ಲಕ್ಷ ರೂಪಾಯಿವರೆಗೆ ನಿರಂತರ ಆದಾಯ ಬರುತ್ತದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಪೂಜಾ ಆಸಕ್ತಿದಾಯಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. "ನಾನು ನನ್ನ ಫ್ರೆಂಡ್‌ನ ಫಾರ್ಮ್‌ಹೌಸ್‌ಗೆ ಹೋದಾಗ ಅಲ್ಲಿ ದೊಡ್ಡದೊಂದು ಸ್ವಿಮ್ಮಿಂಗ್ ಪೂಲ್ ಇರುವುದನ್ನು ಗಮನಿಸಿದೆ. ಸುಮ್ಮನೆ ಕುತೂಹಲಕ್ಕೆ ಅವನ ಹತ್ತಿರ ಹೋಗಿ, 'ಇದೇನಾದ್ರೂ ದುಡ್ಡು ಮಾಡ್ತಿದ್ಯಾ ಅಥವಾ ಸುಮ್ನೆ ನಿನ್ನ ಹವ್ಯಾಸಕ್ಕಾಗಿ ಮಾಡಿದ್ದೀಯಾ?' ಎಂದು ಕೇಳಿದೆ. ಅದಕ್ಕೆ ಆತ ಮಂದಸ್ಮಿತನಾಗಿ, 'ಪರವಾಗಿಲ್ಲ, ಲೈಫ್ ಮಸ್ತ್ ಆಗಿ ನಡೀತಿದೆ' ಅಂತ ನಗುತ್ತಾ ಆರಾಮಾಗಿ ಉತ್ತರಿಸಿದ. ಆಮೇಲೆ ಸಿಕ್ಕ ಲೆಕ್ಕಾಚಾರ ಕೇಳಿ ನಾನಂತೂ ಶಾಕ್ ಆದೆ" ಎಂದು ಪೂಜಾ ಹೇಳಿದ್ದಾರೆ.
ದಿನಕ್ಕೆ 750 ಜನ, ಕೇವಲ 100 ರೂಪಾಯಿ ಟಿಕೆಟ್
ಮೀರತ್‌ನ NH 58 ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಫಾರ್ಮ್‌ಹೌಸ್ ಇದೆ. ಹೈವೇ ಪಕ್ಕದಲ್ಲೇ ಇರುವುದರಿಂದ ಇಲ್ಲಿಗೆ ಜನ ಬರುವುದು ತುಂಬಾ ಈಸಿ. ಬೇಸಿಗೆಯ ಕಡು ಬಿಸಿಲಿನಲ್ಲಿ ತಂಪು ಅನುಭವ ಪಡೆಯಲು ಈ ಪೂಲ್‌ಗೆ ದಿನಕ್ಕೆ ಸರಾಸರಿ 700 ರಿಂದ 800 ಜನ ಭೇಟಿ ನೀಡುತ್ತಾರಂತೆ. ಇಲ್ಲಿ ಒಬ್ಬರಿಗೆ ಎಂಟ್ರಿ ಟಿಕೆಟ್ ದರ ಇಟ್ಟಿರುವುದು ಕೇವಲ 100 ರೂಪಾಯಿ ಮಾತ್ರ.
ಒಂದು ದಿನಕ್ಕೆ ಸರಾಸರಿ 750 ಜನ ಇಲ್ಲಿಗೆ ಬಂದು ಸ್ವಿಮ್ಮಿಂಗ್ ಮಾಡಿದರೂ ಸಹ, ದಿನಕ್ಕೆ ಬರೋಬ್ಬರಿ 75,000 ರೂಪಾಯಿ ಕಲೆಕ್ಷನ್ ಆಗುತ್ತದೆ. ಈ ಲೆಕ್ಕದಲ್ಲಿ ತಿಂಗಳಿಗೆ ಕೌಂಟ್ ಮಾಡಿದರೆ ಬರೋಬ್ಬರಿ 22.5 ಲಕ್ಷ ರೂಪಾಯಿ ಆದಾಯ ಜೇಬು ಸೇರುತ್ತದೆ. ಇನ್ನು ಬೇಸಿಗೆ ಮುಗಿದ ಮೇಲಿನ ಸಾಮಾನ್ಯ ದಿನಗಳಲ್ಲೂ ಪ್ರತಿದಿನ ಸುಮಾರು 250 ಜನ ಇಲ್ಲಿಗೆ ಬರುತ್ತಾರೆ. ಅಂದರೆ ದಿನಕ್ಕೆ 25,000 ರೂಪಾಯಿಯಂತೆ ತಿಂಗಳಿಗೆ ಆರಾಮಾಗಿ 7.5 ಲಕ್ಷ ರೂಪಾಯಿ ಗಳಿಕೆ ಗ್ಯಾರಂಟಿ.
ಮೇಂಟೆನೆನ್ಸ್ ಖರ್ಚು ಕಮ್ಮಿ, ನೀರೂ ವೇಸ್ಟ್ ಮಾಡಲ್ಲ
ಎಲ್ಲಕ್ಕಿಂತ ಮಜದಾದ ವಿಷಯ ಅಂದರೆ ಈ ಇಡೀ ಬ್ಯುಸಿನೆಸ್ ಅನ್ನು ಮ್ಯಾನೇಜ್ ಮಾಡಲು ಅವರು ದೊಡ್ಡ ದೊಡ್ಡ ಆಫೀಸ್ ಅಥವಾ ಜಾಸ್ತಿ ಜನ ಸಂಬಳದ ಆಳುಗಳನ್ನು ಇಟ್ಟುಕೊಂಡಿಲ್ಲ. ಇಡೀ ಫಾರ್ಮ್ ನೋಡಿಕೊಳ್ಳಲು ಮತ್ತು ಸೆಕ್ಯುರಿಟಿಗಾಗಿ ಕೇವಲ ಇಬ್ಬರು ಗಾರ್ಡ್‌ಗಳನ್ನು ಮಾತ್ರ ನೇಮಿಸಿಕೊಂಡಿದ್ದಾರೆ. ಅವರಿಬ್ಬರಿಗೂ ಸೇರಿ ತಿಂಗಳಿಗೆ ಕೇವಲ 20,000 ರೂಪಾಯಿ ಸಂಬಳ ಕೊಡುತ್ತಾರೆ.
ಇಷ್ಟೇ ಅಲ್ಲ, ಸ್ವಿಮ್ಮಿಂಗ್ ಪೂಲ್ ಅಂದಮೇಲೆ ನೀರನ್ನು ಆಗಾಗ ಬದಲಾಯಿಸಬೇಕಲ್ಲವೇ? ಇವರು ಆ ನೀರನ್ನು ಎಲ್ಲೂ ಚರಂಡಿಗೆ ಬಿಟ್ಟು ವೇಸ್ಟ್ ಮಾಡುವುದಿಲ್ಲ. ಬದಲಿಗೆ ಆ ನೀರನ್ನು ಸುತ್ತಮುತ್ತಲಿನ ರೈತರಿಗೆ ಕೃಷಿ ಕೆಲಸಗಳಿಗಾಗಿ ಮಾರಾಟ ಮಾಡುತ್ತಾರೆ! ಅಲ್ಲಿಂದಲೂ ಇವರಿಗೆ ಕಾಸು ಸಿಗುತ್ತದೆ. ಈ ಬ್ಯುಸಿನೆಸ್‌ನಿಂದ ಬಂದ ಲಾಭದಿಂದಲೇ ಇವರು ಈಗಾಗಲೇ ಕೆಲವು ಹೊಸ ವಾಹನಗಳನ್ನು ಕೂಡ ಖರೀದಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
Yesterday morning, I was walking towards my friend’s farm, where he has built a swimming pool.
— Pooja (@poojaofficial5) June 10, 2026
Just for fun, I asked him,
"Buddy, does this thing actually make any money, or are you just fulfilling a hobby ?"
He smiled and replied, "It’s doing okay, nothing extraordinary."… pic.twitter.com/7LczPCzAaJ
ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ
ಪೂಜಾ ಶೇರ್ ಮಾಡಿರುವ ಈ ಪೋಸ್ಟ್ ಸದ್ಯ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು (Views) ಪಡೆದುಕೊಂಡು ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೋ ಹಾಗೂ ಪೋಸ್ಟ್ ನೋಡಿದ ಜನ ಇವರ ಬ್ಯುಸಿನೆಸ್ ಮೈಂಡ್‌ಗೆ ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರ ಕಮೆಂಟ್ ಮಾಡಿ, "ನಿಮ್ಮ ಫ್ರೆಂಡ್ ನಿಜಕ್ಕೂ ಗ್ರೇಟ್, ಯಾವುದೇ ರಿಸ್ಕ್ ಇಲ್ಲದೆ ಮಸ್ತ್ ಆದಾಯ ಬರುವ ಸೋರ್ಸ್ ರೆಡಿ ಮಾಡಿಕೊಂಡಿದ್ದಾರೆ" ಎಂದಿದ್ದಾರೆ. ಇನ್ನು ಕೆಲವರು, "ಒಂದೇ ದಿನಕ್ಕೆ 700 ರಿಂದ 800 ಜನ ಬರೋದಕ್ಕೆ ಹೇಗೆ ಸಾಧ್ಯ? ಆ ಪೂಲ್ ಎಷ್ಟು ದೊಡ್ಡದಾಗಿದೆ?" ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, "ಖಾಲಿ ಜಾಗವನ್ನು ರಿಯಲ್ ಎಸ್ಟೇಟ್‌ಗೆ ಕೊಡುವ ಬದಲು ಈ ರೀತಿ ಯೂಸ್ ಮಾಡಿದ್ದು ಸಖತ್ ಐಡಿಯಾ" ಎಂದು ಹೊಗಳಿದ್ದಾರೆ.