ರಾಜ್ಯ ರಾಜಕೀಯದ ಇವತ್ತಿನ ಬಿಗ್ ಬ್ರೇಕಿಂಗ್ ಸುದ್ದಿ ದಾವಣಗೆರೆಯಿಂದ ಬಂದಿದೆ! ಬೆಂಗಳೂರಿನಲ್ಲಿ ಸಿಎಂ ಬದಲಾವಣೆ ಸರ್ಕಸ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿರುವ ಬೆನ್ನಲ್ಲೇ, ದಾವಣಗೆರೆಯಲ್ಲಿ ಸಚಿವ ಎಂ.ಸಿ.ಸುಧಾಕರ್ ಅವರು ಒಂದು ಭರ್ಜರಿ ಬಾಂಬ್ ಸಿಡಿಸಿದ್ದಾರೆ. ಹೌದು, "ಡಿ.ಕೆ.ಶಿವಕುಮಾರ್ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ" ಎಂದು ಸುಧಾಕರ್ ಅವರು ಅಧಿಕೃತವಾಗಿ ಘೋಷಣೆ ಮಾಡಿಯೇ ಬಿಟ್ಟಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊಸ ಸರ್ಕಾರ ರಚನೆ ಹಾಗೂ ಮುಂದಿನ ಕೆಪಿಸಿಸಿ ಅಧ್ಯಕ್ಷರು ಯಾರು ಅನ್ನೋದರ ಬಗ್ಗೆ ಕಂಪ್ಲೀಟ್ ಇನ್‌ಸೈಡ್ ಡಿಟೇಲ್ಸ್ ಬಿಚ್ಚಿಟ್ಟಿದ್ದಾರೆ.
ಸ್ವತಃ ಸಿದ್ದರಾಮಯ್ಯ ಅವರೇ ಡಿಕೆಶಿ ಹೆಸರು ಒಪ್ಪಿಕೊಂಡಿದ್ದಾರೆ!
"ನಾಳೆ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯುವ ಸಾಧ್ಯತೆ ಇದ್ದು, ಆ ಸಭೆಯಲ್ಲೇ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು," ಎಂದು ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ವಿಶೇಷ ಅಂದರೆ, ಡಿಕೆಶಿ ಸಿಎಂ ಆಗುವುದಕ್ಕೆ ಸಿದ್ದರಾಮಯ್ಯ ಅವರ ತೀವ್ರ ವಿರೋಧ ಇದೆ ಎಂಬ ವದಂತಿಗಳಿಗೆ ಸುಧಾಕರ್ ಬ್ರೇಕ್ ಹಾಕಿದ್ದಾರೆ. "ಸ್ವತಃ ಸಿದ್ದರಾಮಯ್ಯ ಅವರೇ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಡಿಕೆಶಿ ನೇತೃತ್ವದ ಸರ್ಕಾರಕ್ಕೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಹಾಗಾಗಿ ಡಿಕೆಶಿ ಸಿಎಂ ಆಗುವುದಕ್ಕೆ ಪಕ್ಷದಲ್ಲಿ ಯಾರದ್ದೂ ಯಾವುದೇ ವಿರೋಧ ಇಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ದಲಿತ ಸಿಎಂ ಕೂಗಿಗೆ ಸುಧಾಕರ್ ಹೇಳಿದ್ದೇನು?
ಇದೇ ವೇಳೆ ರಾಜ್ಯದಲ್ಲಿ ಕೇಳಿಬರುತ್ತಿರುವ 'ದಲಿತ ಮುಖ್ಯಮಂತ್ರಿ' ಕೂಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸಮುದಾಯಗಳಿಗೂ ಗೌರವ ಇದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಮತ್ತು ಪಕ್ಷದ ನಾಯಕರು ಎಲ್ಲರಿಗೂ ಸೂಕ್ತ ಅವಕಾಶ ಮಾಡಿಕೊಡಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಡಿಕೆಶಿ ನಾಯಕತ್ವಕ್ಕೆ ಎಲ್ಲರೂ ಒಮ್ಮತ ಸೂಚಿಸಿದ್ದಾರೆ," ಎಂದರು.
ಕೆಪಿಸಿಸಿ ಮುಂದಿನ ಸಾರಥಿ ಸತೀಶ್ ಜಾರಕಿಹೊಳಿ?
ಡಿಕೆಶಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಬೇಕಾಗುತ್ತದೆ. ಹಾಗಾದರೆ ಮುಂದಿನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಯಾರು? ಈ ಪ್ರಶ್ನೆಗೆ ಸಚಿವ ಸುಧಾಕರ್ ಅವರು ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಮುಂಚೂಣಿಗೆ ತಂದಿದ್ದಾರೆ.
ಜಾರಕಿಹೊಳಿ ಸಖತ್ ಯೋಗ್ಯ ನಾಯಕ:
"ಸತೀಶ್ ಜಾರಕಿಹೊಳಿ ಅವರು ಈ ರಾಜ್ಯದ ಅತ್ಯಂತ ಪ್ರಭಾವಿ ನಾಯಕರು. ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳುವ ಇಚ್ಛೆಯನ್ನು ಅವರೂ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಅದ್ಭುತ ಸಾಂಘಿಕ ಚಾತುರ್ಯ ಮತ್ತು ನಾಯಕತ್ವದ ಗುಣಗಳಿವೆ. ಇತ್ತೀಚೆಗೆ ನಡೆದ ಶಿಗ್ಗಾಂವಿ ಮತ್ತು ಬಾಗಲಕೋಟೆ ಉಪಚುನಾವಣೆಗಳ ಜವಾಬ್ದಾರಿಯನ್ನು ಅವರೇ ಹೊತ್ತು ಯಶಸ್ವಿಯಾಗಿ ನಿಭಾಯಿಸಿದ್ದರು. ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ನೀಡಿದರೆ, ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಲು ಎಲ್ಲಾ ರೀತಿಯಲ್ಲೂ ಯೋಗ್ಯರಾಗಿದ್ದಾರೆ," ಎಂದು ಸುಧಾಕರ್ ಬ್ಯಾಟ್ ಬೀಸಿದ್ದಾರೆ.
"ಟೆಕ್ನಿಕಲಿ ನಾನು ಈಗ ಮಾಜಿ ಮಂತ್ರಿ!"
ಸಚಿವ ಸಂಪುಟ ಪುನಾರಚನೆ ಮತ್ತು ಹೊಸ ಸಚಿವರ ಆಯ್ಕೆ ಬಗ್ಗೆ ಮಾತನಾಡುತ್ತಾ ಸುಧಾಕರ್ ನಗೆ ಬೀರಿದ್ದಾರೆ. "ಸಂವಿಧಾನದ ನಿಯಮಗಳ ಪ್ರಕಾರ, ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ತಕ್ಷಣ ಇಡೀ ಸಚಿವ ಸಂಪುಟವೇ ಬರ್ಖಾಸ್ತ್ ಆಗುತ್ತದೆ. ಹಾಗಾಗಿ ಟೆಕ್ನಿಕಲಿ ನೋಡಿದರೆ ನಾನು ಈಗ ಮಾಜಿ ಮಂತ್ರಿ! ಸದ್ಯಕ್ಕೆ ಇದು ಕೇವಲ ಕೇರ್ ಟೇಕರ್ (ಉಸ್ತುವಾರಿ) ಸರ್ಕಾರ ಅಷ್ಟೇ," ಎಂದಿದ್ದಾರೆ.
ಮುಂದುವರಿದು, ಹೊಸ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಮಂತ್ರಿ ಸ್ಥಾನ ಸಿಗುತ್ತೆ ಅನ್ನೋ ಪ್ರಶ್ನೆಗೆ, "ಹೊಸ ಮುಖ್ಯಮಂತ್ರಿಯ ವಿವೇಚನೆಗೆ ಅನುಗುಣವಾಗಿ ಸಂಪುಟ ಬದಲಾವಣೆ ಆಗುತ್ತದೆ. ಹೊಸ ಟೀಮ್‌ನಲ್ಲಿ ಯಾರು ಇರಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಒಟ್ಟಿಗೆ ಕುಳಿತು ಹೊಸ ಸಂಪುಟದ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ," ಎಂದು ಮಾಹಿತಿ ನೀಡಿದ್ದಾರೆ.