May 9, 2026 Languages : ಕನ್ನಡ | English

ಮಾನಸಿಕ ಅಸ್ವಸ್ಥನ ಆರೈಕೆ ವೇಳೆ ಸಿಕ್ಕಿತು ಸ್ಫೋಟಕ ಮಾಹಿತಿ - ವೈಟ್‌ಡೌಸ್‌ನಲ್ಲಿದ್ದವನು ಭಯಾನಕ ಹಂತಕ!!

ಮಂಗಳೂರು: ಕೆಲವೊಮ್ಮೆ ನಿಜ ಜೀವನದ ಘಟನೆಗಳು ಸಿನಿಮಾಗಿಂತಲೂ ವಿಚಿತ್ರವಾಗಿರುತ್ತವೆ. ಅನಾಥ, ಮಾನಸಿಕವಾಗಿ ಅಸ್ವಸ್ಥ ಎಂದು ಮರುಕಪಟ್ಟು ಆಶ್ರಯ ನೀಡಿದ ವ್ಯಕ್ತಿಯೊಬ್ಬ, ವಾಸ್ತವದಲ್ಲಿ ಒಬ್ಬ ಭಯಾನಕ ಕೊ*ಲೆ ಆರೋಪಿ ಎಂಬ ಸ್ಫೋಟಕ ಸತ್ಯ ಈಗ ಮಂಗಳೂರಿನಲ್ಲಿ ಬಯಲಾಗಿದೆ. 'ಮನೆಗೆ ಹೋಗಬೇಕು' ಎಂದು ಕನಸು ಕಾಣುತ್ತಿದ್ದ ಆ ಅಸ್ವಸ್ಥನ ಹಿಂದೆ ಒಂದು ಕೊ*ಲೆ ಪ್ರಕರಣ ಅಡಗಿದೆ ಎಂಬುದು ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಆಶ್ರಮ ಸೇರಿದ್ದ ಅನಾಥನ ಹಿಂದೆ 'ಕೊ*ಲೆ' ಕಹಾನಿ;
ಆಶ್ರಮ ಸೇರಿದ್ದ ಅನಾಥನ ಹಿಂದೆ 'ಕೊ*ಲೆ' ಕಹಾನಿ;

ದಾರುಣ ಸ್ಥಿತಿಯಲ್ಲಿ ಸಿಕ್ಕಿದ್ದ 'ಅನೀಶ್ ಕುಮಾರ್'

ಕಳೆದ 2025ರ ನವೆಂಬರ್ 21ರಂದು ಮಂಗಳೂರಿನ ರಸ್ತೆಯೊಂದರಲ್ಲಿ ಬಹಳ ದಾರುಣ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಮಂಗಳೂರಿನ ಹೆಸರಾಂತ 'ವೈಟ್‌ಡೌಸ್' (White Doves) ಆಶ್ರಮದ ಸಿಬ್ಬಂದಿ ಆತನನ್ನು ರಕ್ಷಿಸಿ ಕರೆತಂದಿದ್ದರು. ಆತ ಮಾನಸಿಕವಾಗಿ ಕುಗ್ಗಿದ್ದರಿಂದ ಆತನಿಗೆ ಪ್ರೀತಿಯಿಂದ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ನೀಡಲಾಗಿತ್ತು. ಚಿಕಿತ್ಸೆಯ ನಂತರ ಚೇತರಿಸಿಕೊಂಡ ಆ ವ್ಯಕ್ತಿ ತನ್ನ ಹೆಸರು ಅನೀಶ್ ಕುಮಾರ್ ಎಂದು ಹೇಳಿಕೊಂಡಿದ್ದ.

"ನನಗೆ ಅಂತಹ ಮಗನೇ ಇಲ್ಲ" ಎಂದ ತಾಯಿ!

ಆರೋಪಿ ಅನೀಶ್ ತನ್ನ ತಾಯಿಯ ಹೆಸರು ರಾಧಾ ಎಂದು, ಆಕೆ ತಮಿಳುನಾಡಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದ. ಆತನನ್ನು ಹೇಗಾದರೂ ಮಾಡಿ ಕುಟುಂಬದವರ ಬಳಿ ಸೇರಿಸಬೇಕು ಎಂದು ವೈಟ್‌ಡೌಸ್ ಸಿಬ್ಬಂದಿ ಹಗಲು ರಾತ್ರಿ ಪ್ರಯತ್ನ ಪಟ್ಟಿದ್ದರು. ಕೊನೆಗೆ ತಮಿಳುನಾಡಿನ ಆ ಮಹಿಳೆಯನ್ನು ಸಂಪರ್ಕಿಸಿದಾಗ ಅಲ್ಲಿ ದೊಡ್ಡ ಟ್ವಿಸ್ಟ್ ಕಾದಿತ್ತು! "ನನಗೆ ಆ ಹೆಸರಿನ ಮಗನೇ ಇಲ್ಲ" ಎಂದು ಆ ಮಹಿಳೆ ಖಡಾಖಂಡಿತವಾಗಿ ಹೇಳಿ ಫೋನ್ ಕಟ್ ಮಾಡಿದ್ದರು.

ಪೊಲೀಸರ ಎಂಟ್ರಿ: ಬಯಲಾಯ್ತು ಅಸಲಿ ಬಣ್ಣ!

ಮಗನ ಬಗ್ಗೆ ತಾಯಿ ಹೀಗೆ ಹೇಳಿದ್ದರಿಂದ ಅನುಮಾನಗೊಂಡ ವೈಟ್‌ಡೌಸ್ ಸಂಸ್ಥಾಪಕಿ ಕೊರಿನ್ ರಸ್ಕಿನಾ ಅವರು ತಮಿಳುನಾಡಿನ ಪೊಲೀಸರನ್ನು ಸಂಪರ್ಕಿಸಿದರು. ಪುದುಕೋಟೈ ಜಿಲ್ಲೆಯ ಅರ್ನೆಲ್ ಪೊಲೀಸ್ ಠಾಣೆಯಿಂದ ಬಂದ ಮಾಹಿತಿ ಕೇಳಿ ಸಿಬ್ಬಂದಿಯ ಎದೆಯೇ ಜಲ್ಲೆಂದಿದೆ. ಈ ಅನೀಶ್ ಕುಮಾರ್ ಎಂಬಾತ ಸಾಧಾರಣ ವ್ಯಕ್ತಿಯಲ್ಲ, ಒಬ್ಬ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊ*ಲೆ ಮಾಡಿದ ಆರೋಪಿ ಎಂಬುದು ಬಹಿರಂಗವಾಯಿತು!

ಜಾಮೀನು ಪಡೆದು ಎಸ್ಕೇಪ್ ಆಗಿದ್ದ ಕಿಲಾಡಿ

ಅನೀಶ್ ಕುಮಾರ್ ಈ ಹಿಂದೆ ಕೊ*ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಆದರೆ ನಂತರ ಜಾಮೀನು ಪಡೆದು ಹೊರಬಂದಿದ್ದ ಆತ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಪೊಲೀಸರ ಕಣ್ಣಿಗೆ ಮಣ್ಣು ಎಚ್ಚಲು ಮಾನಸಿಕ ಅಸ್ವಸ್ಥನಂತೆ ನಟಿಸುತ್ತಾ ಮಂಗಳೂರಿಗೆ ಬಂದು ಆಶ್ರಮ ಸೇರಿಕೊಂಡಿದ್ದ ಎನ್ನಲಾಗಿದೆ. ಹಲವು ತಿಂಗಳುಗಳಿಂದ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.

ವೈಟ್‌ಡೌಸ್ ಇತಿಹಾಸದಲ್ಲೇ ಇಂತಹದ್ದೊಂದು ಮೊದಲ ಕೇಸ್!

ಸತ್ಯ ತಿಳಿಯುತ್ತಿದ್ದಂತೆ ವೈಟ್‌ಡೌಸ್ ಸಂಸ್ಥೆಯು ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಿದೆ. ಈ ಬಗ್ಗೆ ಮಾತನಾಡಿದ ಸಂಸ್ಥಾಪಕಿ ಕೊರಿನ್ ರಸ್ಕಿನಾ, "ನಾವು ಎಷ್ಟೋ ಜನರಿಗೆ ಆಶ್ರಯ ನೀಡಿದ್ದೇವೆ, ಆದರೆ ಇಂತಹ ವಿಚಿತ್ರ ಮತ್ತು ಆಘಾತಕಾರಿ ಪ್ರಕರಣ ಇದೇ ಮೊದಲು. ಅನಾಥ ಎಂದು ನಾವು ಸಾಕಿ ಸಲುಹಿದ ವ್ಯಕ್ತಿ ಕೊಲೆಗಾರ ಎಂದು ತಿಳಿದಾಗ ನಮಗೂ ಆಶ್ಚರ್ಯವಾಯಿತು" ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, "ಕಾನೂನಿನ ಕೈಗಳು ಉದ್ದ ಇರುತ್ತವೆ" ಎನ್ನುವಂತೆ, ಎಲ್ಲೋ ಕೊ*ಲೆ ಮಾಡಿ ಎಲ್ಲಿಯೋ ಬಂದು ಅಡಗಿಕೊಂಡಿದ್ದ ಆರೋಪಿ ಈಗ ಕೊನೆಗೂ ಮತ್ತೆ ಕಂಬಿ ಎಣಿಸುವಂತಾಗಿದೆ. 

Latest News