ಟ್ರೈನ್‌ನಲ್ಲಿ ಪ್ರಯಾಣಿಸೋರು ಗಮನಿಸಿ - ಮೇ 20 ರಿಂದ ಜೂನ್ 2ರವರೆಗೆ ಮಂಗಳೂರಿನ ರೈಲುಗಳ ಮಾರ್ಗದಲ್ಲಿ ಭಾರೀ ಬದಲಾವಣೆ!!

ರೈಲಿನಲ್ಲಿ ನಿಯಮಿತವಾಗಿ ಪ್ರಯಾಣಿಸುವ ಮಂಗಳೂರು ಮತ್ತು ಕರಾವಳಿ ಭಾಗದ ಜನರಿಗೆ ರೈಲ್ವೆ ಇಲಾಖೆಯು ಒಂದು ಪ್ರಮುಖ ಮಾಹಿತಿಯನ್ನು ನೀಡಿದೆ. ನೈಋತ್ಯ ರೈಲ್ವೆಯ ತಿರುವನಂತಪುರಂ ವಿಭಾಗದಲ್ಲಿ ವಿವಿಧ ದಿನಗಳಂದು ಹಳಿ ನಿರ್ವಹಣಾ ಕಾರ್ಯಗಳು (Track Maintenance) ನಡೆಯುತ್ತಿವೆ. ಈ ಕಾಮಗಾರಿಗಳಿಗೆ ಅನುಕೂಲವಾಗುವಂತೆ ಮುಂಬರುವ ಮೇ 20 ರಿಂದ ಜೂನ್ 2 ರವರೆಗೆ ಮಂಗಳೂರಿನಿಂದ ಹೊರಡುವ ಹಾಗೂ ಮಂಗಳೂರಿಗೆ ಬರುವ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿ ಮತ್ತು ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಇಲಾಖೆ ಪ್ರಕಟಣೆ ಹೊರಡಿಸಿದೆ.

ವಿಜಯಪುರ-ಬಾಗಲಕೋಟೆ ರೈಲು ಭಾಗಶಃ ರದ್ದು | Photo Credit: CANVA
ವಿಜಯಪುರ-ಬಾಗಲಕೋಟೆ ರೈಲು ಭಾಗಶಃ ರದ್ದು | Photo Credit: CANVA

ವಿಜಯಪುರ - ಬಾಗಲಕೋಟೆ ನಡುವೆ ರೈಲು ಭಾಗಶಃ ರದ್ದು

ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರೈಲಿನ ಸಂಚಾರದಲ್ಲಿ ಮೇ 20 ಮತ್ತು 21 ರಂದು ವ್ಯತ್ಯಯ ಉಂಟಾಗಲಿದೆ.

ವಿಜಯಪುರ ಎಕ್ಸ್‌ಪ್ರೆಸ್: ಮೇ 20 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ ಪ್ರಯಾಣವನ್ನು ಬಾಗಲಕೋಟೆಯಲ್ಲೇ ಮುಗಿಸಲಾಗುವುದು. ಅಂದರೆ, ಈ ರೈಲು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಭಾಗಶಃ ರದ್ದಾಗಲಿದ್ದು, ವಿಜಯಪುರಕ್ಕೆ ಹೋಗುವುದಿಲ್ಲ.

ಮಂಗಳೂರು ಎಕ್ಸ್‌ಪ್ರೆಸ್: ಅದೇ ರೀತಿ, ಮೇ 21 ರಂದು ವಿಜಯಪುರದಿಂದ ಹೊರಡಬೇಕಿದ್ದ ರೈಲು ಸಂಖ್ಯೆ 17377 ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಜಯಪುರದಿಂದ ಹೊರಡುವುದಿಲ್ಲ. ಬದಲಿಗೆ, ಇದು ಸಂಜೆ 5 ಗಂಟೆಗೆ ಬಾಗಲಕೋಟೆಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಈ ರೈಲು ಸೇವೆ ಕೂಡ ವಿಜಯಪುರ ಮತ್ತು ಬಾಗಲಕೋಟೆ ನಡುವೆ ಭಾಗಶಃ ರದ್ದಾಗಿರುತ್ತದೆ.

ಕೊಟ್ಟಾಯಂ ಮಾರ್ಗವಾಗಿ ಓಡಲಿವೆ ಈ ಪ್ರಮುಖ ರೈಲುಗಳು!

ಕೇರಳ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ನಿಲುಗಡೆಗಳನ್ನು ಬದಲಾಯಿಸಿ, ಬೇರೆ ರೂಟ್‌ನಲ್ಲಿ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಅಂತ್ಯೋದಯ ಎಕ್ಸ್‌ಪ್ರೆಸ್: ತಿರುವನಂತಪುರಂ ಉತ್ತರದಿಂದ ಮೇ 28 ಮತ್ತು 30 ರಂದು ಹೊರಡುವ ರೈಲು ಸಂಖ್ಯೆ 16355 ತಿರುವನಂತಪುರಂ ಉತ್ತರ - ಮಂಗಳೂರು ಜಂಕ್ಷನ್ ಅಂತ್ಯೋದಯ ಎಕ್ಸ್‌ಪ್ರೆಸ್ ಅನ್ನು ಆಲಪ್ಪುಳ ಮತ್ತು ಎರ್ನಾಕುಲಂ ಜಂಕ್ಷನ್ ಮಾರ್ಗದ ಬದಲಾಗಿ ಕೊಟ್ಟಾಯಂ ಮೂಲಕ ಓಡಿಸಲಾಗುತ್ತದೆ. ಹೀಗಾಗಿ ಇದು ಆಲಪ್ಪುಳ, ಎರ್ನಾಕುಲಂನಲ್ಲಿ ನಿಲ್ಲಲ್ಲ. ಬದಲಿಗೆ ಚೆಂಗನ್ನೂರು, ಕೊಟ್ಟಾಯಂ ಮತ್ತು ಎರ್ನಾಕುಲಂ ಪಟ್ಟಣದಲ್ಲಿ (Ernakulam Town) ಹೆಚ್ಚುವರಿ ನಿಲುಗಡೆಗಳನ್ನು ಕೊಡಲಾಗಿದೆ.

ಮಾವೇಲಿ ಎಕ್ಸ್‌ಪ್ರೆಸ್: ಮೇ 29 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲು ಆಲಪ್ಪುಳ, ಅಂಬಲಪ್ಪುಳ ಮತ್ತು ಹರಿಪಾಡ್‌ನಲ್ಲಿ ನಿಲ್ಲುವುದಿಲ್ಲ. ಇದು ಕೊಟ್ಟಾಯಂ ಮೂಲಕ ಓಡಲಿದ್ದು, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಶ್ಶೇರಿ, ತಿರುವಲ್ಲಾ ಮತ್ತು ಚೆಂಗನ್ನೂರ್‌ನಲ್ಲಿ ಎಕ್ಸ್‌ಟ್ರಾ ಸ್ಟಾಪ್ಸ್ ಹೊಂದಿರಲಿದೆ.

ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್: ಮೇ 29 ರಂದು ಹೊರಡುವ ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22207) ಎರ್ನಾಕುಲಂ ಜಂಕ್ಷನ್ ಮತ್ತು ಆಲಪ್ಪುಳದಲ್ಲಿ ನಿಲ್ಲದೆ ಕೊಟ್ಟಾಯಂ ಮೂಲಕ ಸಾಗಲಿದೆ. ಇದಕ್ಕೆ ಎರ್ನಾಕುಲಂ ಟೌನ್, ಕೊಟ್ಟಾಯಂ ಮತ್ತು ಚೆಂಗನ್ನೂರಿನಲ್ಲಿ ಸ್ಟಾಪೇಜ್ ನೀಡಲಾಗಿದೆ.

ಕೆಲವು ರೈಲುಗಳ ಸಂಚಾರ ತಡ; 40 ನಿಮಿಷಗಳ ಕಾಲ ನಿರ್ಬಂಧ!

ಪ್ರಯಾಣಿಕರ ಗಮನಕ್ಕೆ: ಮಾರ್ಗ ಮಧ್ಯೆ ನಡೆಯುವ ಕಾಮಗಾರಿಯಿಂದಾಗಿ ಕೆಲವು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ತಲುಪಲಿವೆ. ಮಂಗಳೂರು ಸೆಂಟ್ರಲ್‌ನಿಂದ ಮೇ 27, 28, 30 ಮತ್ತು ಜೂನ್ 1, 2 ರಂದು ಹೊರಡುವ ರೈಲು ಸಂಖ್ಯೆ 16603 ಮಾವೇಲಿ ಎಕ್ಸ್‌ಪ್ರೆಸ್ ಅನ್ನು ಮಾರ್ಗ ಮಧ್ಯದಲ್ಲಿ 40 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.

ಅದೇ ರೀತಿ, ಮೇ 29 ರಂದು ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ರೈಲು ಸಂಖ್ಯೆ 16356 ಮಂಗಳೂರು ಜಂಕ್ಷನ್ - ತಿರುವನಂತಪುರಂ ಉತ್ತರ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲನ್ನು ಕೂಡ ಮಾರ್ಗದಲ್ಲಿ 30 ನಿಮಿಷಗಳ ಕಾಲ ನಿರ್ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲುಗಳ ಮಾರ್ಗ ಬದಲಾವಣೆ ಹಾಗೂ ನಿಲುಗಡೆಗಳ ವ್ಯತ್ಯಾಸದಿಂದ ಪ್ರಯಾಣಿಕರಿಗೆ ಕೊಂಚ ತೊಂದರೆಯಾಗಬಹುದು. ಆದ್ದರಿಂದ ಮೇ 20 ರಿಂದ ಜೂನ್ 2 ರ ನಡುವೆ ಪ್ರಯಾಣ ಬೆಳೆಸುವವರು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಹೆಲ್ಪ್‌ಲೈನ್ ಮೂಲಕ ರೈಲಿನ ಲೈವ್ ಸ್ಟೇಟಸ್ ಪರಿಶೀಲಿಸಿ ನಿಲ್ದಾಣಕ್ಕೆ ಬರುವುದು ಒಳ್ಳೆಯದು.

Latest News