ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯ ಫಲಿತಾಂಶ ಈಗ ಅಂತಿಮ ಹಂತಕ್ಕೆ ತಲುಪಿದೆ. ಮತ ಎಣಿಕೆಯ ಆರಂಭಿಕ ಸುತ್ತುಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿ ಟಿಎಂಸಿ (TMC) ಕಾರ್ಯಕರ್ತರು ಕಂಗೆಟ್ಟಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಕ್ಸ್ (X) ಖಾತೆಯಲ್ಲಿ ಒಂದು ವೀಡಿಯೋ ಮೆಸೇಜ್ ಹಂಚಿಕೊಂಡಿದ್ದು, ಅದು ಸಖತ್ ವೈರಲ್ ಆಗಿದೆ.
"ಕೌಂಟಿಂಗ್ ಸೆಂಟರ್ ಬಿಟ್ಟು ಬರಬೇಡಿ!"
ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಕೌಂಟಿಂಗ್ ಏಜೆಂಟ್‌ಗಳಿಗೆ ಸ್ಟ್ರಿಕ್ಟ್ ವಾರ್ನಿಂಗ್ ಕೊಟ್ಟಿದ್ದಾರೆ.
ಬಿಜೆಪಿ ಪ್ಲಾನ್: "ಯಾರೂ ಕೂಡ ಮತ ಎಣಿಕೆ ಕೇಂದ್ರದಿಂದ ಹೊರಗೆ ಬರಬೇಡಿ. ಇದು ಬಿಜೆಪಿಯ ಪ್ಲಾನ್. ಅವರು ಆರಂಭಿಕ ಸುತ್ತುಗಳಲ್ಲಿ ತಾವು ಗೆಲ್ಲುತ್ತಿದ್ದೇವೆ ಎಂದು ಬಿಂಬಿಸುತ್ತಾರೆ. ಅದನ್ನು ನಂಬಿ ನೀವು ಅಲ್ಲಿಂದ ಓಡಿ ಹೋದರೆ, ಅವರು ಮೋಸ ಮಾಡ್ತಾರೆ" ಅಂತ ಮಮತಾ ಎಚ್ಚರಿಸಿದ್ದಾರೆ.
ಇಸಿ ವಿರುದ್ಧ ಆಕ್ರೋಶ: ಚುನಾವಣಾ ಆಯೋಗ ಮತ್ತು ಕೇಂದ್ರ ಭದ್ರತಾ ಪಡೆಗಳು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿವೆ. ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತ ಎಣಿಕೆಯನ್ನು ಉದ್ದೇಶಪೂರ್ವಕವಾಗಿ ನಿಧಾನ ಮಾಡಲಾಗಿದೆ ಎಂದು ದೀದಿ ಗಂಭೀರ ಆರೋಪ ಮಾಡಿದ್ದಾರೆ.
"ಹುಲಿ ಮರಿಗಳಂತೆ ಹೋರಾಡಿ" ಎಂದ ದೀದಿ
ವೀಡಿಯೋದಲ್ಲಿ ಮಮತಾ ಬ್ಯಾನರ್ಜಿ ಅವರು ಸ್ವಲ್ಪ ಭಾವುಕರಾಗಿ ಕಂಡಿದ್ದಾರೆ. ಕಣ್ಣೀರು ಹಾಕುತ್ತಲೇ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಅವರು, "ಇನ್ನೂ 14 ರಿಂದ 18 ಸುತ್ತುಗಳ ಎಣಿಕೆ ಬಾಕಿ ಇದೆ. ಸೂರ್ಯ ಮುಳುಗಿದ ಮೇಲೆ ಅಂತಿಮ ಫಲಿತಾಂಶ ಬಂದಾಗ ನಾವೇ ಗೆಲ್ಲುತ್ತೇವೆ. ನೀವು ಹುಲಿ ಮರಿಗಳಂತೆ ಹೋರಾಡಿ" ಎಂದು ಕರೆ ನೀಡಿದ್ದಾರೆ.
ಬಿಜೆಪಿ ತಿರುಗೇಟು: "ಇವೆಲ್ಲಾ ಸೋಲುವ ಮುನ್ನ ನೀಡುವ ನೆಪಗಳು"
ಇನ್ನೊಂದೆಡೆ ಮಮತಾ ಬ್ಯಾನರ್ಜಿ ಅವರ ಈ ಆರೋಪಗಳಿಗೆ ಬಿಜೆಪಿ ಲೇವಡಿ ಮಾಡಿದೆ. "ಸೋಲು ಗ್ಯಾರಂಟಿ ಅಂತ ಗೊತ್ತಾದ ಮೇಲೆ ದೀದಿ ಈಗ ಇವಿಎಂ ಮತ್ತು ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸ್ತಿದ್ದಾರೆ. ಬಂಗಾಳದ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ" ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
জরুরি বার্তা pic.twitter.com/Uc82oihwEL
— Mamata Banerjee (@MamataOfficial) May 4, 2026
ಬಿಗುವಿನ ವಾತಾವರಣ, ಹೈ ಅಲರ್ಟ್!
ಪಶ್ಚಿಮ ಬಂಗಾಳ ಅಂದ್ರೆ ಅಲ್ಲಿ ಚುನಾವಣಾ ಹಿಂಸಾಚಾರಕ್ಕೆ ಹೆಸರುವಾಸಿ. ಈಗ ರಿಸಲ್ಟ್ ಹತ್ತಿರ ಬರ್ತಿರೋದ್ರಿಂದ ಗಲಾಟೆ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಟಿಎಂಸಿ ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಮತ್ತು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ದೀದಿ ದೂರುತ್ತಿದ್ದಾರೆ.
ಬಂಗಾಳದ ಅಖಾಡದಲ್ಲಿ ಮಮತಾ ಮತ್ತು ಬಿಜೆಪಿ ನಡುವಿನ ಫೈಟ್ ಕೇವಲ ಸೀಟುಗಳಿಗಾಗಿ ಮಾತ್ರವಲ್ಲ, ಇದು ಇಬ್ಬರ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಗ್ರಾಮೀಣ ಭಾಗದ ಮತ್ತು ಪೋಸ್ಟಲ್ ಬ್ಯಾಲೆಟ್ ಎಣಿಕೆ ಮುಗಿಯುವ ಹೊತ್ತಿಗೆ ಬಂಗಾಳದ 'ಮಹಾರಾಣಿ' ಮಮತಾ ಉಳಿತಾರಾ ಅಥವಾ 'ಕಮಲ' ಅರಳುತ್ತಾ ಅನ್ನೋದನ್ನ ನೋಡಲು ಇಡೀ ದೇಶ ಕಾತರದಿಂದ ಕಾಯುತ್ತಿದೆ. ದೀದಿ ಹೇಳಿದಂತೆ 'ಸೂರ್ಯಾಸ್ತ'ದ ನಂತರ ಫಲಿತಾಂಶ ಉಲ್ಟಾ ಆಗುತ್ತಾ? ಕಾದು ನೋಡಬೇಕು!