ಕರ್ನಾಟಕದ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿ ನಿವಾಸಿ ಕೊಟ್ರಯ್ಯ ಎಂಬುವವರು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಕೇವಲ 8ನೇ ತರಗತಿಯವರೆಗೆ ಓದಿದ್ದರೂ, ಗಣಿತದ ಲೆಕ್ಕಗಳನ್ನು ಬಿಡಿಸುವ ಇವರ ಅಪ್ರತಿಮ ವೇಗ ಕಂಡು ಜನರು ಇವರನ್ನು ಪ್ರೀತಿಯಿಂದ ಮಗ್ಗಿ ಅಜ್ಜಯ್ಯ ಎಂದೇ ಕರೆಯುತ್ತಿದ್ದಾರೆ. ಗಣಿತದ ಕಠಿಣ ಸಮಸ್ಯೆಗಳನ್ನು ಸೆಕೆಂಡುಗಳಲ್ಲಿ ಬಗೆಹರಿಸುವ ಇವರ ಈ ಪ್ರತಿಭೆ ಆಧುನಿಕ ಕಂಪ್ಯೂಟರ್‌ಗಳನ್ನೂ ಮೀರಿಸುವಂತಿದೆ.
'ಮಾನವ ಕಂಪ್ಯೂಟರ್' ಖ್ಯಾತಿಯ ಕೊಟ್ರಯ್ಯ
ಭಾರತದ ಶಕುಂತಲಾ ದೇವಿ ಅವರನ್ನು ಹೇಗೆ ಜಗತ್ತು 'ಮಾನವ ಕಂಪ್ಯೂಟರ್' ಎಂದು ಗುರುತಿಸುತ್ತದೆಯೋ, ಹಾಗೆಯೇ ಕೊಟ್ಟೂರು ಭಾಗದ ಜನರು ಕೊಟ್ರಯ್ಯ ಅಜ್ಜಯ್ಯನವರನ್ನು ಸ್ಥಳೀಯವಾಗಿ ಅಷ್ಟೇ ಗೌರವದಿಂದ ಕಾಣುತ್ತಾರೆ. ಲಕ್ಷಾಂತರ ರೂಪಾಯಿ ಶುಲ್ಕ ನೀಡಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರೂ ತಡಬಡಾಯಿಸುವಂತಹ ಗುಣಾಕಾರ ಮತ್ತು ಭಾಗಾಕಾರದ ಲೆಕ್ಕಗಳನ್ನು ಅಜ್ಜಯ್ಯ ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ ನಿಖರವಾಗಿ ಹೇಳುತ್ತಾರೆ. ಯಾರೇ ಯಾವುದೇ ಅಂಕೆಗಳ ಗುಣಾಕಾರದ ಪ್ರಶ್ನೆ ಕೇಳಿದರೂ, ಒಂದು ಕ್ಷಣವೂ ಯೋಚಿಸದೆ ಇವರು ಉತ್ತರ ನೀಡುವ ಶೈಲಿ ಅಚ್ಚರಿ ಮೂಡಿಸುವಂತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ
ಇತ್ತೀಚೆಗೆ halekotturu ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ಇವರ ವಿಡಿಯೋ 15 ಲಕ್ಷಕ್ಕೂ ಅಧಿಕ ವೀಕ್ಷಣೆ (Views) ಪಡೆದುಕೊಂಡಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೇಳುವ ಕಠಿಣ ಗುಣಾಕಾರದ ಲೆಕ್ಕಕ್ಕೆ ಅಜ್ಜಯ್ಯ ತಕ್ಷಣವೇ ಉತ್ತರ ನೀಡುತ್ತಾರೆ. "ಇದೆಲ್ಲಾ ಹೇಗೆ ಸಾಧ್ಯ?" ಎಂದು ಕೇಳಿದಾಗ, ಅಜ್ಜಯ್ಯ ಬಹಳ ವಿನಮ್ರತೆಯಿಂದ "ಎಲ್ಲವೂ ಅಂದಾಜಿನಲ್ಲಿ ಹೇಳುತ್ತೇನೆ" ಎನ್ನುತ್ತಾರೆ. ಆದರೆ ಆ ಅಂದಾಜು ಪಕ್ಕಾ ಲೆಕ್ಕಾಚಾರದಷ್ಟೇ ನಿಖರವಾಗಿರುವುದು ಅವರ ವಿಶೇಷತೆ.
ನೆಟ್ಟಿಗರ ಮೆಚ್ಚುಗೆ ಮತ್ತು ಹಾರೈಕೆ
ಅಜ್ಜಯ್ಯನವರ ಈ ಅದ್ಭುತ ಟ್ಯಾಲೆಂಟ್ ಕಂಡ ನೆಟ್ಟಿಗರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. "ಲಕ್ಷ ಲಕ್ಷ ಖರ್ಚು ಮಾಡಿ ಓದಿದವರೂ ನಿಮ್ಮ ಮುಂದೆ ಬಚ್ಚಾಗಳು ತಾತ," "ನಿಮ್ಮ ಈ ಟ್ಯಾಲೆಂಟ್‌ಗೆ ಎಷ್ಟು ಹಣ ಕೊಟ್ಟರೂ ಸಾಲದು" ಎಂದು ಹಾರೈಸಿದ್ದಾರೆ. ಅಜ್ಜಯ್ಯನವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಅಲ್ಲಿನ ಸ್ಥಳೀಯರು ಮತ್ತು ವಿಡಿಯೋ ನೋಡಿದ ಕೆಲವರು ಆರ್ಥಿಕ ಸಹಾಯವನ್ನೂ ಮಾಡುತ್ತಿದ್ದಾರೆ. ಅವರ ಮುಗ್ದತೆ ಮತ್ತು ಹಸನ್ಮುಖಿ ವ್ಯಕ್ತಿತ್ವವು ಎಲ್ಲರ ಮನ ಗೆದ್ದಿದೆ.
ಗಣಿತವೆಂದರೆ ಕಬ್ಬಿಣದ ಕಡಲೆ ಎಂದು ಭಾವಿಸುವ ಇಂದಿನ ಪೀಳಿಗೆಗೆ ಮಗ್ಗಿ ಅಜ್ಜಯ್ಯ ಒಂದು ದೊಡ್ಡ ಸ್ಫೂರ್ತಿ. ಸುಧಾರಿತ ತಂತ್ರಜ್ಞಾನವಿಲ್ಲದೆ ಕೇವಲ ಏಕಾಗ್ರತೆ ಮತ್ತು ಅಭ್ಯಾಸದಿಂದ ಮಿದುಳನ್ನು ಕಂಪ್ಯೂಟರ್‌ನಂತೆ ಬಳಸಬಹುದು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಈ ಪ್ರತಿಭೆಗೆ ತಕ್ಕ ಗೌರವ ಮತ್ತು ಪ್ರೋತ್ಸಾಹ ಸಿಗಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ ಆಶಯವಾಗಿದೆ.