ಮುಖ್ಯಮಂತ್ರಿ ಹೆಲ್ಪ್‌ಲೈನ್ ಅಂದ್ರೆ ಜನ ಸಾಮಾನ್ಯರ ಕಷ್ಟ ಕೇಳೋಕೆ ಇರೋ ಜಾಗ. ಆದ್ರೆ ಅದೇ ಹೆಲ್ಪ್‌ಲೈನ್‌ನಲ್ಲಿ ಕೆಲಸ ಮಾಡೋ ಹೆಣ್ಣುಮಕ್ಕಳ ಕಷ್ಟ ಕೇಳೋರು ಯಾರೂ ಇಲ್ಲದಂತಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಇವತ್ತು ಒಂದು ಮನಕಲಕುವ ಘಟನೆ ನಡೆದಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ 1076 ಹೆಲ್ಪ್‌ಲೈನ್‌ನಲ್ಲಿ ಕೆಲಸ ಮಾಡುವ ಮಹಿಳಾ ಆಪರೇಟರ್‌ಗಳು ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡ್ತಿದ್ರು. ಆದ್ರೆ ಅಲ್ಲಿಗೆ ಬಂದ ಪೊಲೀಸರು ಆ ಮಹಿಳೆಯರನ್ನು ಬಲವಂತವಾಗಿ ಎಳೆದಾಡಿ, ಬಸ್‌ಗೆ ತುಂಬಿಕೊಂಡು ಹೋಗಿ ವಶಕ್ಕೆ ಪಡೆದಿದ್ದಾರೆ.
ಈ ಇಡೀ ಗಲಾಟೆಗೆ ಅಸಲಿ ಕಾರಣ ಏನು ಗೊತ್ತಾ? ಮೋಸದ ಸಂಬಳ. ಈ ಮಹಿಳೆಯರು ಕೆಲಸಕ್ಕೆ ಸೇರೋವಾಗ ಒಂದು ಉದ್ಯೋಗ ಮೇಳದಲ್ಲಿ ಇವರಿಗೆ ತಿಂಗಳಿಗೆ ₹15,000 ಸಂಬಳ ಕೊಡ್ತೀವಿ ಅಂತ ಭರವಸೆ ನೀಡಲಾಗಿತ್ತು. "ಸರಿ, ಒಂದು ಗೌರವಯುತ ಸಂಬಳ ಸಿಗುತ್ತೆ" ಅಂತ ನಂಬಿ ಇವರು ಕೆಲಸಕ್ಕೆ ಸೇರಿಕೊಂಡ್ರು. ಆದ್ರೆ ಕೈಗೆ ಸಿಕ್ತಿರೋದು ಬರೀ ₹7,000 ಮಾತ್ರ. ಅಂದ್ರೆ ದಿನಕ್ಕೆ ಕೇವಲ ₹233 ರೂಪಾಯಿ ಆದ ಹಾಗೆ ಆಯ್ತು. ಇವತ್ತಿನ ಕಾಲದಲ್ಲಿ 200 ರೂಪಾಯಿಯಲ್ಲಿ ಜೀವನ ಮಾಡೋಕೆ ಸಾಧ್ಯನಾ ನೀವೇ ಯೋಚನೆ ಮಾಡಿ.
ಕಡಿಮೆ ಸಂಬಳ ಕೊಡ್ತಾರೆ ಅಂತ ಕೆಲಸನಾದ್ರೂ ಕಮ್ಮಿ ಇದೆಯಾ ಅಂದ್ರೆ ಅದೂ ಇಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಬಿಡುವಿಲ್ಲದೆ ಫೋನ್ ಕಾಲ್‌ಗಳನ್ನು ಅಟೆಂಡ್ ಮಾಡಬೇಕು. ಸರಿಯಾಗಿ ಬ್ರೇಕ್ ತಗೊಳ್ಳೋಕೂ ಅವಕಾಶ ಕೊಡಲ್ವಂತೆ. ಇನ್ನು ಆಫೀಸ್‌ನಲ್ಲಿ ಮೇಲಧಿಕಾರಿಗಳ ಕಿರುಕುಳ ಬೇರೆ, ಇಷ್ಟೆಲ್ಲಾ ಟೆನ್ಷನ್ ತಗೊಂಡು ಕೆಲಸ ಮಾಡಿದ್ರೂ ಅಪ್ಪಿತಪ್ಪಿ ಸಂಬಳದ ಬಗ್ಗೆ ಕೇಳಿದ್ರೆ ಸಾಕು, ಕೆಲಸದಿಂದ ತೆಗೆದು ಹಾಕೋ ಬೆದರಿಕೆ ಹಾಕ್ತಾರೆ ಅನ್ನೋದು ಈ ಮಹಿಳೆಯರ ಆಕ್ರೋಶ.
ಇವತ್ತು ತಮ್ಮ ಬೇಡಿಕೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿಗೆ ತಲುಪಿಸಬೇಕು ಅಂತ ಈ ಮಹಿಳೆಯರು ಗೋಮತಿ ನಗರದ ಬಳಿ ಜಮಾಯಿಸಿದ್ರು. ಶಾಂತಿಯುತವಾಗಿ ಸತ್ಯಾಗ್ರಹ ಮಾಡೋಕೆ ಹೊರಟಿದ್ದ ಇವರನ್ನು ಪೊಲೀಸರು ತಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿರೋ ವಿಡಿಯೋಗಳಲ್ಲಿ ನೋಡಿದ್ರೆ ಎದೆ ಝಲ್ಲನ್ನುತ್ತೆ. ಮಹಿಳಾ ಪೊಲೀಸರು ಪ್ರತಿಭಟನಾ ನಿರತ ಹೆಣ್ಣುಮಕ್ಕಳನ್ನ ಎಳೆದಾಡಿ, ಬಲವಂತವಾಗಿ ಬಸ್‌ಗೆ ತುಂಬುತ್ತಿದ್ದಾರೆ. ಅದೆಷ್ಟೋ ಹೆಣ್ಣುಮಕ್ಕಳು ಅಲ್ಲಿ ಕಣ್ಣೀರು ಹಾಕುತ್ತಾ "ನಮ್ಮ ಹೊಟ್ಟೆಪಾಡಿಗಾಗಿ ನಾವಿಲ್ಲಿ ಬಂದಿದ್ದೀವಿ, ನಮ್ಮನ್ನ ಬಿಟ್ಟುಬಿಡಿ" ಅಂತ ಕೇಳಿಕೊಂಡ್ರು ಪೊಲೀಸರು ಮಾತ್ರ ಕರುಣೆ ತೋರಲಿಲ್ಲ.
ಇವರ ಬೇಡಿಕೆಗಳಾದರೂ ಏನು?
- ಮಾತು ಕೊಟ್ಟಂತೆ ಸಂಬಳವನ್ನು ₹15,000 ಕ್ಕೆ ಏರಿಸಬೇಕು.
- ಕೆಲಸದ ನಡುವೆ ಕನಿಷ್ಠ 50 ನಿಮಿಷಗಳ ಬ್ರೇಕ್ ಕೊಡಬೇಕು.
- ಅತಿಯಾದ ಕೆಲಸದ ಒತ್ತಡ ಮತ್ತು ಮೇಲಧಿಕಾರಿಗಳ ಕಿರುಕುಳ ನಿಲ್ಲಬೇಕು.
ಇಷ್ಟು ಸರಳವಾದ ಬೇಡಿಕೆಗಳನ್ನ ಇಟ್ಟುಕೊಂಡು ಹೋರಾಟ ಮಾಡ್ತಿರೋ ಇವರಿಗೆ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಭರವಸೆ ಸಿಕ್ಕಿಲ್ಲ. "ಜನರ ಕಷ್ಟ ಕೇಳೋ ಇಲಾಖೆಯಲ್ಲೇ ಕೆಲಸ ಮಾಡೋ ನಮಗೇ ಇವತ್ತು ಈ ಗತಿ ಬಂದಿದೆ" ಅಂತ ಆ ಹೆಣ್ಣುಮಕ್ಕಳು ಅಳಲು ತೋಡಿಕೊಂಡಿದ್ದಾರೆ.
यूपी में CM हेल्पलाइन (1076) में काम करने वाली लड़कियों का कहना है- सैलरी 15 हजार रुपए की जाए. इसके साथ ही 50 मिनट का ब्रेक दिया जाए.
— Ranvijay Singh (@ranvijaylive) April 2, 2026
आज लड़कियां प्रदर्शन कर रही थीं, यूपी पुलिस उनके साथ ऐसा बर्ताव किया 👇
सोचिए- 15 हजार रुपए के लिए लड़ना पड़ रहा है. ये है असल हालात. pic.twitter.com/t0vljPfR3K
ಹೆಣ್ಣುಮಕ್ಕಳು ಸಬಲರಾಗಬೇಕು ಅಂತ ಸರ್ಕಾರಗಳು ಹೇಳುತ್ತವೆ, ಆದ್ರೆ ದಿನಕ್ಕೆ 200 ರೂಪಾಯಿಗೆ ದುಡಿಸಿಕೊಂಡು, ಹಕ್ಕು ಕೇಳಿದ್ರೆ ಜೈಲಿಗೆ ಹಾಕೋದು ಎಷ್ಟು ಸರಿ? ಲಕ್ನೋದ ಈ ಘಟನೆ ಇಡೀ ದೇಶದ ಗಮನ ಸೆಳೆದಿದೆ. ಕನಿಷ್ಠ ವೇತನ ಮತ್ತು ಮಾನವೀಯ ಕೆಲಸದ ವಾತಾವರಣ ಪ್ರತಿಯೊಬ್ಬ ಕಾರ್ಮಿಕನ ಹಕ್ಕು. ಆ ಹೆಣ್ಣುಮಕ್ಕಳಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಅನ್ನೋದೇ ನಮ್ಮ ಆಶಯ.