Mar 31, 2026 Languages : ಕನ್ನಡ | English

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್ - ಸಿಲಿಂಡರ್ ಅಲಭ್ಯತೆಯಿಂದಾಗಿ ರಾಜ್ಯದ ಜನತೆಗೆ ತಪ್ಪದ ಗ್ಯಾಸ್ ಟ್ರಬಲ್; ಸದ್ಯದ ಪರಿಸ್ಥಿತಿ ಹೀಗಿದೆ!!

ಬಿಸಿಲಿನ ಬೇಗೆಗೆ ಬೆಂದು ಹೋಗಿರೋ ಜನರಿಗೆ ಈಗ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಅದುವೇ 'ಗ್ಯಾಸ್ ಸಿಲಿಂಡರ್' ಅಭಾವ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಎಫೆಕ್ಟ್ ಈಗ ನೇರವಾಗಿ ನಮ್ಮ ಅಡುಗೆಮನೆಗೆ ತಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಈಗ ಸಿಲಿಂಡರ್‌ಗಾಗಿ ಹಾಹಾಕಾರ ಶುರುವಾಗಿದೆ. ಬುಕ್ ಮಾಡಿದ್ರೆ ಸಾಕು ಒಂದೆರಡು ದಿನದಲ್ಲಿ ಮನೆ ಬಾಗಿಲಿಗೆ ಬರ್ತಿದ್ದ ಗ್ಯಾಸ್, ಈಗ 20 ದಿನ ಕಳೆದ್ರೂ ಬರ್ತಿಲ್ಲ ಅಂದ್ರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಅಂತ ನೀವೇ ಯೋಚನೆ ಮಾಡಿ.

ಸರ್ಕಾರ ಮಧ್ಯಪ್ರವೇಶಿಸದಿದ್ದರೆ ಜನ ಬೀದಿಗೆ ಬರ್ತಾರೆ!
ಸರ್ಕಾರ ಮಧ್ಯಪ್ರವೇಶಿಸದಿದ್ದರೆ ಜನ ಬೀದಿಗೆ ಬರ್ತಾರೆ!

ಬೆಂಗಳೂರಿನ ಸಂಜಯನಗರ, ಮಲ್ಲೇಶ್ವರಂನಂತಹ ಏರಿಯಾಗಳಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ಜನ ಕ್ಯೂ ನಿಲ್ಲೋ ಪರಿಸ್ಥಿತಿ ಬಂದಿದೆ. ಮಲ್ಲೇಶ್ವರದ ಇಂಡೇನ್ ಏಜೆನ್ಸಿಯೊಂದರಲ್ಲೇ ಬರೋಬ್ಬರಿ 4,000 ಬಿಲ್‌ಗಳು ಬಾಕಿ ಇವೆಯಂತೆ! ಅಂದ್ರೆ ಅಷ್ಟು ಜನರಿಗೆ ಇನ್ನೂ ಸಿಲಿಂಡರ್ ತಲುಪಿಲ್ಲ. ದಿನಕ್ಕೆ ಕೇವಲ 50-60 ಲೋಡ್ ಮಾತ್ರ ಬರ್ತಿರೋದ್ರಿಂದ ಏಜೆನ್ಸಿ ಮಾಲೀಕರು ಕೂಡ ಏನು ಮಾಡಲಾಗದೆ ಕೈಚೆಲ್ಲಿ ಕುಳಿತಿದ್ದಾರೆ. ಗೃಹಿಣಿಯರಂತೂ ಅಡುಗೆ ಮಾಡೋಕೆ ಗ್ಯಾಸ್ ಇಲ್ಲದೆ ಹೈರಾಣಾಗಿದ್ದಾರೆ.

ಇನ್ನು ಹೋಟೆಲ್ ಉದ್ಯಮದ ಕಥೆಯಂತೂ ಕೇಳೋದೇ ಬೇಡ. ಕಮರ್ಷಿಯಲ್ ಸಿಲಿಂಡರ್‌ಗಳ ಸಪ್ಲೈ ಸಂಪೂರ್ಣವಾಗಿ ಕುಸಿದಿದೆ. ಜಯನಗರದ ಮಯೂರ ಕಫೆಯಂತಹ ಫೇಮಸ್ ಹೋಟೆಲ್‌ಗಳಲ್ಲೇ ಈಗ ಗ್ಯಾಸ್ ಇಲ್ಲದೆ ಸೌದೆ ಒಲೆ ಹಚ್ಚೋ ಪರಿಸ್ಥಿತಿ ಬಂದಿದೆ. ಅಷ್ಟೇ ಅಲ್ಲ, ಮೆನುವಿನಲ್ಲಿರೋ ಅರ್ಧದಷ್ಟು ಐಟಂಗಳನ್ನು ಗ್ಯಾಸ್ ಇಲ್ಲದ ಕಾರಣಕ್ಕೆ ಕಟ್ ಮಾಡಲಾಗುತ್ತಿದೆ. ಕೊಪ್ಪಳದ ಹೋಟೆಲ್ ಮಾಲೀಕರೊಬ್ಬರು ಗ್ಯಾಸ್‌ಗೆ ಪರ್ಯಾಯವಾಗಿ 28 ಸಾವಿರ ರೂಪಾಯಿ ಕೊಟ್ಟು ಸ್ಪೆಷಲ್ ಸ್ಟವ್ ತಂದಿದ್ದಾರೆ ಅಂದ್ರೆ ಹೋಟೆಲ್ ಉದ್ಯಮಿಗಳ ಸಂಕಷ್ಟ ಎಷ್ಟಿದೆ ಅಂತ ಅರ್ಥ ಮಾಡಿಕೊಳ್ಳಬಹುದು. ಸೌದೆಗೂ ಈಗ ಭಾರಿ ಡಿಮ್ಯಾಂಡ್ ಬಂದಿದ್ದು, ಅದರ ಬೆಲೆಯೂ ಗಗನಕ್ಕೇರಿದೆ.

ಬರೀ ಮನೆ, ಹೋಟೆಲ್ ಅಷ್ಟೇ ಅಲ್ಲ, ಆಟೋ ಚಾಲಕರ ಬದುಕು ಕೂಡ ಬೀದಿಗೆ ಬಂದಿದೆ. ಬೆಂಗಳೂರಿನ ಮೈಸೂರು ರಸ್ತೆಯ ಗ್ಯಾಸ್ ಸ್ಟೇಷನ್‌ಗಳಲ್ಲಿ ನೂರಾರು ಆಟೋಗಳು ಕ್ಯೂ ನಿಂತಿವೆ. ಎಲ್ಲರಿಗೂ ಸಿಗಲಿ ಅನ್ನೋ ಕಾರಣಕ್ಕೆ ಕೇವಲ 300 ರೂಪಾಯಿಗೆ ಮಾತ್ರ ಗ್ಯಾಸ್ ತುಂಬಿಸಲಾಗ್ತಿದೆ. ಶೇಷಾದ್ರಿಪುರಂ ಸೇರಿದಂತೆ ಹಲವು ಕಡೆ ಬಂಕ್‌ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್ ರಾರಾಜಿಸ್ತಿದೆ. ಇದರಿಂದ ಆಟೋ ಚಾಲಕರಿಗೆ ದಿನದ ಕೂಲಿ ಮಾಡೋದೇ ಕಷ್ಟವಾಗಿದೆ. ಇತ್ತ ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲೂ ಇದೇ ಗೋಳು. ಗದಗದಲ್ಲಿ ತಿಂಗಳ ಹಿಂದೆ 54 ರೂಪಾಯಿ ಇದ್ದ ಆಟೋ ಗ್ಯಾಸ್ ದರ ಈಗ ಬರೋಬ್ಬರಿ 85 ರೂಪಾಯಿಗೆ ಏರಿಕೆಯಾಗಿದೆ.

ಈ ಗ್ಯಾಸ್ ಅಭಾವದಿಂದಾಗಿ ಅತ್ತ ಆಟೋ ಚಾಲಕರಿಗೂ ನಷ್ಟ, ಇತ್ತ ಪ್ರಯಾಣಿಕರಿಗೂ ಹೊಡೆತ. ಗ್ಯಾಸ್ ರೇಟ್ ಜಾಸ್ತಿ ಆಯ್ತು ಅಂತ ಚಾಲಕರು ಬಾಡಿಗೆ ದರ ಏರಿಸ್ತಿದ್ದಾರೆ, ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳ್ತಿದೆ. ಒಟ್ಟಿನಲ್ಲಿ ಯುದ್ಧ ಎಲ್ಲೋ ನಡೀತಿದ್ರೂ, ಅದರ ಬಿಸಿ ಮಾತ್ರ ಇಲ್ಲಿನ ಸಾಮಾನ್ಯ ಜನರ ಬದುಕನ್ನ ಸುಡ್ತಿದೆ. ಸರ್ಕಾರ ಶೀಘ್ರವೇ ಮಧ್ಯಪ್ರವೇಶಿಸಿ ಈ ಸಿಲಿಂಡರ್ ಸಮಸ್ಯೆಗೆ ಒಂದು ಪರಿಹಾರ ಕಂಡುಹಿಡಿಯದಿದ್ರೆ, ಜನ ಬೀದಿಗೆ ಬರೋದ್ರಲ್ಲಿ ಸಂಶಯವೇ ಇಲ್ಲ.

Latest News