ಕಣ್ಣಿನ ಕನ್ನಡಕಗಳ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಲೆನ್ಸ್‌ಕಾರ್ಟ್ (Lenskart) ಈಗ ಒಂದು ವಿಚಿತ್ರ ಮತ್ತು ಗಂಭೀರ ವಿವಾದದ ಸುಳಿಯಲ್ಲಿ ಸಿಲುಕಿದೆ. ಆಫೀಸ್ ಅಂದಮೇಲೆ ಒಂದು ಡ್ರೆಸ್‌ಕೋಡ್ ಇರುವುದು ಸಹಜ. ಆದರೆ, ಈ ಡ್ರೆಸ್‌ಕೋಡ್ ಧರ್ಮದ ವಿಚಾರಕ್ಕೆ ಬಂದು ನಿಂತಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಅಸಲಿ ವಿವಾದ ಏನು?
ಸೋಶಿಯಲ್ ಮೀಡಿಯಾದಲ್ಲಿ ಲೆನ್ಸ್‌ಕಾರ್ಟ್‌ನದ್ದೇ ಎನ್ನಲಾದ ಒಂದು 'ಆಂತರಿಕ ದಾಖಲೆ' ವೈರಲ್ ಆಗಿತ್ತು. ಅದರಲ್ಲಿ ಉದ್ಯೋಗಿಗಳಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳಿದ್ದವು:
ಹಣೆಯ ಮೇಲೆ ಬಿಂದಿ ಇಡುವಂತಿಲ್ಲ.
ಕೈಗೆ ಕಟ್ಟುವ ಧಾರ್ಮಿಕ ದಾರ ಅಥವಾ ರಿಸ್ಟ್‌ಬ್ಯಾಂಡ್‌ಗಳನ್ನು ತೆಗೆಯಬೇಕು.
ಸಿಂಧೂರ ಕೂಡ ಹಣೆಯ ಮೇಲೆ ಬೀಳದಂತೆ ಅತಿ ಕಡಿಮೆ ಇರಬೇಕು.
ಆದರೆ, ಮುಸ್ಲಿಂ ಮಹಿಳೆಯರಿಗೆ ಕಪ್ಪು ಬಣ್ಣದ ಹಿಜಾಬ್ ಧರಿಸಲು ಅವಕಾಶವಿದೆ.
ಈ ತಾರತಮ್ಯದ ನಿಯಮಗಳು ಹೊರಬರುತ್ತಿದ್ದಂತೆ ಜನ ಆಕ್ರೋಶಗೊಂಡರು. "ಹಿಂದೂ ಸಂಪ್ರದಾಯದ ಕುರುಹುಗಳಿಗೆ ನಿಷೇಧ ಹೇರಿ, ಒಂದು ಧರ್ಮಕ್ಕೆ ಮಾತ್ರ ಸವಲತ್ತು ನೀಡುವುದೇಕೆ?" ಎಂಬ ಪ್ರಶ್ನೆ ಕಾಡತೊಡಗಿತು.
ಮುಂಬೈನಲ್ಲಿ ಹೈಡ್ರಾಮಾ: ನಾಜಿಯಾ ಇಲಾಹಿ ಎಂಟ್ರಿ
ವಿವಾದ ಹೀಗಿರುವಾಗಲೇ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ನಾಜಿಯಾ ಇಲಾಹಿ ಅವರು ಮುಂಬೈನ ಲೆನ್ಸ್‌ಕಾರ್ಟ್ ಶೋ ರೂಂಗೆ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಯಕಿಯೇ ಈ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದು ವಿಶೇಷವಾಗಿತ್ತು. ಶೋ ರೂಂಗೆ ನುಗ್ಗಿದ ನಾಜಿಯಾ ಇಲಾಹಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಅಲ್ಲಿನ ಸಿಬ್ಬಂದಿಗೆ ತಿಲಕ ಹಚ್ಚಿ, ಕೈಗೆ ಪವಿತ್ರ ದಾರ (ಕಲಾವ) ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, "ಜೈ ಶ್ರೀ ರಾಮ್" ಘೋಷಣೆ ಕೂಗುತ್ತಾ, "ಧರ್ಮದ ಗುರುತನ್ನು ತೋರಿಸಿಕೊಳ್ಳಲು ಯಾರೂ ನಾಚಿಕೆಪಡಬೇಕಿಲ್ಲ" ಎಂದು ಉದ್ಯೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ. "ಮ್ಯಾನೇಜ್‌ಮೆಂಟ್ ಕ್ಷಮೆ ಕೇಳದಿದ್ದರೆ ಲೆನ್ಸ್‌ಕಾರ್ಟ್ ಮಳಿಗೆಗಳನ್ನು ಮುಚ್ಚಿಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
She @ElahiNazia1 claiming to be a BJP Minority leader is seen abusing and harassing a Muslim working in Lenskart. What does he have to do with The Lenskart controversy? If you have a problem, go confront the owner. Why harras the employees? @narendramodi pic.twitter.com/02VTnSOTG8
— Mohammed Zubair (@zoo_bear) April 20, 2026
ಸಿಬ್ಬಂದಿಯ ಅಳಲು
ಅಂಗಡಿಯ ಉದ್ಯೋಗಿಯೊಬ್ಬರು ಹೇಳುವ ಪ್ರಕಾರ, ಟ್ರೈನಿಂಗ್ ಸಮಯದಲ್ಲಿ ಅವರಿಗೆ ತಿಲಕ ಮತ್ತು ದಾರ ಧರಿಸದಂತೆ ಸೂಚನೆ ನೀಡಲಾಗಿತ್ತು. ಅಷ್ಟೇ ಅಲ್ಲ, ವಿವಾಹಿತ ಮಹಿಳೆಯರಿಗೆ ಮಂಗಳಸೂತ್ರ ಧರಿಸಲು ಕೂಡ ಅವಕಾಶ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪಿಯೂಷ್ ಬನ್ಸಾಲ್ ಹೇಳಿದ್ದೇನು?
ವಿವಾದ ದೊಡ್ಡದಾಗುತ್ತಿದ್ದಂತೆ ಲೆನ್ಸ್‌ಕಾರ್ಟ್ ಸಿಇಒ ಪಿಯೂಷ್ ಬನ್ಸಾಲ್ ಎಕ್ಸ್ (ಟ್ವಿಟರ್) ಮೂಲಕ ಸ್ಪಷ್ಟನೆ ನೀಡಿದ್ದಾರೆ.
"ವೈರಲ್ ಆಗಿರುವ ಆ ದಾಖಲೆ ಹಳೆಯದು, ಅದು ನಮ್ಮ ಇಂದಿನ ಪಾಲಿಸಿಯಲ್ಲ. ನಾವು ಕಾಲಕಾಲಕ್ಕೆ ನಿಯಮಗಳನ್ನು ಬದಲಾಯಿಸುತ್ತೇವೆ. ನಮ್ಮ ಕಂಪನಿಯಲ್ಲಿ ಬಿಂದಿ, ತಿಲಕ ಸೇರಿದಂತೆ ಯಾವುದೇ ಧಾರ್ಮಿಕ ನಂಬಿಕೆಗೆ ಅಡ್ಡಿಯಿಲ್ಲ. ನಮ್ಮ ಸಾವಿರಾರು ಉದ್ಯೋಗಿಗಳು ಪ್ರತಿದಿನ ತಮ್ಮ ಸಂಪ್ರದಾಯದಂತೆಯೇ ಕೆಲಸ ಮಾಡುತ್ತಿದ್ದಾರೆ," ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.
ವಿವಾದ - ಹಿಂದೂ ಸಂಪ್ರದಾಯದ ಗುರುತುಗಳಿಗೆ ನಿಷೇಧ, ಹಿಜಾಬ್‌ಗೆ ಸಮ್ಮತಿ ಎಂಬ ಆರೋಪ.
ಪ್ರತಿಭಟನೆ - ಮುಂಬೈ ಶಾಪ್‌ನಲ್ಲಿ ನಾಜಿಯಾ ಇಲಾಹಿ ಅವರಿಂದ ಉದ್ಯೋಗಿಗಳಿಗೆ ತಿಲಕ ಧಾರಣೆ.
ಕಂಪನಿ ಸ್ಪಷ್ಟನೆ - ಅದು ಹಳೆಯ ನಿಯಮ, ಈಗ ಅಂತಹ ಯಾವುದೇ ನಿರ್ಬಂಧವಿಲ್ಲ ಎಂದು ಸಿಇಒ ಸ್ಪಷ್ಟನೆ.
ಕಾರ್ಪೊರೇಟ್ ಜಗತ್ತಿನ ಡ್ರೆಸ್‌ಕೋಡ್ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನಡುವಿನ ಈ ಜಟಾಪಟಿ ಈಗ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.