ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಇಂದು ಮಧ್ಯಾಹ್ನ ಭೂಕಂಪದ ತಲ್ಲಣ ಉಂಟಾಗಿದೆ. ಸರಿಯಾಗಿ 1:22 ಗಂಟೆಗೆ ಭೂಮಿ ನಡುಗುತ್ತಿದ್ದಂತೆ ಗಾಬರಿಗೊಂಡ ಸಾರ್ವಜನಿಕರು ಆಫೀಸ್ ಹಾಗೂ ಮನೆಗಳನ್ನು ಬಿಟ್ಟು ರಸ್ತೆಗಳಿಗೆ ಧಾವಿಸಿದರು. ಮೊಬೈಲ್ ಫೋನ್‌ಗಳಲ್ಲಿ ಬಂದ ತುರ್ತು ಸಂದೇಶವು ಈ ಕಂಪನದ ತೀವ್ರತೆಯನ್ನು 5.0 ಎಂದು ಅಂದಾಜಿಸಿದ್ದು, ಜನರ ಆತಂಕವನ್ನು ಇಮ್ಮಡಿಗೊಳಿಸಿತು.
ಈ ಭೂಕಂಪವು ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಸಂಭವಿಸಿದೆ. ಇದರ ಕೇಂದ್ರಬಿಂದು ಬಾಂಗ್ಲಾದೇಶದ ಭೂಭಾಗದ ಒಳಗೆ ಕೇವಲ 3 ಕಿಲೋಮೀಟರ್ ದೂರದಲ್ಲಿದೆ ಎಂದು ಗುರುತಿಸಲಾಗಿದೆ. ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ ವರದಿಯ ಪ್ರಕಾರ, ಭೂಕಂಪದ ತೀವ್ರತೆಯು 5.4 ರಷ್ಟಿತ್ತು. ವಿಶೇಷವೆಂದರೆ, ಭೂಮಿಯ ಒಳಗಿನ ಕೇವಲ 35 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದೆ. ಹೀಗೆ ಕಡಿಮೆ ಆಳದಲ್ಲಿ ಭೂಕಂಪ ಸಂಭವಿಸಿದಾಗ ಅದರ ಶಕ್ತಿಯು ಮೇಲ್ಮೈಯಲ್ಲಿ ಅತಿ ವೇಗವಾಗಿ ಹರಡುವುದರಿಂದ ಕೋಲ್ಕತ್ತಾ ನಗರದಲ್ಲಿ ಹೆಚ್ಚಿನ ಕಂಪನದ ಅನುಭವವಾಗಿದೆ. ಇದು ಭಾರತದ ಗೋಸಬಾದಿಂದ ಸುಮಾರು 47 ಕಿಲೋಮೀಟರ್ ದೂರದಲ್ಲಿದೆ.
ಕಂಪನ ಉಂಟಾದದ್ದು ಕೆಲವೇ ಕ್ಷಣಗಳ ಕಾಲವಾದರೂ, ಕೋಲ್ಕತ್ತಾದಂತಹ ಬೃಹತ್ ನಗರವೇ ಒಂದು ಕ್ಷಣ ಸ್ತಬ್ದವಾಯಿತು. ಡಾಲ್‌ಹೌಸಿ ಮತ್ತು ಸಾಲ್ಟ್ ಲೇಕ್‌ನಂತಹ ಏರಿಯಾಗಳಲ್ಲಿರುವ ಸ್ಕೈಸ್ಕ್ರೇಪರ್‌ಗಳಿಂದ ಜನರು ಪ್ರಾಣ ಉಳಿಸಿಕೊಳ್ಳಲು ಕೆಳಗೆ ಧಾವಿಸಿದರು. ಕಿಟಕಿಗಳ ಗಾಜುಗಳು ಅದರುತ್ತಿದ್ದರೆ, ಮನೆಯೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾದವು. ವಿಶೇಷವೆಂದರೆ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗಲೇ ಭೂಮಿ ನಡುಗಿದ್ದರಿಂದ ಅವರು ತಮ್ಮ ಭಾಷಣ ನಿಲ್ಲಿಸಬೇಕಾಯಿತು.
ಭೂಕಂಪ ಸಂಭವಿಸಿದ ತಕ್ಷಣ ಜನರು ತಮ್ಮ ಅನುಭವಗಳನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲು ಆರಂಭಿಸಿದರು. ಮನೆಯಲ್ಲಿದ್ದ ಫ್ಯಾನ್‌ಗಳು ಅಲುಗಾಡುತ್ತಿರುವುದು, ಬಾಟಲಿಯಲ್ಲಿನ ನೀರು ಕಂಪಿಸುತ್ತಿರುವುದು ಮತ್ತು ಅಡುಗೆ ಮನೆಯ ಪಾತ್ರೆಗಳು ಕೆಳಗೆ ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿಹೋಗಿವೆ. ನಮ್ಮ ಇಡೀ ದೇಹವೇ ನಡುಗಿದಂತಾಯಿತು ಎಂದು ಎತ್ತರದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ನಿವಾಸಿಯೊಬ್ಬರು ತಮ್ಮ ಭಯವನ್ನು ವ್ಯಕ್ತಪಡಿಸಿದ್ದಾರೆ.
#BREAKING
— Nabila Jamal (@nabilajamal_) February 27, 2026
Earthquake in Kolkata
5.5 magnitude earthquake hit near Kolkata at 1:22pm IST, as per National Centre for Seismology
United States Geological Survey recorded it at 5.3 magnitude, with the epicentre 26 km southeast of Taki, West Bengal
Tremor struck at a shallow… pic.twitter.com/Rpz9X3uGRz
ಮಧ್ಯಾಹ್ನ 2:30ರ ಹೊತ್ತಿಗೆ ಬಂದ ಮಾಹಿತಿಯ ಪ್ರಕಾರ, ಅದೃಷ್ಟವಶಾತ್ ಪಶ್ಚಿಮ ಬಂಗಾಳದ ಯಾವುದೇ ಭಾಗದಲ್ಲಿ ದೊಡ್ಡ ಮಟ್ಟದ ಜೀವಹಾನಿ ಅಥವಾ ಕಟ್ಟಡಗಳು ಕುಸಿದಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಉತ್ತರ ಕೋಲ್ಕತ್ತಾದ ಹಳೆಯ ಮತ್ತು ಜನನಿಬಿಡ ಪ್ರದೇಶಗಳಲ್ಲಿನ ಕೆಲವು ಹಳೆಯ ಕಟ್ಟಡಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ತಿಂಗಳು ಫೆಬ್ರವರಿ 3 ರಂದು ಮ್ಯಾನ್ಮಾರ್ ಬಳಿ ಸಂಭವಿಸಿದ 5.9 ತೀವ್ರತೆಯ ಭೂಕಂಪದ ನಂತರ, ಕೋಲ್ಕತ್ತಾದಲ್ಲಿ ಇದು ಎರಡನೇ ಅತಿದೊಡ್ಡ ಕಂಪನವಾಗಿದೆ. ಪರಿಸ್ಥಿತಿಯನ್ನು ಗಮನಿಸುತ್ತಿರುವ ಸರ್ಕಾರವು ಜನರು ಜಾಗರೂಕರಾಗಿರುವಂತೆ ಸೂಚಿಸಿದೆ.