ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎಂಬ ಆಮಿಷಕ್ಕೆ ಒಳಗಾದ ಕೋಲಾರ ಜಿಲ್ಲೆಯ ನೂರಾರು ಅಮಾಯಕ ಸಾರ್ವಜನಿಕರು ಈಗ ಬೀದಿಗೆ ಬೀಳುವಂತಾಗಿದೆ. ಊದುಬತ್ತಿ ಹಾಗೂ ಕರ್ಪೂರ ಪ್ಯಾಕ್ ಮಾಡುವ (Work from Home) ಆಕರ್ಷಕ ಕೆಲಸ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿಯೊಂದು ಇದೀಗ ವಂಚನೆ ಎಸಗಿ ಕೈಕೊಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ. ಕೋಲಾರ ನಗರದ ಪಾಲಸಂದ್ರ ಬಡಾವಣೆಯ 4ನೇ ಕ್ರಾಸ್‌ನಲ್ಲಿ ಕಳೆದ ಒಂದು ವರ್ಷದ ಹಿಂದೆ ಆರಂಭವಾಗಿದ್ದ ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯೇ ಈ ಬೃಹತ್ ವಂಚನೆ ಜಾಲದ ಸೂತ್ರಧಾರಿಯಾಗಿದೆ.
ವಂಚನೆಯ ಜಾಲ ಹೆಣೆದಿದ್ದು ಹೇಗೆ
ಕಳೆದ ಒಂದು ವರ್ಷದ ಹಿಂದೆ ಕೋಲಾರದಲ್ಲಿ ಅದ್ದೂರಿಯಾಗಿ ತಲೆಎತ್ತಿದ ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಸಂಸ್ಥೆಯು ಮಹಿಳೆಯರು ಮತ್ತು ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಆಕರ್ಷಕ ಆಫರ್ ಒಂದನ್ನು ನೀಡಿತ್ತು. ವಿವಿಧ ಬ್ರಾಂಡ್‌ಗಳ ಊದುಬತ್ತಿ, ಕರ್ಪೂರ, ಪೇಪರ್ ಪ್ಲೇಟ್ ಹಾಗೂ ಪೇಪರ್ ಕಪ್‌ಗಳಂತಹ ದಿನಬಳಕೆಯ ವಸ್ತುಗಳನ್ನು ಪ್ಯಾಕ್ ಮಾಡುವ ಕೆಲಸವನ್ನು ಮನೆಗೇ ನೀಡುವುದಾಗಿ ಪ್ರಚಾರ ಮಾಡಿತ್ತು.
ಆದರೆ, ಈ ವಸ್ತುಗಳನ್ನು ಮನೆಗೆ ಕೊಂಡೊಯ್ಯಲು ಮತ್ತು ಕಚ್ಚಾ ಸಾಮಗ್ರಿಗಳ ಸುರಕ್ಷತೆಗಾಗಿ ಗ್ರಾಹಕರು 'ಸುರಕ್ಷತಾ ಠೇವಣಿ' (Security Deposit) ರೂಪದಲ್ಲಿ ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು.
ಕಂಪನಿಯ ಆಮಿಷ ಹೀಗಿತ್ತು
ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ ಸೆಕ್ಯೂರಿಟಿ ಡೆಪಾಸಿಟ್ ಇಟ್ಟರೆ, ತಿಂಗಳಿಗೆ ಇಂತಿಷ್ಟು ಸಾವಿರ ರೂಪಾಯಿಗಳ ಆಕರ್ಷಕ ಸಂಬಳ ಹಾಗೂ ಬೋನಸ್ ನೀಡಲಾಗುವುದು. ಹೂಡಿಕೆ ಹೆಚ್ಚಾದಂತೆ ಮಾಸಿಕ ಆದಾಯವೂ ಹೆಚ್ಚಾಗಲಿದೆ ಎಂದು ಕಂಪನಿಯ ಪ್ರತಿನಿಧಿಗಳು ಜನರನ್ನು ನಂಬಿಸಿದ್ದರು.
1 ಲಕ್ಷದಿಂದ 30 ಲಕ್ಷದವರೆಗೆ ಬಂಡವಾಳ ಹೂಡಿದ ಜನ
ಮನೆಯಲ್ಲೇ ಕುಳಿತು ಸುಲಭವಾಗಿ ಹಣ ಗಳಿಸಬಹುದು, ಅದೂ ಅಲ್ಲದೆ ಆರಂಭದಲ್ಲಿ ಕೆಲವರಿಗೆ ನಂಬಿಕೆ ಬರುವಂತೆ ಹಣ ನೀಡಿದ್ದರಿಂದ ಕೋಲಾರ ಜಿಲ್ಲೆಯ ಜನರು ಕಂಪನಿಯ ಮಾತುಗಳನ್ನು ಸತ್ಯ ಎಂದು ನಂಬಿದ್ದರು. ಮಧ್ಯಮ ವರ್ಗದ ಜನ, ಗೃಹಿಣಿಯರು, ನಿವೃತ್ತ ನೌಕರರು ತಮಗಿದ್ದ ಅಲ್ಪಸ್ವಲ್ಪ ಉಳಿತಾಯದ ಹಣ, ಚಿನ್ನಾಭರಣ ಅಡವಿಟ್ಟು ಹಾಗೂ ಸಾಲ ಸೋಲ ಮಾಡಿ ಒಬ್ಬೊಬ್ಬರಾಗಿ ಕನಿಷ್ಠ 1 ಲಕ್ಷ ರೂಪಾಯಿಯಿಂದ ಹಿಡಿದು ಬರೋಬ್ಬರಿ 30 ಲಕ್ಷ ರೂಪಾಯಿವರೆಗೆ ಬಂಡವಾಳ ಹೂಡಿದ್ದಾರೆ.
ಕಂಪನಿಯು ಕೇವಲ ಕೋಲಾರ ನಗರಕ್ಕೆ ಮಾತ್ರ ಸೀಮಿತವಾಗಿರದೆ ತನ್ನ ಜಾಲವನ್ನು ಜಿಲ್ಲೆಯಾದ್ಯಂತ ವಿಸ್ತರಿಸಿತ್ತು. ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಮಾಲೂರು ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೊಸ ಶಾಖೆಗಳನ್ನು ತೆರೆದು ಸಾರ್ವಜನಿಕರನ್ನು ಸೆಳೆಯಲಾಗಿತ್ತು. ಸಂತ್ರಸ್ತರ ಅಂದಾಜಿನ ಪ್ರಕಾರ, ಜಿಲ್ಲೆಯಾದ್ಯಂತ ಸುಮಾರು 2 ರಿಂದ 3 ಸಾವಿರ ಜನರಿಂದ ಅಂದಾಜು 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಈ ಸಂಸ್ಥೆ ಕಾನೂನುಬಾಹಿರವಾಗಿ ಸಂಗ್ರಹಿಸಿದೆ ಎನ್ನಲಾಗಿದೆ.
ಸಿಬ್ಬಂದಿ ನಾಪತ್ತೆ, ಹೂಡಿಕೆದಾರರ ಆತಂಕ
ಆರಂಭದ ಒಂದು ವರ್ಷದ ಅವಧಿಯಲ್ಲಿ ಹೂಡಿಕೆಗೆ ತಕ್ಕಂತೆ ಕಂಪನಿಯು ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಸಂಬಳ ಹಾಗೂ ಕಮಿಷನ್ ನೀಡುತ್ತಾ ಬಂದು ಸಾರ್ವಜನಿಕರಲ್ಲಿ ಭಾರೀ ನಂಬಿಕೆ ಹುಟ್ಟಿಸಿತ್ತು. ಇದನ್ನು ನೋಡಿ ಮತ್ತಷ್ಟು ಜನರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ, ಕಲೆಕ್ಷನ್ ದೊಡ್ಡ ಮಟ್ಟಕ್ಕೆ ತಲುಪುತ್ತಿದ್ದಂತೆ ಕಂಪನಿಯ ಅಸಲಿ ಬಣ್ಣ ಬಯಲಾಗಿದೆ.
ಕಳೆದ ಎರಡು ತಿಂಗಳಿಂದ ಹೂಡಿಕೆದಾರರಿಗೆ ಯಾವುದೇ ವೇತನ ನೀಡದೆ ಕಂಪನಿ ವಿಳಂಬ ಧೋರಣೆ ಅನುಸರಿಸಿದೆ. ಇದರಿಂದ ಆತಂಕಗೊಂಡ ಹೂಡಿಕೆದಾರರು ಕೋಲಾರದ ಪಾಲಸಂದ್ರ ಬಡಾವಣೆಯಲ್ಲಿರುವ ಮುಖ್ಯ ಕಚೇರಿಗೆ ಬಂದು ವಿಚಾರಿಸಿದಾಗ ಸಿಬ್ಬಂದಿಯಿಂದ ಯಾವುದೇ ಸಮಂಜಸವಾದ ಉತ್ತರ ಸಿಕ್ಕಿಲ್ಲ. ಸದ್ಯ ಕಚೇರಿಯಲ್ಲಿ ಉತ್ತರಿಸುವವರಿಲ್ಲದೆ ಸಿಬ್ಬಂದಿ ಹಾಗೂ ಮಾಲೀಕರು ನಾಪತ್ತೆಯಾಗಿದ್ದಾರೆ. ಇದರಿಂದ ವಂಚನೆಗೊಳಗಾಗಿರುವುದು ಖಚಿತವಾಗುತ್ತಿದ್ದಂತೆ, ಹಣ ಕಳೆದುಕೊಂಡ ನೂರಾರು ಅಮಾಯಕ ಜನರು ತಮ್ಮ ಕೈಯಲ್ಲಿ ಬಾಂಡ್ ಪೇಪರ್ ಹಿಡಿದುಕೊಂಡು ಕಚೇರಿ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಷ್ಟಪಟ್ಟು ದುಡಿದ ಹಣ ಕೈತಪ್ಪಿ ಹೋದದ್ದನ್ನು ಕಂಡು ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಒಂದು ವಾರ ಕಾಲಾವಕಾಶ ಕೋರಿದ ವ್ಯವಸ್ಥಾಪಕಿ ರಮ್ಯಾ
ಈ ಬೃಹತ್ ವಂಚನೆ ಪ್ರಕರಣ ಜಿಲ್ಲಾದ್ಯಂತ ತಲ್ಲಣ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಂಪನಿಯ ವ್ಯವಸ್ಥಾಪಕಿ ರಮ್ಯಾ ಎಂಬುವರು ಕೋಲಾರ ಎಸ್ಪಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಮಗೆ ಗ್ರಾಹಕರಿಂದ ಕನಿಷ್ಠ ಒಂದು ವಾರಗಳ ಕಾಲಾವಕಾಶ ಕೊಡಿಸಬೇಕು ಎಂದು ಕೋರಿದ್ದಾರೆ. ಸಾರ್ವಜನಿಕರಿಂದ ಪಡೆದ ಹಣವನ್ನು ಆದಷ್ಟು ಬೇಗ ವಾಪಸ್ ನೀಡುವುದಾಗಿ ಅವರು ಅಧಿಕಾರಿಗಳ ಸಮ್ಮುಖದಲ್ಲಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಭರವಸೆಯನ್ನು ನಂಬಲು ಸಾರ್ವಜನಿಕರು ಸಿದ್ಧರಿಲ್ಲ.
ಪೊಲೀಸ್ ಮಧ್ಯಪ್ರವೇಶ ಹಾಗೂ ನ್ಯಾಯಕ್ಕೆ ಒತ್ತಾಯ
ಮನೆಯಲ್ಲೇ ಕುಳಿತು ದುಡಿಯಬಹುದು ಎಂಬ ಆಸೆಗೆ ಬಿದ್ದು ಕಷ್ಟಪಟ್ಟು ದುಡಿದ ಹಣ, ಹೆಣ್ಣುಮಕ್ಕಳ ಮದುವೆಗೆ ಇಟ್ಟಿದ್ದ ಒಡವೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಾರ್ವಜನಿಕರು ಸಪ್ಪೆಮೋರೆ ಹಾಕಿಕೊಂಡು ಅಸಹಾಯಕರಾಗಿ ನಿಲ್ಲುವಂತಾಗಿದೆ. ಈ ಗಂಭೀರ ವಂಚನೆ ಪ್ರಕರಣದ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡರು ಹಾಗೂ ಸಂತ್ರಸ್ತ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಜಿಲ್ಲೆಯ ನೂರಾರು ಅಮಾಯಕ ಮಹಿಳೆಯರು ಮತ್ತು ಬಡ ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಪೊಲೀಸ್ ಇಲಾಖೆಯು ತಕ್ಷಣವೇ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು. ವಂಚಕ ಕಂಪನಿಯ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ, ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಬೇಕು. ಬಡ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು" ಎಂದು ಕರವೇ ಮುಖಂಡರು ತೀವ್ರವಾಗಿ ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ 'ವರ್ಕ್ ಫ್ರಮ್ ಹೋಮ್' ಹೆಸರಿನಲ್ಲಿ ನಡೆಯುತ್ತಿರುವ ಇಂತಹ ವಂಚನೆ ಜಾಲಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಲಾಭ ಅಥವಾ ಸಂಬಳ ನೀಡುವುದಾಗಿ ಹೇಳುವ ಸಂಸ್ಥೆಗಳ ಹಿನ್ನೆಲೆಯನ್ನು ಪರಿಶೀಲಿಸದೆ ಹಣ ಹೂಡಿಕೆ ಮಾಡಬಾರದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸದ್ಯ ಪ್ರಕರಣ ಪೊಲೀಸ್ ಮೆಟ್ಟಿಲೇರಿದ್ದು, ಸಂತ್ರಸ್ತರಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.