ಇವತ್ತು ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಂದಿರೋ ದಿನ. ಎಲ್ಲೆಡೆ ಪಾಸಾದ ಖುಷಿ, ಸಂಭ್ರಮ. ಕೋಲಾರದ ಆ ಮನೆಯಲ್ಲೂ ಅಷ್ಟೇ, ಮಗ ಪಾಸಾದ ಅಂತ ಎಲ್ಲರೂ ಖುಷಿಯಾಗಿದ್ರು. "ಅಮ್ಮ ನಾನು ಪಾಸ್ ಆದೆ!" ಅಂತ ಹೇಳ್ತಾ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡೋಕೆ ಹೋದ ಮಗ, ಹೆಣವಾಗಿ ಬರ್ತಾನೆ ಅಂತ ಆ ತಾಯಿ ಕನಸಿನಲ್ಲೂ ಅಂದ್ಕೊಂಡಿರಲಿಲ್ಲ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕಿರಣ್ (15) ಅನ್ನೋ ಹುಡುಗನೇ ಈ ದುರ್ಘಟನೆಗೆ ತುತ್ತಾದವನು. ಇವತ್ತು ರಿಸಲ್ಟ್ ಬಂದಾಗ ಕಿರಣ್ 625 ಕ್ಕೆ 239 ಮಾರ್ಕ್ಸ್ ತೆಗೆದು ಪಾಸ್ ಆಗಿದ್ದ. ಫ್ರೆಂಡ್ಸ್ ಜೊತೆ ಸೇರಿ ಈ ಖುಷಿಯನ್ನ ಸೆಲೆಬ್ರೇಟ್ ಮಾಡೋಕೆ ಅಂತ ಈಜಲು ಹೋಗಿದ್ದ. ಆದ್ರೆ, ವಿಧಿಯಾಟವೇ ಬೇರೆ ಇತ್ತು.
ಬಾವಿಗೆ ಈಜೋಕೆ ಇಳಿದ ಕಿರಣ್‌ಗೆ ಸರಿಯಾಗಿ ಈಜು ಬರ್ತಿರಲಿಲ್ಲವಂತೆ. ನೀರಿನ ಆಳ ಗೊತ್ತಾಗದೆ ಹೋದ ಕಿರಣ್, ಮೇಲೆ ಬರಲಾರದೆ ನೀರಿನಲ್ಲೇ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಜೊತೆಯಲ್ಲಿದ್ದ ಗೆಳೆಯರು ಗಾಬರಿಯಿಂದ ಕೂಗಾಡಿದ್ರೂ ಯಾರೂ ಅವನನ್ನ ಕಾಪಾಡೋಕೆ ಆಗಲಿಲ್ಲ.
ಮಗ ಪಾಸ್ ಆಗಿದ್ದಾನೆ ಅಂತ ಊರಿಡೀ ಸಿಹಿ ಹಂಚಬೇಕಿದ್ದ ಪೋಷಕರು, ಇವತ್ತು ಮಗನ ಶವಕ್ಕಾಗಿ ಬಾವಿ ಹತ್ತಿರ ಕಾಯುವಂತಾಗಿದೆ. ಅಗ್ನಿಶಾಮಕ ದಳದವರು ಬಂದು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪ್ಪ-ಅಮ್ಮನ ಕಣ್ಣೀರು ನೋಡುಗರ ಎದೆ ಕರಗಿಸುವಂತಿದೆ. ಇಡೀ ಊರೇ ಇವತ್ತು ಶೋಕದಲ್ಲಿ ಮುಳುಗಿದೆ.
ರಾಜ್ಯದಲ್ಲಿ ಸಾಲು ಸಾಲು 'ಜಲ' ಕಂಟಕ
ಇತ್ತೀಚೆಗೆ ಬೇಸಿಗೆ ಬಿಸಿಲು ಅಂತಲೋ ಅಥವಾ ಮೋಜು ಮಾಡೋಕೆ ಅಂತಲೋ ನೀರಿಗೆ ಇಳಿಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ಅನ್ನೋದಕ್ಕೆ ಕಳೆದ ಒಂದು ವಾರದಲ್ಲಿ ನಡೆದ ಈ ಘಟನೆಗಳೇ ಸಾಕ್ಷಿ:
ತಲಕಾಡು: ಮೊನ್ನೆ ಏಪ್ರಿಲ್ 21ಕ್ಕೆ ಕಾವೇರಿ ನದಿಯಲ್ಲಿ ಈಜೋಕೆ ಹೋದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾದ್ರು.
ಹಾಸನ: ಏಪ್ರಿಲ್ 20ಕ್ಕೆ ಕೆರೆಗೆ ಬಿದ್ದ ಅಳಿಯನನ್ನ ಉಳಿಸೋಕೆ ಹೋದ ಮಾವ ಇಬ್ಬರೂ ಸಾವನ್ನಪ್ಪಿದ್ರು.
ಪಿರಿಯಾಪಟ್ಟಣ: ಏಪ್ರಿಲ್ 19ಕ್ಕೆ ಈಜಲು ಹೋದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಹೋದ್ರು.
ಕೆ.ಆರ್. ನಗರ: ಒಂದೇ ದಿನ ನದಿಯಲ್ಲಿ ಮುಳುಗಿ ಆರು ಜನ ಪ್ರಾಣ ಕಳೆದುಕೊಂಡ ಭೀಕರ ಘಟನೆ ಕೂಡ ಏಪ್ರಿಲ್ 19ಕ್ಕೆ ನಡೆದಿತ್ತು.