ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ಕುರಿತು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಇಂದು ಸಿಕ್ಕಾಪಟ್ಟೆ ಖಾರವಾಗಿ ವಾಗ್ದಾಳಿ ನಡೆಸಿದ್ದಾರೆ. "ದೇಶದ ಜನ ಸಾಮಾನ್ಯರು ಬದುಕಲಾರದ ಪರಿಸ್ಥಿತಿಗೆ ತಲುಪಿದ್ದಾರೆ, ಇದಕ್ಕೆಲ್ಲಾ ಪಿಎಂ ಮೋದಿಯವರ ಕೆಟ್ಟ ಆಡಳಿತವೇ ನೇರ ಕಾರಣ" ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಎಣಿಸಿ ಟೀಕಿಸಿದರು. ಸದ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಖರ್ಗೆ ಅವರ ಈ ಹೇಳಿಕೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಮಲ್ಲಿಕಾರ್ಜುನ ಖರ್ಗೆ ಆರೋಪದ ಪ್ರಮುಖ ಮುಖ್ಯಾಂಶಗಳು (Highlights):
ವಿದೇಶ ಪ್ರವಾಸದ ವಿರುದ್ಧ ಟೀಕೆ: ಮೋದಿ ಅವರು ಬರೀ ವಿದೇಶ ಪ್ರವಾಸ ಮಾಡ್ತಾ ಇದ್ದಾರೆ ವಿನಃ ದೇಶಕ್ಕೆ ಯಾವುದೇ ದೊಡ್ಡ ಹೂಡಿಕೆ ತರುತ್ತಿಲ್ಲ ಎಂದು ಖರ್ಗೆ ಕಿಡಿಕಾರಿದ್ದಾರೆ.
ಬೆಲೆ ಏರಿಕೆ ಬರೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಕಮ್ಮಿಯಾದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ರೇಟ್ ಮಾತ್ರ ಇಳಿಸುತ್ತಿಲ್ಲ.
ಶ್ರೀಮಂತರಿಗೆ ಮಾತ್ರ ಲಾಭ: ಮೋದಿಯವರ ಆಡಳಿತದಲ್ಲಿ ಬಡವರು ಇನ್ನು ಬಡವರಾಗುತ್ತಿದ್ದಾರೆ, ಶ್ರೀಮಂತರು ದಿನದಿಂದ ದಿನಕ್ಕೆ ಕುಬೇರರಾಗುತ್ತಿದ್ದಾರೆ.
"ಮೋದಿ ಹೇಳೋದು ಒಂದು, ಮಾಡೋದು ಇನ್ನೊಂದು!"
ಖರ್ಗೆ ಅವರು ಕೇಂದ್ರ ಸರ್ಕಾರದ 'ಅಚ್ಛೇ ದಿನ್' ಹಣೆಪಟ್ಟಿಯನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡರು. "ನಾವು ದೇಶಕ್ಕೆ ಒನ್ ಆಫ್ ದಿ ಬೆಸ್ಟ್ ಸರ್ಕಾರ ಕೊಟ್ಟಿದ್ದೀವಿ ಅಂತ ಇವರು ದೊಡ್ಡದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಇವರ ಅಸಲಿ ಮುಖವೇ ಬೇರೆ. ಪ್ರಧಾನಿ ಮೋದಿ ಹೇಳೋದು ಒಂದು, ಬದುಕಿನಲ್ಲಿ ನಡೆದುಕೊಳ್ಳೋದು ಇನ್ನೊಂದು ರೀತಿ. ಈ ದ್ವಂದ್ವ ನಿಲುವಿನಿಂದ ಇವತ್ತು ಇಡೀ ದೇಶಕ್ಕೆ ದೊಡ್ಡ ಹಾನಿಯಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, ಮೋದಿಯವರ ಸಾಲು ಸಾಲು ವಿದೇಶಿ ಪ್ರವಾಸಗಳ ಬಗ್ಗೆ ಪ್ರಶ್ನೆ ಮಾಡಿದ ಖರ್ಗೆ, "ನಾನು ವಿದೇಶದಿಂದ ಅಷ್ಟು ತಂದೆ, ಇಷ್ಟು ಹೂಡಿಕೆ ತಂದೆ ಅಂತ ಬರೀ ಪೇಪರ್ ಸ್ಟೇಟ್‌ಮೆಂಟ್ ಕೊಡ್ತಾರೆ. ನಿಜವಾಗಿಯೂ ಆ ದುಡ್ಡು ಮತ್ತು ಯೋಜನೆಗಳು ಬಂದಿದ್ದರೆ ಎಲ್ಲಿ ಹೋಗಿವೆ? ದೇಶದಲ್ಲಿ ಹೊಸದಾಗಿ ಒಂದು ಉದ್ಯೋಗ ಸೃಷ್ಟಿಯಾಗಿಲ್ಲ, ವಿದೇಶಿಗರು ಇಲ್ಲಿ ಬಂಡವಾಳ ಹೂಡುತ್ತಿಲ್ಲ" ಎಂದು ನೇರವಾಗಿಯೇ ಚಾಟಿ ಬೀಸಿದರು.
ಕಚ್ಚಾ ತೈಲ ಬೆಲೆ ಕಮ್ಮಿಯಾದರೂ ಪೆಟ್ರೋಲ್ ರೇಟ್ ಇಳಿಸಿಲ್ಲ ಯಾಕೆ?
ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಖರ್ಗೆ ಫುಲ್ ಗರಂ ಆದರು. "ಮೋದಿ ಯಾವಾಗ ಅಧಿಕಾರಕ್ಕೆ ಬಂದಿದ್ದಾರೋ ಅಂದಿನಿಂದ ಇಂದಿನವರೆಗೆ ಪ್ರತಿಯೊಂದರ ಬೆಲೆಯೂ ರಾಕೆಟ್ ವೇಗದಲ್ಲಿ ಏರುತ್ತಲೇ ಇದೆ ವಿನಃ ಒಂದು ದಿನವೂ ಕಮ್ಮಿ ಆಗಿಲ್ಲ. ಇಂಟರ್ನ್ಯಾಷನಲ್ ಮಾರ್ಕೆಟ್‌ನಲ್ಲಿ ಕ್ರೂಡ್ ಆಯಿಲ್ ಬೆಲೆ ಪಾತಾಳಕ್ಕೆ ಬಿದ್ದಿದ್ದರೂ, ನಮ್ಮ ದೇಶದ ಜನರಿಗೆ ಮಾತ್ರ ಅದರ ಲಾಭ ಸಿಗುತ್ತಿಲ್ಲ" ಎಂದು ದೂರಿದರು.
"ಪ್ರಧಾನಿ ಮೋದಿಯವರ ಆಡಳಿತ ವೈಖರಿ ಹೇಗಿದೆ ಎಂದರೆ, ತಮಗೆ ಬೇಕಾದವರ ಪೆಟ್ರೋಲ್ ಬಂಕ್‌ಗಳಿಗೆ ಹೋಗಿ ಅವರಿಂದ ಅಭಿಪ್ರಾಯ ತಗೊಂಡು, ಅದನ್ನೇ ಇಡೀ 'ಜನಾಭಿಪ್ರಾಯ' ಅಂತ ಬಿಂಬಿಸಿಕೊಳ್ಳುತ್ತಾರೆ" ಎಂದು ಲೇವಡಿ ಮಾಡಿದರು.
ಜನರನ್ನು ಡಿವೈಡ್ ಮಾಡೋ ಪ್ಲಾನ್ ಇನ್ಮುಂದೆ ನಡೆಯಲ್ಲ!
ದೇಶದ ಎಕಾನಮಿ ಸಿಸ್ಟಮ್ ಸಂಪೂರ್ಣ ಹದಗೆಡುತ್ತಿದೆ, ದಯವಿಟ್ಟು ಇದರ ಕಡೆ ಗಮನ ಹರಿಸಿ, ಬರೀ ಊರು ಊರು ತಿರುಗಿದರೆ ಏನೂ ಪ್ರಯೋಜನವಿಲ್ಲ ಎಂದು ನಾವು ಮೊದಲೇ ಎಚ್ಚರಿಸಿದ್ದೆವು. ಆದರೂ ಪ್ರಧಾನಿ ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇವರ ಫಾರಿನ್ ಪಾಲಿಸಿಯಿಂದ ದೇಶ ಕೆಳಮಟ್ಟಕ್ಕೆ ಹೋಗುತ್ತಿರುವುದು ನಮ್ಮ ದುರ್ದೈವ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದರು.
"ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗದಂತಹ ಜೀವಂತ ಸಮಸ್ಯೆಗಳು ಎದುರಾದಾಗಲೆಲ್ಲಾ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿ ಸರ್ಕಾರ ದೇವದ ಹೆಸರನ್ನು ಬಳಸಿಕೊಳ್ಳುತ್ತದೆ ಅಥವಾ ಜನರ ಮಧ್ಯೆ ಡಿವೈಡ್ ಅಂಡ್ ರೂಲ್ (ವಿಭಜನೆ) ರಾಜಕಾರಣ ತರುತ್ತದೆ. ಆದರೆ ಈಗ ಜನ ರೊಚ್ಚಿಗೆದ್ದಿದ್ದಾರೆ, ಇಂತಹ ಗಿಮಿಕ್‌ಗಳು ಇನ್ಮುಂದೆ ವರ್ಕೌಟ್ ಆಗಲ್ಲ" ಎಂದು ಖರ್ಗೆ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ನಾಯಕರ ಇಂತಹದ್ದೇ ಪ್ರಮುಖ ವಾಗ್ದಾಳಿಗಳು ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ಸ್‌ಗಳಿಗಾಗಿ ಸದಾ ನೋಡ್ತಾ ಇರಿ ನಮ್ಮ 'ಸಪ್ತಾಶ್ವ ಟಿವಿ'!