May 2, 2026 Languages : ಕನ್ನಡ | English

ಕಾಂಗ್ರೆಸ್ ಹೈಕಮಾಂಡ್‌ನಿಂದ 'ಬಿಗ್ ಟ್ವಿಸ್ಟ್' - ಕರ್ನಾಟಕದ ಮುಂದಿನ ಸಿಎಂ ಯಾರು ಅಂತಾ ಖರ್ಗೆ ಬಾಯ್ಬಿಟ್ಟೇ ಬಿಟ್ಟರು!!

ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್ ಸಿನಿಮಾಗಿಂತಲೂ ಸಖತ್ ಟ್ವಿಸ್ಟ್ ಅಂಡ್ ಟರ್ನ್ ಪಡೆಯುತ್ತಿದ್ದ ಕರ್ನಾಟಕ ರಾಜಕೀಯದ 'ಸಿಎಂ ಬದಲಾವಣೆ' ಎಪಿಸೋಡ್‌ಗೆ ಈಗ ಒಂದು ದೊಡ್ಡ ಕ್ಲಾರಿಟಿ ಸಿಕ್ಕಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾ? ಹೈಕಮಾಂಡ್ ಏನು ಪ್ಲ್ಯಾನ್ ಮಾಡಿದೆ? ಎಂಬ ಪ್ರಶ್ನೆಗಳಿಗೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಉತ್ತರ ಕೊಟ್ಟಿದ್ದಾರೆ.

ಸಿಎಂ ಬದಲಾವಣೆ ವದಂತಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಫುಲ್ ಸ್ಟಾಪ್
ಸಿಎಂ ಬದಲಾವಣೆ ವದಂತಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಫುಲ್ ಸ್ಟಾಪ್

ನಾಯಕತ್ವ ಗೊಂದಲ ನಿಜ, ಆದ್ರೆ...

ಇಂದು ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ಸೀದಾ ವಿಷಯಕ್ಕೆ ಬಂದರು. "ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸ್ವಲ್ಪ ಮಟ್ಟಿನ ಗೊಂದಲ ಇರುವುದು ನಮಗೂ ಗೊತ್ತು, ಅದು ಶೀಘ್ರವೇ ಬಗೆಹರಿಯಲಿದೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿಗಳನ್ನು ಬದಲಿಸುವ ಯಾವುದೇ ಆಲೋಚನೆ ಪಕ್ಷದ ಮುಂದಿಲ್ಲ" ಎಂದು ಖಡಕ್ ಆಗಿ ಹೇಳುವ ಮೂಲಕ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಗಿಫ್ಟ್ ನಿರೀಕ್ಷೆಯಲ್ಲಿದ್ದವರಿಗೆ ತಣ್ಣೀರೆರಚಿದ ಖರ್ಗೆ!

ಈ ತಿಂಗಳು, ಅಂದರೆ ಮೇ 15ಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬ ಇದೆ. ಅವರ ಬೆಂಬಲಿಗರು ಮತ್ತು ಅಭಿಮಾನಿಗಳು "ಹೈಕಮಾಂಡ್ ಈ ಬಾರಿ ಡಿಕೆಶಿಗೆ ಸಿಎಂ ಪಟ್ಟದ ಗಿಫ್ಟ್ ಕೊಡಬಹುದು" ಎಂದು ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಖರ್ಗೆ ಅವರ ಇಂದಿನ ಹೇಳಿಕೆ ಈ ಆಸೆಯ ಮೇಲೆ ತಣ್ಣೀರೆರಚಿದಂತಾಗಿದೆ. ಹೈಕಮಾಂಡ್ ಸದ್ಯಕ್ಕೆ 'ಯಥಾಸ್ಥಿತಿ' (Status Quo) ಕಾಪಾಡಿಕೊಳ್ಳಲು ನಿರ್ಧರಿಸಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಖರ್ಗೆ ಸಿಎಂ ಆಗ್ತಾರಾ?

ಮಾಧ್ಯಮಗಳಲ್ಲಿ ಆಗಾಗ "ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಮುಂದಿನ ಸಿಎಂ" ಎಂಬ ಸುದ್ದಿಗಳು ಹರಿದಾಡುತ್ತಿರುತ್ತವೆ. ಈ ಬಗ್ಗೆ ತಮಾಷೆಯಾಗಿಯೇ ಉತ್ತರಿಸಿದ ಅವರು, "ನಾನು ಸಿಎಂ ಆಗಬೇಕೆಂದು ಕೆಲವರು ಹೇಳುತ್ತಾರೆ, ನೀವು ಮಾಧ್ಯಮದವರೂ ಅದನ್ನೇ ಕೇಳ್ತೀರಿ. ಆದರೆ ಕಾಂಗ್ರೆಸ್‌ನಲ್ಲಿ ವ್ಯಕ್ತಿಗಿಂತ ಪಕ್ಷದ ಸಿದ್ಧಾಂತ ಮತ್ತು ದಶಕಗಳ ದುಡಿಮೆ ಮುಖ್ಯ. ನಮ್ಮ ಪಕ್ಷದ ಪ್ರಮುಖ ನಿರ್ಧಾರಗಳನ್ನು ಸೋನಿಯಾ ಗಾಂಧಿಯವರೇ ತೆಗೆದುಕೊಳ್ಳುತ್ತಾರೆ" ಎಂದು ಜಾರಿಕೊಂಡರು.

ಸಿದ್ಧರಾಮಯ್ಯ ಕೆಲಸಕ್ಕೆ ಫುಲ್ ಮಾರ್ಕ್ಸ್!

ಸದ್ಯದ ಪರಿಸ್ಥಿತಿಯ ಬಗ್ಗೆ ವಿವರಿಸಿದ ಖರ್ಗೆ, "ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿಗಳಿದ್ದಾರೆ, ಅವರು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಕೆಲಸ ಚೆನ್ನಾಗಿ ನಡೆಯುತ್ತಿರುವಾಗ ಬದಲಾವಣೆಯ ಚರ್ಚೆಯೇ ಬರುವುದಿಲ್ಲ. ಒಂದು ವೇಳೆ ಅಂತಹ ಅನಿವಾರ್ಯತೆ ಬಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಅದಕ್ಕೆ ಇನ್ನೂ ಸಮಯವಿದೆ, ಆ ಸಮಯ ಬಂದಾಗ ನೋಡೋಣ" ಎಂದು ಹೇಳಿ ಕುತೂಹಲವನ್ನು ಹಾಗೆಯೇ ಉಳಿಸಿದ್ದಾರೆ.

ರಾಜಕೀಯ ಚಟುವಟಿಕೆ ಗರಿ

ಪಂಚ ರಾಜ್ಯಗಳ ಚುನಾವಣೆ ಮತ್ತು ಕರ್ನಾಟಕದ ಉಪಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ಒಂದು ಕಡೆ ಸಿದ್ದರಾಮಯ್ಯ ಬಣ, ಇನ್ನೊಂದು ಕಡೆ ಡಿ.ಕೆ. ಶಿವಕುಮಾರ್ ಬಣದ ಸಚಿವರು ಮತ್ತು ಶಾಸಕರು ಹೈಕಮಾಂಡ್ ನಡೆಯನ್ನು ಕಾತರದಿಂದ ಗಮನಿಸುತ್ತಿದ್ದಾರೆ.

Latest News