ತೆಲಂಗಾಣದ ರಾಜಕೀಯ ಅಂದ್ರೆ ಅಲ್ಲಿ ಕೆಸಿಆರ್ ಕುಟುಂಬದ್ದೇ ಹವಾ. ಇಷ್ಟು ದಿನ ತಂದೆ ಕಟ್ಟಿದ ಭಾರತ ರಾಷ್ಟ್ರ ಸಮಿತಿ (BRS) ಪಕ್ಷದಲ್ಲಿ ಆಕ್ಟಿವ್ ಆಗಿದ್ದ ಕೆ. ಕವಿತಾ, ಈಗ ವಿರೋಧ ಪಕ್ಷಗಳಿಗೆ ಮಾತ್ರವಲ್ಲ, ಸ್ವಂತ ಕುಟುಂಬಕ್ಕೂ ಶಾಕ್ ನೀಡಿದ್ದಾರೆ. ಶನಿವಾರ ಅವರು ‘ತೆಲಂಗಾಣ ರಾಷ್ಟ್ರ ಸೇನಾ’ (TRS) ಎಂಬ ಹೊಸ ಪಕ್ಷವನ್ನು ಘೋಷಣೆ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.
ಕೆ. ಕವಿತಾ ಅವರು ಬಿಆರ್‌ಎಸ್ ಪಕ್ಷದಲ್ಲಿ ಬಹಳ ಪವರ್‌ಫುಲ್ ನಾಯಕಿಯಾಗಿದ್ದರು. ಆದರೆ, ಕಳೆದ ಕೆಲವು ಸಮಯದಿಂದ ಪಕ್ಷದ ನಾಯಕತ್ವದ ಜೊತೆ ಅವರಿಗೆ ಅಷ್ಟೊಂದು ಸರಿ ಬರುತ್ತಿರಲಿಲ್ಲ ಎನ್ನಲಾಗಿದೆ. ಈ ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಹೋಯಿತು ಅಂದ್ರೆ, 2025ರ ಜೂನ್‌ನಲ್ಲಿ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದಾದ ಬೆನ್ನಲ್ಲೇ ಕವಿತಾ ಅವರು ತಮ್ಮ ಎಂಎಲ್ಸಿ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.
ಗೊತ್ತಿರಲಿ, ಕೆಸಿಆರ್ ಅವರು ಮೊದಲು ತೆಲಂಗಾಣ ಹೋರಾಟದ ಸಮಯದಲ್ಲಿ ಕಟ್ಟಿದ್ದ ಪಕ್ಷದ ಹೆಸರು ಕೂಡ 'ತೆಲಂಗಾಣ ರಾಷ್ಟ್ರ ಸಮಿತಿ' (TRS) ಎಂದೇ ಇತ್ತು. ನಂತರ ಅವರು ಅದನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು 'ಬಿಆರ್‌ಎಸ್' ಎಂದು ಬದಲಿಸಿದ್ದರು. ಈಗ ಮಗಳು ಕವಿತಾ ಅವರು ತಮ್ಮ ಹೊಸ ಪಕ್ಷಕ್ಕೆ ‘ತೆಲಂಗಾಣ ರಾಷ್ಟ್ರ ಸೇನಾ’ ಎಂದು ಹೆಸರಿಟ್ಟಿರುವುದು ಬಹಳ ಚರ್ಚೆಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ಮೊದಲು ಅವರು ‘ತೆಲಂಗಾಣ ಪ್ರಜಾ ಜಾಗೃತಿ’ ಎಂಬ ಹೆಸರನ್ನು ಅಂದುಕೊಂಡಿದ್ದರಂತೆ, ಆದರೆ ಕೊನೆಗೆ 'ಸೇನಾ' ಎಂಬ ಹೆಸರಿಗೆ ಫಿಕ್ಸ್ ಆಗಿದ್ದಾರೆ.
ಜನರ ನಡುವೆ ಕವಿತಾ ಪಾದಯಾತ್ರೆ
ಪಕ್ಷದಿಂದ ಹೊರಬಂದ ಮೇಲೆ ಕವಿತಾ ಸುಮ್ಮನೆ ಕೂರಲಿಲ್ಲ. ತಮ್ಮದೇ ಆದ ‘ತೆಲಂಗಾಣ ಜಾಗೃತಿ’ ಸಂಘಟನೆಯ ಮೂಲಕ ಜನರನ್ನು ತಲುಪುವ ಕೆಲಸ ಮಾಡಿದರು. ‘ಜಾಗೃತಿ ಜನಮ್ ಬಾಟ’ ಎಂಬ ಯಾತ್ರೆಯನ್ನು ನಡೆಸಿ ರಾಜ್ಯದ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟ-ಸುಖ ವಿಚಾರಿಸಿದ್ದರು. ಅಲ್ಲಿ ಸಿಕ್ಕ ಬೆಂಬಲವೇ ಈಗ ಅವರು ಹೊಸ ಪಕ್ಷ ಕಟ್ಟಲು ಅಡಿಪಾಯವಾಗಿದೆ ಎನ್ನಲಾಗುತ್ತಿದೆ.
ತೆಲಂಗಾಣದಲ್ಲಿ ಈಗ ಬಿಆರ್‌ಎಸ್ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ದೊಡ್ಡ ಪೈಪೋಟಿ ನೀಡುತ್ತಿವೆ. ಇಂಥಾ ಹೊತ್ತಿನಲ್ಲಿ ಕೆಸಿಆರ್ ಮಗಳೇ ಹೊಸ ಪಕ್ಷ ಕಟ್ಟಿರುವುದು ಮತಗಳನ್ನು ವಿಭಜನೆ ಮಾಡುತ್ತಾ? ಅಥವಾ ತೆಲಂಗಾಣದ ಹೊಸ ಶಕ್ತಿಯಾಗಿ ಈ ‘ತೆಲಂಗಾಣ ರಾಷ್ಟ್ರ ಸೇನಾ’ ಹೊರಹೊಮ್ಮುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.
ತೆಲಂಗಾಣದ ಅಂಗಳದಲ್ಲಿ ಈಗ ಅಪ್ಪ ಒಂದು ಕಡೆ, ಮಗಳು ಇನ್ನೊಂದು ಕಡೆ ಎನ್ನುವಂತಾಗಿದೆ. ಇದು ಕೇವಲ ರಾಜಕೀಯ ಸಂಘರ್ಷವೋ ಅಥವಾ ತಂದೆ-ಮಗಳ ನಡುವಿನ ಸೈದ್ಧಾಂತಿಕ ಹೋರಾಟವೋ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.