ಮನೆ ಬಿಟ್ಟು ಹೊರಡುವ ಮುನ್ನ ಛತ್ರಿ ಮರೀಬೇಡಿ - ಮುಂದಿನ ಒಂದು ವಾರ ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ; ಎಲ್ಲೆಲ್ಲಿ ಗೊತ್ತಾ?

ಸುಡುಬಿಸಿಲಿನ ಧಗಧಗಕ್ಕೆ ಕಂಗೆಟ್ಟು, 'ಅಬ್ಬಾ.. ಯಾವಾಗಪ್ಪಾ ಮಳೆ ಬರುತ್ತೆ' ಅಂತ ಕಾಯ್ತಿದ್ದ ಜನರಿಗೆ ವರುಣದೇವ ಕೊನೆಗೂ ತಂಪೆರೆದಿದ್ದಾನೆ. ಆದರೆ, ಸದ್ಯಕ್ಕೆ ಈ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಭರ್ಜರಿಯಾಗಿಯೇ ಬ್ಯಾಟಿಂಗ್ ಮಾಡಲಿದೆ ಎಂದು ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿವೆ. ಬುಧವಾರದಿಂದಲೇ ಶುರುವಾಗಲಿರುವ ಈ ಆರ್ಭಟಕ್ಕೆ ಈಗಾಗಲೇ ಹಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ಮುಂದಿನ 1 ವಾರ ಇಡೀ ಕರ್ನಾಟಕ ಕೂಲ್ ಕೂಲ್; | Photo Credit: AI
ಮುಂದಿನ 1 ವಾರ ಇಡೀ ಕರ್ನಾಟಕ ಕೂಲ್ ಕೂಲ್; | Photo Credit: AI

ಹಾಗಾದರೆ, ನಿಮ್ಮ ಜಿಲ್ಲೆಯಲ್ಲಿ ಮಳೆ ಪರಿಸ್ಥಿತಿ ಹೇಗಿರಲಿದೆ? ವಿದ್ಯುತ್ ಅವಘಡಗಳಿಂದ ಬಚಾವಾಗಲು ಏನೆಲ್ಲಾ ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಎಲ್ಲೆಲ್ಲಿ ಅಲರ್ಟ್? ನಿಮ್ಮ ಜಿಲ್ಲೆಯ ಕಥೆ ಏನು?

ರಾಜ್ಯದ ಬಹುತೇಕ ಕಡೆಗಳಲ್ಲಿ ಗುಡುಗು, ಮಿಂಚು ಮತ್ತು ಜೋರಾದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಹಾಗೂ ರೈತರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಜಿಲ್ಲಾವಾರು ಮಳೆಯ ಮುನ್ಸೂಚನೆ ಹೀಗಿದೆ;

ಯೆಲ್ಲೋ ಅಲರ್ಟ್ ಜಿಲ್ಲೆಗಳು - ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳನ್ನು ಬಿಟ್ಟು, ಇಡೀ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಿಗೆ ಬುಧವಾರ ಕಟ್ಟುನಿಟ್ಟಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.

ದಕ್ಷಿಣ ಒಳನಾಡು - ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಿರುಗಾಳಿ ಜೊತೆಗೆ ಭಾರಿ ಮಳೆಯಾಗುವ ಲಕ್ಷಣಗಳಿವೆ. ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ದಾವಣಗೆರೆ, ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ವಿಜಯನಗರದಲ್ಲೂ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡು - ಬೆಳಗಾವಿ, ಧಾರವಾಡ, ಹಾವೇರಿ, ಗಗದ ಹಾಗೂ ಬಾಗಲಕೋಟೆಯಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಕಟುವಾದ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗಲಿದೆ. ರಾಯಚೂರು ಮತ್ತು ಕೊಪ್ಪಳದಲ್ಲೂ ಬಿರುಗಾಳಿ ಸಹಿತ ಗುಡುಗು ಮಳೆಯಾಗುವ ಸಂಭವವಿದೆ.

ಕರಾವಳಿ ಭಾಗ - ಮಂಗಳೂರು (ದಕ್ಷಿಣ ಕನ್ನಡ), ಉಡುಪಿ ಮತ್ತು ಕಾರವಾರ (ಉತ್ತರ ಕನ್ನಡ) ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಮೇ 24 ರ ನಂತರ ಗಾಳಿಯ ವೇಗ ಕೊಂಚ ಕಡಿಮೆಯಾದರೂ, ಮಳೆ ಮಾತ್ರ ಮುಂದುವರಿಯಲಿದೆ.

ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಕಳೆದ ಮಂಗಳವಾರ ಬೆಳಗಿನ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಹಾಗೂ ಬೆಳಗಾವಿಯ ಬೈಲಹೊಂಗಲದಲ್ಲಿ ಭರ್ಜರಿ 6 ಸೆಂ.ಮೀ ಮಳೆಯಾಗಿದೆ. ಚಿತ್ರದುರ್ಗದ ನಾಯಕನಹಟ್ಟಿ, ತುಮಕೂರಿನ ವೈ.ಎನ್. ಹೊಸಕೋಟೆ ಮತ್ತು ಮಂಡ್ಯದ ಮದ್ದೂರಿನಲ್ಲಿ ತಲಾ 5 ಸೆಂ.ಮೀ ಮಳೆ ಸುರಿದು ಇಡೀ ವಾತಾವರಣ ಕೂಲ್ ಕೂಲ್ ಆಗಿದೆ.

ಸೆಸ್ಕ್ (CESC) ನೀಡಿದ ಪ್ರಮುಖ ಸುರಕ್ಷತಾ ಮಾರ್ಗಸೂಚಿಗಳು

ಮಳೆಗಾಲ ಬಂತೆಂದರೆ ಸಾಕು, ಮಳೆಗಿಂತ ಹೆಚ್ಚಾಗಿ ವಿದ್ಯುತ್ ಅವಘಡಗಳ ಭಯವೇ ಜಾಸ್ತಿ. ಬಿರುಗಾಳಿಗೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿಯುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC Mysore) ಸಾರ್ವಜನಿಕರ ಸುರಕ್ಷತೆಗಾಗಿ ಕೆಲವು ಮುಖ್ಯ ಟಿಪ್ಸ್‌ಗಳನ್ನು ನೀಡಿದೆ:

ಕಂಬಗಳಿಂದ ದೂರವಿರಿ - ಮಳೆ ಮತ್ತು ಗುಡುಗು-ಮಿಂಚು ಇರುವಾಗ ಯಾವುದೇ ಕಾರಣಕ್ಕೂ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ನೆಲಕ್ಕೆ ಬಿದ್ದಿರುವ ವಿದ್ಯುತ್ ತಂತಿಗಳ ಹತ್ತಿರ ಹೋಗಬೇಡಿ.

ನೀರಿನಲ್ಲಿ ನಡೆಯುವಾಗ ಹುಷಾರ್ - ರಸ್ತೆಯಲ್ಲಿ ಮಳೆ ನೀರು ನಿಂತಿದ್ದರೆ, ಅಲ್ಲಿ ನಡೆದಾಡುವಾಗ ತುಂಬಾನೇ ಜಾಗ್ರತೆ ವಹಿಸಿ. ಎಲ್ಲಾದರೂ ವಿದ್ಯುತ್ ಲೈನ್ ಕಟ್ ಆಗಿ ಬಿದ್ದಿದ್ದರೆ ಅಪಾಯ ಗ್ಯಾರಂಟಿ.

ತಕ್ಷಣ ಮಾಹಿತಿ ನೀಡಿ - ನಿಮ್ಮ ಏರಿಯಾದಲ್ಲಿ ಎಲ್ಲಾದರೂ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಕಣ್ಣಿಗೆ ಬಿದ್ದರೆ, ಸಾಹಸ ಮಾಡದೇ ತಕ್ಷಣವೇ ವಿದ್ಯುತ್ ಇಲಾಖೆಗೆ ಫೋನ್ ಮಾಡಿ ತಿಳಿಸಿ.

ಮಕ್ಕಳ ಮೇಲೆ ನಿಗಾ ಇರಲಿ - ಹೊರಗಡೆ ಆಟ ಆಡಲು ಹೋಗುವ ಮಕ್ಕಳು ವಿದ್ಯುತ್ ಕಂಬಗಳನ್ನ ಮುಟ್ಟುವುದು ಅಥವಾ ಅದರ ಸುತ್ತಮುತ್ತ ಆಟ ಆಡುವುದನ್ನು ಪೋಷಕರು ಕಡ್ಡಾಯವಾಗಿ ತಡೆಯಬೇಕು.

ಸಹಾಯವಾಣಿ ಸಂಖ್ಯೆ 1912 - ವಿದ್ಯುತ್ ಕೈಕೊಟ್ಟರೆ ಅಥವಾ ಯಾವುದೇ ತುರ್ತು ದೂರುಗಳಿದ್ದರೆ, 24 ಗಂಟೆಯೂ ಕೆಲಸ ಮಾಡುವ ಸೆಸ್ಕ್ ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಿ ಕಂಪ್ಲೇಂಟ್ ರಿಜಿಸ್ಟರ್ ಮಾಡಬಹುದು.

ಒಟ್ಟಿನಲ್ಲಿ, ಮುಂದಿನ ಒಂದು ವಾರ ಹೊರಗಡೆ ಹೋಗುವ ಮುನ್ನ ಛತ್ರಿ ಅಥವಾ ರೇನ್‌ಕೋಟ್ ಹಿಡಿದುಕೊಂಡು ಹೋಗುವುದನ್ನು ಮರೆಯಬೇಡಿ. ವಾಹನ ಸವಾರರು ರಸ್ತೆಯಲ್ಲಿ ಜಾಗರೂಕರಾಗಿರಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡಿ!

Latest News

Related News