May 7, 2026 Languages : ಕನ್ನಡ | English

ಸೋನಿಯಾ-ರಾಹುಲ್-ಖರ್ಗೆ ಏನು ಹೇಳ್ತಾರೋ ಅದೇ ನಮಗೆ 'ಪ್ರಸಾದ' - ಎಂ.ಬಿ. ಪಾಟೀಲ್ ಕೊಟ್ಟ ಸಂದೇಶ ಇಲ್ಲಿದೆ!!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತಾ? ಮುಖ್ಯಮಂತ್ರಿ ಕುರ್ಚಿ ಬದಲಾಗುತ್ತಾ? ಎನ್ನುವ ಪ್ರಶ್ನೆಗಳು ಕಳೆದ ಕೆಲವು ದಿನಗಳಿಂದ ಸಖತ್ ಸದ್ದು ಮಾಡುತ್ತಿವೆ. ಈ ಗೊಂದಲಗಳ ನಡುವೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರು, ಪಕ್ಷದ ಶಿಸ್ತು ಮತ್ತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕಮಾಂಡ್ ಸುಪ್ರೀಂ, ಅವರದ್ದೇ ಅಂತಿಮ ನಿರ್ಧಾರ
ಹೈಕಮಾಂಡ್ ಸುಪ್ರೀಂ, ಅವರದ್ದೇ ಅಂತಿಮ ನಿರ್ಧಾರ

ವರಿಷ್ಠರ ನಿರ್ಧಾರವೇ ಅಂತಿಮ

ಸಿಎಂ ಬದಲಾವಣೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲರು, "ನಮ್ಮ ಪಕ್ಷದಲ್ಲಿ ಅಂತಿಮ ನಿರ್ಧಾರ ತಗೆದುಕೊಳ್ಳುವುದು ಕಾಂಗ್ರೆಸ್ ವರಿಷ್ಠ ಮಂಡಳಿ. ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಏನು ತೀರ್ಮಾನ ಮಾಡುತ್ತಾರೋ ಅದೇ ನಮಗೆ ಅಂತಿಮ," ಎಂದು ಹೇಳಿದರು. ಪಕ್ಷದ ಆಂತರಿಕ ವಿಚಾರಗಳನ್ನು ಹೈಕಮಾಂಡ್ ಮಟ್ಟದಲ್ಲೇ ಬಗೆಹರಿಸಲಾಗುತ್ತದೆ ಎನ್ನುವುದು ಅವರ ಮಾತಿನ ಸಾರವಾಗಿತ್ತು.

ಹೈಕಮಾಂಡ್ ಈಸ್ ಸುಪ್ರೀಂ!

ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುತ್ತಾ ಪಾಟೀಲರು, "ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ; ತಮಿಳುನಾಡು ಇರಲಿ, ಪಶ್ಚಿಮ ಬಂಗಾಳ ಇರಲಿ ಅಥವಾ ದೇಶದ ಯಾವುದೇ ಮೂಲೆಯಿರಲಿ, ಎಲ್ಲ ಕಡೆಯೂ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ. ಎಲ್ಲವನ್ನೂ ವರಿಷ್ಠರೇ ನಿರ್ಣಯ ಮಾಡುತ್ತಾರೆ," ಎಂದರು. ಆ ಮೂಲಕ ರಾಜ್ಯ ನಾಯಕರ ನಡುವಿನ ಯಾವುದೇ ವೈಯಕ್ತಿಕ ಅಭಿಪ್ರಾಯಗಳಿಗಿಂತ ಪಕ್ಷದ ನಾಯಕತ್ವದ ತೀರ್ಮಾನವೇ ದೊಡ್ಡದು ಎಂದು ಅವರು ಬಿಂಬಿಸಿದರು.

ವೇಣುಗೋಪಾಲ ಅವರ ಪಾತ್ರ

ಕೆ.ಸಿ. ವೇಣುಗೋಪಾಲ ಅವರ ಭೇಟಿ ಮತ್ತು ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "ವೇಣುಗೋಪಾಲ ಅವರು ಹೈಕಮಾಂಡ್‌ನ ಒಂದು ಪ್ರಮುಖ ಭಾಗ. ಅವರು ನೀಡುವ ಸೂಚನೆಗಳು ಮತ್ತು ತೆಗೆದುಕೊಳ್ಳುವ ನಿರ್ಧಾರಗಳು ವರಿಷ್ಠರ ನಿರ್ಣಯವನ್ನೇ ಪ್ರತಿಅನಿಧಿಸುತ್ತವೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳನ್ನು ಪಕ್ಷದ ಹೈಕಮಾಂಡ್ ಗಮನಿಸುತ್ತಿರುತ್ತದೆ," ಎಂದು ತಿಳಿಸಿದರು.

ಗೊಂದಲಗಳಿಗೆ ತೆರೆ ಬೀಳುತ್ತಾ?

ವಿವಿಧ ಸಚಿವರು ಮತ್ತು ಶಾಸಕರು ನೀಡುತ್ತಿರುವ ಪರ-ವಿರೋಧದ ಹೇಳಿಕೆಗಳಿಂದ ರಾಜ್ಯ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂಬ ಆತಂಕದ ನಡುವೆ, ಎಂ.ಬಿ. ಪಾಟೀಲರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ವರಿಷ್ಠರು ಸದ್ಯದಲ್ಲೇ ಈ ಎಲ್ಲಾ ಗೊಂದಲಗಳಿಗೆ ಫುಲ್‌ಸ್ಟಾಪ್ ಇಡಲಿದ್ದಾರೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

ಸಿಎಂ ಬದಲಾವಣೆ ವಿಚಾರದಲ್ಲಿ ಯಾರೇ ಏನೇ ಹೇಳಿಕೆ ನೀಡಿದರೂ, ಅಂತಿಮವಾಗಿ ದೆಹಲಿಯ ನಾಯಕರು ಏನು ಹೇಳುತ್ತಾರೋ ಅದರಂತೆ ರಾಜ್ಯ ರಾಜಕೀಯ ಸಾಗಲಿದೆ ಎಂಬುದು ಸಚಿವ ಎಂ.ಬಿ. ಪಾಟೀಲರ ಮಾತಿನ ಒಟ್ಟಾರೆ ಸಾರಾಂಶವಾಗಿದೆ.

Latest News