ರೈತ ಬಾಂಧವರಿಗೆ ಹಾಗೂ ರಾಜ್ಯದ ಜನತೆಗೆ ಒಂದು ಸೂಪರ್ ಗುಡ್ ನ್ಯೂಸ್! ಈ ಸಲ ನೈಋತ್ಯ ಮುಂಗಾರು ಮಳೆ ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿಯೇ ನಮ್ಮ ಭೂಮಿಗೆ ತಂಪು ಎರೆಯಲು ರೆಡಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಲೇಟೆಸ್ಟ್ ರಿಪೋರ್ಟ್ ಪ್ರಕಾರ, ವಾಡಿಕೆಯಂತೆ ಜೂನ್ 1 ಕ್ಕೆ ಬರಬೇಕಾಗಿದ್ದ ಮುಂಗಾರು ಮಳೆ, ಈ ಬಾರಿ ನಾಲ್ಕೈದು ದಿನ ಮುಂಚಿತವಾಗಿ ಅಂದರೆ ಮೇ 26 ರಂದೇ ಕೇರಳ ಕರಾವಳಿಗೆ ಎಂಟ್ರಿ ಕೊಡಲಿದೆಯಂತೆ !
ಕಳೆದ ವರ್ಷ ಸರಿಯಾಗಿ ಮಳೆಯಾಗದೆ ತೀವ್ರ ಬರಗಾಲದಿಂದ ಕಂಗಾಲಾಗಿದ್ದ ನಮ್ಮ ಕರುನಾಡಿನ ರೈತರಿಗೆ ಈ ಸುದ್ದಿ ನಿಜಕ್ಕೂ ದೊಡ್ಡ ರಿಲೀಫ್ ಕೊಟ್ಟಿದೆ. ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ದಾಟಿ ಮುಂಗಾರು ಮಾರುತಗಳು ಕೇರಳದ ಕಡೆಗೆ ಫುಲ್ ಸ್ಪೀಡ್‌ನಲ್ಲಿ ಮುನ್ನುಗ್ಗುತ್ತಿವೆ!
ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಯಾವಾಗ?
ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 5 ರಿಂದ 7 ದಿನಗಳ ನಂತರ ಅದು ಕರ್ನಾಟಕಕ್ಕೆ ಕಾಲಿಡುತ್ತದೆ. ಈ ಲೆಕ್ಕಾಚಾರದ ಪ್ರಕಾರ ನೋಡಿದರೆ, ಜೂನ್ ಮೊದಲ ವಾರದ ಆರಂಭದಲ್ಲೇ ಅಂದರೆ ಜೂನ್ 2 ರಿಂದ ಜೂನ್ 5 ರ ಒಳಗಾಗಿ ಕರ್ನಾಟಕಕ್ಕೆ ಅಧಿಕೃತವಾಗಿ ಮುಂಗಾರು ಮಳೆ ಮುಟ್ಟಲಿದೆ. ಜೂನ್ ತಿಂಗಳ ಆರಂಭದಲ್ಲೇ ಮಳೆ ಶುರುವಾಗುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಇದು ಸೂಕ್ತ ಸಮಯ.
ಮುಂದಿನ 7 ದಿನ ಹೇಗಿರಲಿದೆ ಹವಾಮಾನ?
ಮುಂಗಾರು ಮಳೆ ಅಧಿಕೃತವಾಗಿ ಬರುವುದಕ್ಕೂ ಮುನ್ನವೇ ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ (Depression) ಪ್ರಭಾವ ರಾಜ್ಯದ ಮೇಲೆ ಜೋರಾಗಿದೆ. ಮುಂದಿನ ಒಂದು ವಾರಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹವಾಮಾನದಲ್ಲಿ ಭಾರಿ ಏರುಪೇರು ಕಂಡುಬರಲಿದೆ.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಸಹನೀಯ ಬಿಸಿಲು ಮತ್ತು ಸೆಕೆ ಇದ್ದರೆ, ಮಧ್ಯಾಹ್ನದ ನಂತರ ದಿಢೀರನೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಸಂಜೆ ಅಥವಾ ರಾತ್ರಿ ಹೊತ್ತಿಗೆ ಗುಡುಗು, ಸಿಡಿಲು ಸಹಿತ ಜೋರು ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ಉತ್ತರ ಒಳನಾಡಿಗೆ ‘ಆರೆಂಜ್ ಅಲರ್ಟ್’ (Orange Alert)
ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳ ಜನರೇ ಸ್ವಲ್ಪ ಎಚ್ಚರ! ಈ ಭಾಗದಲ್ಲಿ ಹವಾಮಾನ ಇಲಾಖೆ ಮತ್ತು KSNDMC ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಬರೀ ಮಳೆ ಅಷ್ಟೇ ಅಲ್ಲ, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಸಖತ್ ಬಿರುಗಾಳಿ ಬೀಸಲಿದೆ. ಇದರ ಜೊತೆಗೆ ಪ್ರಮುಖವಾಗಿ ಆಲಿಕಲ್ಲು ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಜನರು ಜಾಗರೂಕರಾಗಿರಬೇಕು.
ದಕ್ಷಿಣ ಒಳನಾಡಿಗೆ - ‘ಯೆಲ್ಲೋ ಅಲರ್ಟ್’ (Yellow Alert):
ಇತ್ತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಇರಲಿದ್ದು, ಮೇ 18 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇಲ್ಲಿ ಸುಮಾರು 64.5mm ನಿಂದ 115.5mm ವರೆಗೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು;
ಮಳೆ ಬರುವಾಗ ರೋಮಾಂಚನ ನೀಡುವುದು ನಿಜ, ಆದರೆ ಬಿರುಗಾಳಿ ಮತ್ತು ಸಿಡಿಲಿನ ಸಮಯದಲ್ಲಿ ನಿರ್ಲಕ್ಷ್ಯ ಬೇಡ. ಹವಾಮಾನ ಇಲಾಖೆ ನೀಡಿರುವ ಪ್ರಮುಖ ಗೈಡ್‌ಲೈನ್ಸ್ ಇಲ್ಲಿದೆ:
ಮರಗಳ ಕೆಳಗೆ ನಿಲ್ಲಬೇಡಿ - ಬಿರುಗಾಳಿ ಜೋರಾಗಿರುವುದರಿಂದ ಮರಗಳು ಉರುಳಿ ಬೀಳುವ ಚಾನ್ಸ್ ಇರುತ್ತದೆ. ಸಿಡಿಲು ಬಡಿಯುವಾಗ ಮರದ ಕೆಳಗೆ ಆಶ್ರಯ ಪಡೆಯುವುದು ತುಂಬಾ ಅಪಾಯಕಾರಿ.
ವಿದ್ಯುತ್ ಕಂಬಗಳಿಂದ ದೂರವಿರಿ - ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳ ಹತ್ತಿರ ವಾಹನಗಳನ್ನು ಪಾರ್ಕ್ ಮಾಡಬೇಡಿ.
ಮನೆಯೊಳಗಿರಿ - ಗುಡುಗು ಸಿಡಿಲು ಆರಂಭವಾದಾಗ ಬಯಲು ಪ್ರದೇಶದಲ್ಲಿದ್ದರೆ ತಕ್ಷಣ ಸುರಕ್ಷಿತ ಕಟ್ಟಡಗಳ ಒಳಗೆ ಹೋಗಿ. ಮನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳ ಪ್ಲಗ್‌ಗಳನ್ನು ತೆಗೆದುಹಾಕಿ.
ರೈತರ ವಲಯದಲ್ಲಿ ಹರ್ಷದ ವಾತಾವರಣ (Ground Report)
ಹವಾಮಾನ ಇಲಾಖೆಯ ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಪ್ರಮುಖ ಕೃಷಿ ಪ್ರಧಾನ ಜಿಲ್ಲೆಗಳ ರೈತರಲ್ಲಿ ಹೊಸ ಕಳೆ ಬಂದಿದೆ. "ಕಳೆದ ವರ್ಷ ಮಳೆಯಿಲ್ಲದೆ ಬೆಳೆಗಳೆಲ್ಲ ಕಣ್ಣೆದುರೇ ಒಣಗಿ ಹೋಗಿದ್ದವು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆದರೆ ಈ ಸಲ ಮುಂಗಾರು ಬೇಗ ಬರುತ್ತಿರುವುದು ಕೇಳಿ ತುಂಬಾ ಖುಷಿಯಾಗಿದೆ. ಈಗಾಗೇ ಬೀಳುತ್ತಿರುವ ಪ್ರಿ-ಮಾನ್ಸೂನ್ ಮಳೆಯಿಂದ ಒಣಗಿದ್ದ ಭೂಮಿಯನ್ನು ಹದ ಮಾಡಿಕೊಳ್ಳಲು ಹೆಲ್ಪ್ ಆಗಿದೆ. ಜೂನ್ ಮೊದಲ ವಾರದಲ್ಲೇ ಬಿತ್ತನೆ ಕಾರ್ಯ ಶುರು ಮಾಡುತ್ತೇವೆ" ಎಂದು ರೈತರು ತಮ್ಮ ಆಶಾವಾದವನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಈ ಬಾರಿಯ ಮುಂಗಾರು ಆರಂಭದಲ್ಲೇ ಭರವಸೆಯ ಮೂಟೆಯನ್ನು ಹೊತ್ತು ತರುತ್ತಿದೆ. ಪ್ರಕೃತಿಯ ಮುನಿಸು ಕಡಿಮೆಯಾಗಿ, ಧರೆಗೆ ಮಳೆರಾಯ ತಂಪು ತರಲಿ, ರೈತರ ಬಾಳಿನಲ್ಲಿ ಹಸಿರು ನಗಲಿ ಎಂಬುದೇ ಎಲ್ಲರ ಆಶಯ.