Mar 30, 2026 Languages : ಕನ್ನಡ | English

ಐಪಿಎಲ್ ಟಿಕೆಟ್ ಗಲಾಟೆ ಅಂತ್ಯ - ಡಿಕೆಶಿ ಮಧ್ಯಸ್ಥಿಕೆಯಲ್ಲಿ ಶಾಸಕರಿಗೆ ಬಂಪರ್!!

ಬೆಂಗಳೂರಿನಲ್ಲಿ ಐಪಿಎಲ್ ಕ್ರೇಜ್ ಅಂದ್ರೆ ಸುಮ್ಮನೇನಾ? ಮೈದಾನದಲ್ಲಿ ಸಿಕ್ಸರ್-ಫೋರ್‌ಗಳ ಮಳೆ ಸುರಿಯುತ್ತಿದ್ದರೆ, ಇತ್ತ ವಿಧಾನಸೌಧದ ಒಳಗೂ 'ಐಪಿಎಲ್ ಟಿಕೆಟ್'ದ್ದೇ ಸದ್ದು! ಹೌದು, ಕಳೆದ ಕೆಲವು ದಿನಗಳಿಂದ ಶಾಸಕರು ನಮಗೂ ಐಪಿಎಲ್ ಟಿಕೆಟ್ ಬೇಕು ಅಂತ ಪಟ್ಟು ಹಿಡಿದಿದ್ದು ನಿಮಗೆ ಗೊತ್ತೇ ಇದೆ. ಈಗ ಈ ವಿವಾದಕ್ಕೆ ಒಂದು ಸುಖಾಂತ್ಯ ಸಿಕ್ಕಂತಿದೆ.

ಆರ್‌ಸಿಬಿ ಜರ್ಸಿಯಲ್ಲಿ ಡಿಕೆಶಿ ಮಿಂಚಿಂಗ್
ಆರ್‌ಸಿಬಿ ಜರ್ಸಿಯಲ್ಲಿ ಡಿಕೆಶಿ ಮಿಂಚಿಂಗ್

ಏನಿದು ಟಿಕೆಟ್ ಗಲಾಟೆ? ವಿಷಯ ಇಷ್ಟೇ, ಮೊನ್ನೆ ನಡೆದ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, "ನಮಗೂ ಐಪಿಎಲ್ ಟಿಕೆಟ್ ಕೊಡಿ ಸ್ವಾಮಿ" ಅಂತ ಧ್ವನಿ ಎತ್ತಿದ್ದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕೂಡ ಸಾಥ್ ನೀಡಿದ್ದರು. ಜನಸಾಮಾನ್ಯರು ಟಿಕೆಟ್‌ಗಾಗಿ ಕ್ಯೂ ನಿಂತು ಪರದಾಡುತ್ತಿದ್ದರೆ, ಜನಪ್ರತಿನಿಧಿಗಳು ಹೀಗೆ ಟಿಕೆಟ್ ಕೇಳ್ತಿರೋದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೂ ಕಾರಣವಾಗಿತ್ತು.

ಡಿಕೆಶಿ ಮನೆಯಲ್ಲಿ ಹೈವೋಲ್ಟೇಜ್ ಮೀಟಿಂಗ್ ಈ ಟಿಕೆಟ್ ಗೊಂದಲ ಬಗೆಹರಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು (ಮಾರ್ಚ್ 30) ತಮ್ಮ ಸದಾಶಿವನಗರದ ನಿವಾಸದಲ್ಲಿ ಒಂದು ಇಂಪಾರ್ಟೆಂಟ್ ಮೀಟಿಂಗ್ ಕರೆದಿದ್ದರು. ಈ ಸಭೆಯಲ್ಲಿ ಕೆಎಸ್‌ಸಿಎ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಡಿಎನ್ಎ (DNA) ಮತ್ತು ಆರ್‌ಸಿಬಿ (RCB) ಮ್ಯಾನೇಜ್‌ಮೆಂಟ್‌ನ ದೊಡ್ಡ ದೊಡ್ಡ ಸಾಹೇಬರೆಲ್ಲಾ ಹಾಜರಿದ್ದರು.

ಅಂತಿಮವಾಗಿ ಸಿಕ್ಕಿದ್ದೇನು? (1+1+1 ಫಾರ್ಮುಲಾ!) ಮೊದಲು ಒಬ್ಬ ಶಾಸಕರಿಗೆ 1+1 ಅಂದ್ರೆ ಎರಡು ಟಿಕೆಟ್ ನೀಡಲು ಪ್ಲಾನ್ ಮಾಡಲಾಗಿತ್ತು. ಆದರೆ, ಇಂದಿನ ಸಭೆಯಲ್ಲಿ ಡಿಕೆಶಿಯವರು ಮಾತಾಡಿ ಮತ್ತೊಂದು ಟಿಕೆಟ್ ಎಕ್ಸ್ಟ್ರಾ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ, ಇನ್ಮುಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಮ್ಯಾಚ್‌ಗೂ ಒಬ್ಬ ಶಾಸಕರಿಗೆ 3 ಉಚಿತ ಟಿಕೆಟ್ ಸಿಗಲಿದೆ.

ಒಂದು ವೇಳೆ ಅಂತರಾಷ್ಟ್ರೀಯ ಪಂದ್ಯಗಳಿದ್ದರೆ (ಇಂಡಿಯಾ ಮ್ಯಾಚ್), ಆಗ ಮಾತ್ರ ತಲಾ 2 ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. "ಇನ್ನೂ ಹೆಚ್ಚು ಟಿಕೆಟ್ ಬೇಕು ಅಂದ್ರೆ ರೊಕ್ಕ ಕೊಟ್ಟು ಖರೀದಿ ಮಾಡಿ" ಅಂತ ಡಿಕೆಶಿ ಅವರು ಶಾಸಕರಿಗೆ ಖಡಕ್ ಆಗಿ ಹೇಳಿದ್ದಾರೆ.

ಆರ್‌ಸಿಬಿ ಜರ್ಸಿಯಲ್ಲಿ ಡಿಕೆಶಿ ಮಿಂಚಿಂಗ್! ಸಭೆ ಮುಗಿದ ಮೇಲೆ ಆರ್‌ಸಿಬಿ ತಂಡದ ಸಿಇಒ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಆರ್‌ಸಿಬಿ ತಂಡದ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು. ತಕ್ಷಣವೇ ಆ ಜರ್ಸಿ ಹಾಕಿಕೊಂಡ ಡಿಕೆಶಿ, ಫುಲ್ ಜೋಶ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದರು. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಸ್ಟೇಡಿಯಂ ಕೂಡ ದೊಡ್ಡದಾಗುತ್ತೆ! ಬರಿ ಟಿಕೆಟ್ ಅಷ್ಟೇ ಅಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಮ್ಯಾಚ್ ನೋಡಲು ಜನ ಜಾಸ್ತಿ ಬರ್ತಿರೋದ್ರಿಂದ ಸ್ಟೇಡಿಯಂ ಕೆಪಾಸಿಟಿ ಜಾಸ್ತಿ ಮಾಡುವಂತೆ ಕೆಎಸ್‌ಸಿಎಗೆ ಸರ್ಕಾರ ಸೂಚಿಸಿದೆ. ಇದಕ್ಕಾಗಿ ಒಂದು ವರದಿ ನೀಡುವಂತೆ ಡಿಕೆಶಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಶಾಸಕರಿಗಂತೂ ಈಗ ಐಪಿಎಲ್ ಮಜಾ ಡಬಲ್ ಅಲ್ಲ, ಟ್ರಿಪಲ್ ಆಗಿದೆ! ಆರ್‌ಸಿಬಿ ಮ್ಯಾಚ್ ನೋಡಲು ನಮ್ಮ ಎಂಎಲ್‌ಎ ಸಾಹೇಬ್ರುಗಳು ಈಗ ಫುಲ್ ರೆಡಿ.