ನಮ್ಮ ಸುತ್ತಮುತ್ತಲಿನ ಬಾರ್‌ಗಳು, ಪಬ್‌ಗಳು ಅಥವಾ ಬ್ರೂವರೀಸ್‌ಗಳಲ್ಲಿ ಇನ್ನು ಮುಂದೆ ನೀವು ಸುಮ್ಮನೆ ಒಳಗೆ ಹೋಗಿ ಕೂರೋ ಹಾಗಿಲ್ಲ! ಅಪ್ರಾಪ್ತ ಮಕ್ಕಳಿಗೆ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಹೈಕೋರ್ಟ್ ಒಂದು ಅತ್ಯಂತ ಮಹತ್ವದ ಮತ್ತು ಸ್ವಾಗತಾರ್ಹ ತೀರ್ಪನ್ನು ನೀಡಿದೆ. ಇನ್ಮುಂದೆ ಬಾರ್‌ಗಳ ಪ್ರವೇಶ ದ್ವಾರದಲ್ಲೇ ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನೆ ಕಡ್ಡಾಯವಾಗಿದೆ.
ಇತ್ತೀಚೆಗೆ ಮದ್ಯ ಮಾರಾಟ ಮಾಡುವ ಸಂಸ್ಥೆಗಳ ವಿರುದ್ಧ ಹೈಕೋರ್ಟ್ ತನ್ನ ಅಸಮಾಧಾನವನ್ನು ಹೊರಹಾಕಿದೆ. ಯುವಕರು ಅಥವಾ ಅಪ್ರಾಪ್ತ ವಯಸ್ಕರು ಮದ್ಯ ಖರೀದಿಸಲು ಬಂದಾಗ, ಬಾರ್ ಮಾಲೀಕರು ಸುಮ್ಮನೆ ಕಣ್ಣುಮುಚ್ಚಿ ಕುಳಿತುಕೊಳ್ಳುವಂತಿಲ್ಲ. ಪ್ರವೇಶ ದ್ವಾರದಲ್ಲಿಯೇ ಆಧಾರ್ ಕಾರ್ಡ್ ಅಥವಾ ಸರ್ಕಾರದ ಮಾನ್ಯತೆ ಪಡೆದ ಇತರ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಖಡಾಖಂಡಿತವಾಗಿ ಹೇಳಿದೆ.
ಈ ಕಠಿಣ ನಿರ್ಧಾರಕ್ಕೆ ಪ್ರೇರಣೆಯಾಗಿದ್ದು ಜನವರಿ 31, 2026 ರಂದು ಬೆಂಗಳೂರಿನಲ್ಲಿ ನಡೆದ ಒಂದು ಕಣ್ಣೀರು ತರಿಸುವ ಘಟನೆ. ಕೇವಲ 15 ವರ್ಷದ ಬಾಲಕನೊಬ್ಬ ಲೆಗಸಿ ಬ್ರೂಯಿಂಗ್ ಕಂಪನಿಯಲ್ಲಿ (LBC) ಮದ್ಯ ಸೇವಿಸಿ, ಬಳಿಕ ತನ್ನ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ತನಿಖೆ ನಡೆಸಿದಾಗ, ಆ ಬಾಲಕ ಅಂದು ಬಾರ್‌ನಲ್ಲಿ ಮದ್ಯ ಮತ್ತು ಸಿಗರೇಟ್ ಸೇವಿಸಿದ್ದು ದೃಢಪಟ್ಟಿತು. ಸಿಸಿಟಿವಿ ದೃಶ್ಯಾವಳಿಗಳಲ್ಲೂ ಬಾಲಕ ಬಾರ್‌ಗೆ ಬಂದಿರುವುದು ಸ್ಪಷ್ಟವಾಗಿ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಲ್‌ಬಿಸಿಯ ಪಾಲುದಾರ ವಿ. ಚಿಟ್ಟಿ ಬಾಬು, ತಮ್ಮ ಮೇಲಿನ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಅರ್ಜಿಯನ್ನು ವಜಾಗೊಳಿಸಿ, "ಬಾರ್ ಮಾಲೀಕರು ಇಂತಹ ಬೇಜವಾಬ್ದಾರಿತನಕ್ಕೆ ಬೆಲೆ ತೆರಲೇಬೇಕು" ಎಂದು ಸ್ಪಷ್ಟಪಡಿಸಿದರು.
ಹೈಕೋರ್ಟ್ ತನ್ನ ಆದೇಶದಲ್ಲಿ ಒಂದು ಮುಖ್ಯ ಮಾತನ್ನು ಹೇಳಿದೆ: "ವಯಸ್ಸಿನ ಪರಿಶೀಲನೆ ಅನ್ನೋದು ಕೇವಲ ಕಣ್ಣೊರೆಸುವ ತಂತ್ರ ಆಗಬಾರದು." ಕೇವಲ ಬಾಯಿ ಮಾತಿನಲ್ಲಿ ಕೇಳುವುದಲ್ಲ, ಸ್ಪಷ್ಟವಾದ ದಾಖಲೆಗಳನ್ನು (Documents) ಪರಿಶೀಲಿಸಬೇಕು. ಅಲ್ಲದೆ, ಬಾರ್‌ಗಳ ಹೊರಗೆ "ಅಪ್ರಾಪ್ತರಿಗೆ ಮದ್ಯ ಮಾರಾಟವಿಲ್ಲ" ಎಂಬ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ಇನ್ನು ಮುಂದೆ, ಯಾವುದೇ ಬಾರ್‌ಗಳು ವಯಸ್ಸಿನ ಪುರಾವೆ ಇಲ್ಲದೆ ಎಣ್ಣೆ ಸರಬರಾಜು ಮಾಡಿದರೆ, ಅವರು ಕಾನೂನಿನ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ.
ಈ ತೀರ್ಪು ಬಾರ್ ಮಾಲೀಕರಿಗೆ ಮಾತ್ರವಲ್ಲ, ಪೋಷಕರಿಗೂ ಒಂದು ಎಚ್ಚರಿಕೆಯಾಗಿದೆ. ತಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಯಾರೊಂದಿಗೆ ಇರುತ್ತಾರೆ ಎಂಬುದನ್ನು ಗಮನಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಮದ್ಯ ಮಾರಾಟ ಮಾಡುವವರು ತಮ್ಮ ಜವಾಬ್ದಾರಿಯನ್ನು ಅರಿಯುವುದು.
ಮಕ್ಕಳ ಭವಿಷ್ಯವನ್ನು ಹಾಳು ಮಾಡುವ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಹೈಕೋರ್ಟ್ ಕೈಗೊಂಡಿರುವ ಈ ಕ್ರಮ ನಿಜಕ್ಕೂ ಶ್ಲಾಘನೀಯ. ಕಾನೂನು ನಿಯಮಗಳನ್ನು ಪಾಲಿಸುವುದು ಬಾರ್ ಮಾಲೀಕರ ಜವಾಬ್ದಾರಿ, ಅದನ್ನು ಪಾಲಿಸದಿದ್ದರೆ ದಂಡ ಮತ್ತು ಕಾನೂನು ಕ್ರಮ ತಪ್ಪಿದ್ದಲ್ಲ.