May 2, 2026 Languages : ಕನ್ನಡ | English

ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಪರ್ವ - 32,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಮುಹೂರ್ತ ಫಿಕ್ಸ್!!

ರಾಜ್ಯ ಸರ್ಕಾರ ಇತ್ತೀಚೆಗೆ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಆಡಳಿತದಲ್ಲಿ ವೇಗ ತರಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಅಧಿಕಾರಿಗಳು ಕೇವಲ ಆದೇಶ ಪಾಲಿಸುವವರಾಗದೆ, ಸಂವಿಧಾನದ ಆಶಯದಂತೆ ಜನಪರವಾಗಿ ಕೆಲಸ ಮಾಡಬೇಕು ಎಂದು ಸರ್ಕಾರ ಕಿವಿಮಾತು ಹೇಳಿದೆ.

24,300 ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ | Photo Credit: https://x.com/siddaramaiah
24,300 ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ | Photo Credit: https://x.com/siddaramaiah

ನಿರ್ಭಯವಾಗಿ ಸತ್ಯ ಹೇಳಿ!

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮಾತನ್ನು ನೆನಪಿಸಿದ ಸರ್ಕಾರ, "ಮಂತ್ರಿಗಳು ಅಸಮಾಧಾನಗೊಳ್ಳುತ್ತಾರೆ ಎಂಬ ಭಯ ಬೇಡ. ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ ಮತ್ತು ಸತ್ಯವಾಗಿ ಹೇಳಬೇಕು. ಸರ್ಕಾರವನ್ನು ತಪ್ಪು ದಾರಿಗೆ ಎಳೆಯಬಾರದು," ಎಂದು ಅಧಿಕಾರಿಗಳಿಗೆ ಧೈರ್ಯ ತುಂಬಿದೆ. ಅಧಿಕಾರಿಗಳು 30-35 ವರ್ಷ ವ್ಯವಸ್ಥೆಯಲ್ಲಿ ಇರುತ್ತಾರೆ, ಹೀಗಾಗಿ ನಿಮ್ಮ ಜವಾಬ್ದಾರಿ ದೊಡ್ಡದು ಎಂದು ನೆನಪಿಸಲಾಗಿದೆ.

ಬಜೆಟ್ ಘೋಷಣೆಗಳೇ ಟಾರ್ಗೆಟ್!

ಸಭೆಯಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ಬಜೆಟ್ ಅನುಷ್ಠಾನ.

ಕಳೆದ ವರ್ಷದ ಬಜೆಟ್‌ನ 15 ಘೋಷಣೆಗಳು ಇನ್ನೂ ಜಾರಿಯಾಗಿಲ್ಲ ಎಂಬ ಬಗ್ಗೆ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ವರ್ಷದ 565 ಘೋಷಣೆಗಳ ಪೈಕಿ ಕೇವಲ 5ಕ್ಕೆ ಮಾತ್ರ ಆದೇಶವಾಗಿದೆ.

ಬರುವ ಮೇ ತಿಂಗಳ ಒಳಗಾಗಿ ಎಲ್ಲಾ ಘೋಷಣೆಗಳಿಗೂ ಸರ್ಕಾರಿ ಆದೇಶ ಹೊರಬೀಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳನ್ನೇ ಹೊಣೆ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.

ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಬೇಡ

ಜನಸ್ಪಂದನ ಮತ್ತು ಸಕಾಲದ ಅಡಿ ಬರುವ ಅರ್ಜಿಗಳನ್ನು ಜನರು ನಂಬಿಕೆ ಇಟ್ಟು ಸಲ್ಲಿಸುತ್ತಾರೆ. ಈಗಾಗಲೇ ಸಾವಿರಾರು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದರೂ, ಇನ್ನೂ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. "ಜನರ ಕೆಲಸ ಸಕಾಲದಲ್ಲಿ ಆಗದಿದ್ದರೆ ಅವರಿಗೆ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗುತ್ತದೆ, ಅದಕ್ಕೆ ಅವಕಾಶ ಕೊಡಬೇಡಿ," ಎಂದು ಸೂಚಿಸಲಾಗಿದೆ.

ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ

ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸಿಹಿ ಸುದ್ದಿ. ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿರುವ 24,300 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರ ತಿಳಿಸಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಕಿ ಇರುವ 32,132 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಶುರು ಮಾಡಲು ಸೂಚಿಸಲಾಗಿದೆ.

ಕುಡಿಯುವ ನೀರಿಗೆ ಇರಲಿ ಆದ್ಯತೆ

ಈ ಬಾರಿ ರಾಜ್ಯದಲ್ಲಿ ಮಳೆ ಶೇ. 5ರಷ್ಟು ಕಡಿಮೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಆಯಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆಗಳನ್ನು ಬಗೆಹರಿಸುವುದು ನಿಮ್ಮ ಜವಾಬ್ದಾರಿ ಎಂದು ಸರ್ಕಾರ ಹೇಳಿದೆ.

ಮೀಸಲಾತಿ ಮತ್ತು ಗುತ್ತಿಗೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ₹2 ಕೋಟಿ ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗಿದೆ. ಇದನ್ನು ತಪ್ಪಿಸಲು ಕಾಮಗಾರಿಗಳನ್ನು ಒಟ್ಟು ಸೇರಿಸಿ 'ಪ್ಯಾಕೇಜ್' ಮಾಡುವಂತಿಲ್ಲ. ಎಲ್ಲಾ ಕೆಲಸಗಳು ನಿಗದಿತ ಸಮಯದೊಳಗೆ ಮುಗಿಯಬೇಕು ಎಂಬ ಸೂಚನೆ ನೀಡಲಾಗಿದೆ.

Latest News