ರಾಜ್ಯದಲ್ಲಿರುವ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸುವ ಮಹತ್ವದ ನಿರ್ಧಾರವನ್ನು ಇದೀಗ ಸರ್ಕಾರ ಕೈಗೊಂಡಿದೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಪ್ರಸಕ್ತ ವರ್ಷದಿಂದಲೇ 4,056 ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಯೋಜನೆಯಡಿ ಹೇಗೆ ಶಾಲೆಗಳ ಆಯ್ಕೆ ಮಾಡಲಾಗುತ್ತಿದೆ ಅಂದರೆ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ 1,105 ಶಾಲೆಗಳು, ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ 126 ಶಾಲೆಗಳು, ಕೆ.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ 1,126 ಶಾಲೆಗಳು ಮತ್ತು 1,699 ಮ್ಯಾಗ್ನೆಟ್ ಶಾಲೆಗಳು ಸೇರಿ ಒಟ್ಟು 4,056 ಶಾಲೆಗಳಲ್ಲಿ ಈ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ಕೇಳಿ ಬಂದಿದೆ.
ದ್ವಿಭಾಷಾ ಮಾಧ್ಯಮದಲ್ಲಿ ಈ ಶಿಕ್ಷಣ ಬರುತ್ತಿದೆ. ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರತ್ಯೇಕವಾಗಿ ದ್ವಿಭಾಷಾ ಮಾಧ್ಯಮದಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿಯೂ ಪ್ರಾಥಮಿಕ ಶಿಕ್ಷಣ ದೊರೆಯಲಿದೆ ಎನ್ನುವ ಉದ್ದೇಶ. ಇದರೊಟ್ಟಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ಪೂರಕ ಪೌಷ್ಟಿಕ ಆಹಾರ ಪೂರೈಕೆ ಸಹ ಮಾಡುತ್ತಿದ್ದಾರೆ. ಈ ಕಾರ್ಯ ಕೈಗೊಂಡ ಸರ್ಕಾರದ ಉದ್ದೇಶ ಏನು ಅಂದರೆ, ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣದ ನೆಲೆ ಸಿಗಲಿ, ಅವರ ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಮಕ್ಕಳಿಗೆ ಸಮಾನ ಅವಕಾಶ ಒದಗಿಸುವುದು ಸರ್ಕಾರದ ಗುರಿಯಾಗಿದೆ.
ಕರ್ನಾಟಕ ಸರ್ಕಾರದ ಈ ಮಹತ್ವದ ಹೆಜ್ಜೆಯಿಂದ ಸಾವಿರಾರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಬಾಗಿಲು ತೆರೆಯಲಿದೆ. ದ್ವಿಭಾಷಾ ಮಾಧ್ಯಮದಲ್ಲಿ ನಡೆಯುವ ಈ ತರಗತಿಗಳು ಮಕ್ಕಳ ಭವಿಷ್ಯವನ್ನು ಇನ್ನಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿವೆ. ಮಕ್ಕಳ ಶಿಕ್ಷಣದ ಕುರಿತಾಗಿ ಈ ಹೆಜ್ಜೆ ನಿಜಕ್ಕೂ ಮೆಚ್ಚುವಂತದ್ದು. ರಾಜ್ಯ ಸರಕಾರದ ಈ ದೃಢ ಹೆಜ್ಜೆಯ ನಿರ್ದಾರದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.