Apr 4, 2026 Languages : ಕನ್ನಡ | English

400 ಕೋಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಯಾರು ಊಹಿಸದ ಉತ್ತರ ಕೊಟ್ಟ ಮಹಾರಾಷ್ಟ್ರ ಎಸ್ಐಟಿ ತಂಡ!!

ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂಪಾಯಿ ದರೋಡೆ ಪ್ರಕರಣ ಈಗ ಮತ್ತೊಂದು ಹೊಸ ತಿರುವು ಪಡೆದಿದೆ. ಮಹಾರಾಷ್ಟ್ರ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಸ್ಥಳ ಪರಿಶೀಲನೆ ನಡೆಸಿ, ಯಾವುದೇ ದರೋಡೆ ನಡೆದಿಲ್ಲ ಎಂಬ ಶಂಕೆಯನ್ನು ವ್ಯಕ್ತಪಡಿಸಿದೆ. ಖಾನಾಪುರದ ಚೋರ್ಲಾ ಘಾಟ್ ಬಳಿ ನಡೆದಿತ್ತೆಂದು ಹೇಳಲಾದ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ದೊರಕಿಲ್ಲವೆಂದು ವರದಿ ಸಲ್ಲಿಸಲಾಗಿದೆ.

400 ಕೋಟಿ ದರೋಡೆ ಪ್ರಕರಣಕ್ಕೆ ಮಹಾರಾಷ್ಟ್ರ ಎಸ್‌ಐಟಿ ಬಿಗ್ ಟ್ವಿಸ್ಟ್!
400 ಕೋಟಿ ದರೋಡೆ ಪ್ರಕರಣಕ್ಕೆ ಮಹಾರಾಷ್ಟ್ರ ಎಸ್‌ಐಟಿ ಬಿಗ್ ಟ್ವಿಸ್ಟ್!

ಸುಮಾರು ಒಂದು ತಿಂಗಳ ಕಾಲ ನಡೆದ ತನಿಖೆಯ ನಂತರ, ದೂರುದಾರ ಸಂದೀಪ್ ದತ್ತ ಪಾಟೀಲ್ ನೀಡಿದ ಮಾಹಿತಿಯಲ್ಲಿ ಸ್ಥಳ, ಸಮಯ, ಪ್ರಯಾಣ ಮಾರ್ಗ ಮತ್ತು ಕರೆ ದಾಖಲೆಗಳಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ. ಈ ಕಾರಣದಿಂದಲೇ ಎಸ್‌ಐಟಿ ದರೋಡೆ ನಡೆದಿಲ್ಲವೆಂದು ಸ್ಪಷ್ಟಪಡಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಬಂಧಿತರನ್ನು ನ್ಯಾಯಾಲಯ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣವು ಆರಂಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ರಾಜಕೀಯ ಬಿಕ್ಕಟ್ಟು ಉಂಟುಮಾಡಿದ್ದವು. ಆದರೆ ತನಿಖೆಯ ವರದಿ ಹೊರಬಂದ ನಂತರ ಪ್ರಕರಣದ ನಿಜಾಸ್ತಿತಿ ಕುರಿತು ಜನರಲ್ಲಿ ಗೊಂದಲ ಹೆಚ್ಚಾಗಿದೆ.

ಇದೀಗ ಹೊಸ ತಿರುವಾಗಿ, ದತ್ತ ಪಾಟೀಲ್ ಅವರು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಎಫ್‌ಐಆರ್ ದಾಖಲಿಸಿ ನ್ಯಾಯಯುತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಎಸ್‌ಐಟಿ ಪಾರದರ್ಶಕ ತನಿಖೆ ನಡೆಸಿಲ್ಲವೆಂದು ಅವರು ಆರೋಪಿಸಿ, ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ರೆಕಾರ್ಡಿಂಗ್‌ಗಳನ್ನು ತಮ್ಮ ಬಳಿ ಇವೆ ಎಂದು ಹೇಳಿದ್ದಾರೆ. ಇವುಗಳ ಆಧಾರದ ಮೇಲೆ ಮರು ತನಿಖೆ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಅಕ್ಟೋಬರ್ 25, 2025 ರಂದು ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ ಬಳಿ ಎರಡು ಕಂಟೇನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂಪಾಯಿ ಹಣವನ್ನು ಲೂಟಿ ಮಾಡಲಾಗಿದೆ ಎಂದು ಪಾಟೀಲ್ ಅವರು ದೂರು ನೀಡಿದ್ದರು. ಈ ಹಣ ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸಾವ್ಲಾ ಸೇಠ್ ಅವರಿಗೆ ಸೇರಿದ್ದು, ಇದರಲ್ಲಿ ರದ್ದಾದ 2,000 ರೂಪಾಯಿ ನೋಟುಗಳೂ ಇದ್ದವು ಎಂದು ಹೇಳಲಾಗಿತ್ತು.

ಒಟ್ಟಿನಲ್ಲಿ, ಈ ಪ್ರಕರಣವು ಆರಂಭದಲ್ಲಿ ಭಾರೀ ಸಂಚಲನ ಮೂಡಿಸಿದರೂ, ತನಿಖೆಯ ನಂತರ ದರೋಡೆ ನಡೆದಿಲ್ಲವೆಂಬ ವರದಿ ಹೊರಬಂದಿರುವುದು ದೊಡ್ಡ ತಿರುವಾಗಿದೆ ಎನ್ನಬಹುದು. ದತ್ತ ಪಾಟೀಲ್ ಅವರ ಹೊಸ ಪತ್ರ ಮತ್ತು ಮರು ತನಿಖೆ ಬೇಡಿಕೆ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Latest News