ಕರ್ನಾಟಕದ ಸಾವಿರಾರು ರೈತರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ನೆರವು ದೊರಕುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದ ಹಣವನ್ನು ಇದೀಗ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಲ್ಲಿಸಿದ್ದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
2025ರ ಡಿಸೆಂಬರ್ 17ರಂದು ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ರಾಜ್ಯದ ಸುಮಾರು 30,000ಕ್ಕೂ ಹೆಚ್ಚು ಅರ್ಹ ರೈತರು ತಾಂತ್ರಿಕ ಅಡೆತಡೆಗಳಿಂದ ಯೋಜನೆಯ ಲಾಭದಿಂದ ವಂಚಿತರಾಗುತ್ತಿರುವ ವಿಚಾರವನ್ನು ಗಮನಕ್ಕೆ ತಂದಿದ್ದರು. ಬ್ಯಾಂಕ್ ಖಾತೆ ಲಿಂಕ್ ಸಮಸ್ಯೆ, ಆಧಾರ್ ದೃಢೀಕರಣದ ತೊಂದರೆ ಸೇರಿದಂತೆ ವಿವಿಧ ಕಾರಣಗಳಿಂದ ಹಲವರು ಪಾವತಿ ಪಟ್ಟಿಯಿಂದ ಹೊರಗುಳಿದಿದ್ದರು ಎಂದು ಅವರು ವಿವರಿಸಿದ್ದರು.
ಕಳೆದ ವಾರ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಈ ವಿಷಯವನ್ನು ಮರುಪ್ರಸ್ತಾಪಿಸಿದ್ದರು. ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಈಗಾಗಲೇ 22,000ಕ್ಕೂ ಹೆಚ್ಚು ರೈತರನ್ನು ಪಿಎಂ-ಕಿಸಾನ್ ಯೋಜನೆಯ 22ನೇ ಕಂತಿನ ಪಾವತಿ ಪಟ್ಟಿಯಲ್ಲಿ ಸೇರಿಸಿದೆ. ಶೀಘ್ರದಲ್ಲೇ ಅವರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಉಳಿದ ಪ್ರಕರಣಗಳನ್ನು ರಾಜ್ಯ ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸಿದ ತಕ್ಷಣವೇ ಆ ರೈತರನ್ನೂ ಯೋಜನೆಯಡಿ ಸೇರಿಸಲಾಗುವುದು ಎಂಬ ಭರವಸೆ ನೀಡಲಾಗಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಆರ್ಥಿಕ ನೆರವು ಸಮಯಕ್ಕೆ ಸಿಗುವಂತಾಗಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎನ್. ಚಲುವರಾಯಸ್ವಾಮಿ, ರಾಜ್ಯದ ರೈತರ ಹಿತದೃಷ್ಟಿಯಿಂದ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ರೈತರಿಗೆ ನ್ಯಾಯ ಒದಗಿಸಿರುವುದು ಶ್ಲಾಘನೀಯ ಕ್ರಮ ಎಂದು ಹೇಳಿದರು. ಜೊತೆಗೆ ಬಾಕಿ ಉಳಿದಿರುವ ರೈತರ ದಾಖಲೆಗಳ ಪರಿಶೀಲನೆಯನ್ನು ಶೀಘ್ರ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪಿಎಂ-ಕಿಸಾನ್ ಯೋಜನೆಯಡಿ ಪ್ರತಿ ವರ್ಷ ಅರ್ಹ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದೀಗ 22ನೇ ಕಂತಿನ ಹಣ ಬಿಡುಗಡೆಯಿಂದ ರಾಜ್ಯದ ಸಾವಿರಾರು ರೈತರಿಗೆ ನಿರಾಳತೆ ಸಿಕ್ಕಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತ ಪ್ರಯತ್ನದಿಂದ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ನೆರವು ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.