ಗ್ರಾಹಕರಿಗೆ ಶಾಕ್ ಕೊಟ್ಟು ರಾಜ್ಯಕ್ಕೆ ಎಂಟ್ರಿ ಕೊಡ್ತಿದೆಯಾ ಟಾಟಾ? ಅಸಲಿ ಕಥೆ ಇಲ್ಲಿದೆ ನೋಡಿ!!

ಇತ್ತೀಚಿನ ದಿನಗಳಲ್ಲಿ ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳುತ್ತಿದ್ದ ಜನರಿಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ! ಹೌದು, ನಿಮ್ಮ ಮನೆಗೆ ಬರುವ ವಿದ್ಯುತ್ ಸಪ್ಲೈ ಇನ್ಮುಂದೆ ಸರ್ಕಾರದ ಕೈಯಿಂದ ಖಾಸಗಿ ಕಂಪನಿಗಳ ಕೈಗೆ ಹೋದರೂ ಅಚ್ಚರಿಯಿಲ್ಲ. ಟಾಟಾ ಪವರ್ ಕಂಪನಿಯು ನಮ್ಮ ಕರ್ನಾಟಕದಲ್ಲೂ ವಿದ್ಯುತ್ ವಿತರಣೆ ಮಾಡಲು ಪರ್ಮಿಷನ್ ಕೊಡಿ ಅಂತ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಅಪ್ಲಿಕೇಶನ್ ಹಾಕಿದೆ.

ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣದ ಬಿಗ್ ಪ್ಲಾನ್ | Photo Credit: CANVA
ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣದ ಬಿಗ್ ಪ್ಲಾನ್ | Photo Credit: CANVA

ಈಗಾಗಲೇ ದೆಹಲಿ, ಮುಂಬೈ ಮತ್ತು ಒಡಿಶಾದಲ್ಲಿ ಖಾಸಗಿ ಕಂಪನಿಗಳೇ ಕರೆಂಟ್ ಸಪ್ಲೈ ಮಾಡುತ್ತಿವೆ. ಅದೇ ಮಾಡೆಲ್ ಈಗ ನಮ್ಮ ರಾಜ್ಯಕ್ಕೂ ಬರುವ ಸಾಧ್ಯತೆ ದಟ್ಟವಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಟಾಟಾ ಎಂಟ್ರಿ?

ಟಾಟಾ ಪವರ್ ಕಂಪನಿಯು ರಾಜ್ಯದ ಪ್ರಮುಖ ವಿದ್ಯುತ್ ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ತನಗೂ ಬಿಸಿನೆಸ್ ಮಾಡಲು ಅವಕಾಶ ಕೊಡಿ ಎಂದು ಕೇಳಿದೆ. ಕೆಇಆರ್‌ಸಿ ಅಧಿಕಾರಿಗಳು ಕೊಟ್ಟಿರುವ ಮಾಹಿತಿ ಪ್ರಕಾರ, ಟಾಟಾ ಕಂಪನಿ ಈ ಕೆಳಗಿನ ಜಿಲ್ಲೆಗಳ ಮೇಲೆ ಕಣ್ಣಿಟ್ಟಿದೆ:

  • ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು
  • ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ
  • ಬೆಳಗಾವಿ, ಉತ್ತರ ಕನ್ನಡ, ಧಾರವಾಡ
  • ಮೈಸೂರು, ಚಾಮರಾಜನಗರ, ಹಾಸನ

ನಿಯಮಗಳು ಏನು ಹೇಳುತ್ತವೆ?

ನಿಮಗೆ ಗೊತ್ತಿರಲಿ, ಇದು ಇವತ್ತು ನಿನ್ನೆ ಬಂದ ಕಾನೂನಲ್ಲ. 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 14ರ ಅಡಿಯಲ್ಲೇ ಖಾಸಗಿ ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಕೆಇಆರ್‌ಸಿ ಅಧ್ಯಕ್ಷರಾದ ಪಿ. ರವಿ ಕುಮಾರ್ ಅವರು ಹೇಳುವ ಪ್ರಕಾರ, "ಕಾನೂನು ಬಂದು 20 ವರ್ಷಗಳಾಗಿದ್ದರೂ, ಕಂಪನಿಯೊಂದು ಅಧಿಕೃತವಾಗಿ ಅರ್ಜಿ ಸಲ್ಲಿಸಿರುವುದು ಇದೇ ಮೊದಲು. ಆದರೆ, ಟಾಟಾ ಕಂಪನಿಯು ಕರೆಂಟ್ ಸಪ್ಲೈ ಮಾಡಬೇಕೆಂದರೆ ಅದಕ್ಕೆ ಬೇಕಾದ ಸ್ವಂತ ನೆಟ್‌ವರ್ಕ್ ಮತ್ತು ಪೋಲ್, ವೈರ್‌ಗಳಂತಹ ಮೂಲಸೌಕರ್ಯಗಳನ್ನು ಹೊಂದಿರಬೇಕು."

ಇಲಾಖೆಯ ಸೆಕ್ರೆಟರಿ ಗೌರವ್ ಗುಪ್ತಾ ಅವರೂ ಕೂಡ, "ಖಾಸಗಿ ಕಂಪನಿಗಳು ಮುಂದೆ ಬರುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ, ಆದರೆ ಇದಕ್ಕೆ ಹಲವು ಕಠಿಣ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ" ಎಂದಿದ್ದಾರೆ.

ಮುಂದಿನ ಪ್ರಕ್ರಿಯೆ ಏನು?

ಟಾಟಾ ಕಂಪನಿ ಅರ್ಜಿ ಹಾಕಿದ ತಕ್ಷಣ ಪರ್ಮಿಷನ್ ಸಿಗುವುದಿಲ್ಲ. ಮೊದಲು ಈ ಅರ್ಜಿಯನ್ನು ಪಬ್ಲಿಕ್ ಆಗಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಅಥವಾ ಇತರ ಸಂಸ್ಥೆಗಳಿಂದ ಆಕ್ಷೇಪಣೆಗಳಿದ್ದರೆ ಕೇಳಲಾಗುತ್ತದೆ. ಆಮೇಲೆ ಫೈನಲ್ ವಿಚಾರಣೆ ನಡೆಸಿ ನಿರ್ಧಾರ ತಗೆದುಕೊಳ್ಳಲಾಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ.

ಜನ ಸಾಮಾನ್ಯರಿಗೆ ಇದರಿಂದ ಏನು ಲಾಭ?

ಇದು ಸಂಪೂರ್ಣ ಖಾಸಗೀಕರಣ ಅಲ್ಲದಿದ್ದರೂ, ಖಾಸಗಿ ವಿತರಣೆಯಿಂದ ಗ್ರಾಹಕರಿಗೆ ಕೆಲವು ಧನಾತ್ಮಕ ಬದಲಾವಣೆಗಳು ಸಿಗಬಹುದು ಎನ್ನುತ್ತಾರೆ ಎಕ್ಸ್‌ಪರ್ಟ್‌ಗಳು.

ನಮ್ಮಿಷ್ಟದ ಕಂಪನಿ ಆಯ್ಕೆ: ಮೊಬೈಲ್ ಸಿಮ್ ಕಾರ್ಡ್‌ಗಳಂತೆ (ಜಿಯೋ, ಏರ್‌ಟೆಲ್), ನಮಗೆ ಯಾವ ಕಂಪನಿಯ ಕರೆಂಟ್ ಬೇಕು, ಯಾರು ಕಡಿಮೆ ಬೆಲೆಗೆ ಮತ್ತು ಒಳ್ಳೆ ಸರ್ವಿಸ್ ಕೊಡ್ತಾರೆ ಎಂಬುದನ್ನು ನೋಡಿ ನಾವೇ ಆಯ್ಕೆ ಮಾಡಿಕೊಳ್ಳಬಹುದು.

ಕಡಿಮೆ ಕರೆಂಟ್ ಕಟ್: ಖಾಸಗಿ ಕಂಪನಿಗಳು ಬಂದರೆ ಕರೆಂಟ್ ಕೈಕೊಡುವುದು ತುಂಬಾ ಅಪರೂಪವಾಗುತ್ತದೆ. ಕರೆಂಟ್ ತಂತಿಗಳು ಹರಿದು ಬೀಳುವುದು, ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.

ಹೆಲ್ದೀ ಕಾಂಪಿಟೇಷನ್: ಮಾರ್ಕೆಟ್‌ನಲ್ಲಿ ಕಾಂಪಿಟೇಷನ್ ಇದ್ದಾಗ ಗ್ರಾಹಕರಿಗೆ ಒಳ್ಳೆ ವೃತ್ತಿಪರ ಸೇವೆ ಸಿಗುತ್ತದೆ. ಪ್ರಸರಣದ ವೇಳೆ ವ್ಯರ್ಥವಾಗುವ ವಿದ್ಯುತ್ ನಷ್ಟ ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ವಿದ್ಯುತ್ ತಜ್ಞ ಮುರಳೀಧರ್ ರಾವ್.

ಒಟ್ಟಿನಲ್ಲಿ, ಸದ್ಯಕ್ಕಂತೂ ಟಾಟಾ ಕಂಪನಿ ಅರ್ಜಿ ಸಲ್ಲಿಸಿ ಸರ್ಕಾರಿ ಇಲಾಖೆಗಳಲ್ಲಿ ಸಂಚಲನ ಮೂಡಿಸಿದೆ. ಇದು ಜಾರಿಗೆ ಬಂದರೆ ಕರೆಂಟ್ ಬಿಲ್ ಕಮ್ಮಿ ಆಗುತ್ತಾ ಅಥವಾ ಸರ್ವಿಸ್ ಚಾರ್ಜ್ ಹೆಸರಲ್ಲಿ ಜನರಿಗೆ ಮತ್ತಷ್ಟು ಹೊರೆಯಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Latest News