ಬೀದರ್: ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕಾಕತಾಳೀಯವಾಗಿರುವ ಸಂದರ್ಭದಲ್ಲಿ, ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ (ರಾಜೇಂದ್ರ ಸ್ವಾಮೀಜಿ) ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯದ ರಾಜಕೀಯದಲ್ಲಿ ಸದ್ಯಕ್ಕೆ ಬದಲಾವಣೆ ಕಷ್ಟವೆಂದೂ, ಯುಗಾದಿ ಹಬ್ಬವಾದವರೆಗೂ ಮುಖ್ಯಮಂತ್ರಿ ಬದಲಾವಣೆ ಆಗುವ ಸಾಧ್ಯತೆ ಇಲ್ಲವೆಂದೂ ಅವರು ತಿಳಿಸಿದರು.
"ರಾಜ್ಯದ ಭಂಡಾರ ಬಜೆಟ್ ಅಂತ ಕರೆತೀವಿ, ಆ ಬಜೆಟ್ ಆಗಬೇಕು," ಎಂದು ಸ್ವಾಮೀಜಿ ಹೇಳಿದರು. ಹಾಲುಮತ ಸಮಾಜದ ಅಧಿಕಾರದ ಬಗ್ಗೆ ಮಾತನಾಡಿದ ಅವರು, "ಹಾಲುಮತ ಸಮಾಜದವರ ಕೈಗೆ ಅಧಿಕಾರ ಬಂದರೆ ಬಿಡಿಸಿಕೊಳ್ಳುವುದು ಕಷ್ಟ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕಬುಕ್ಕರು, ಛತ್ರಪತಿ ಶಿವಾಜಿ, ಕಾಶಿಯ ವಿಶ್ವನಾಥ ದೇವರ ರಾಣಿ ಅಹಲ್ಯಾಭಾಯಿ – ಎಲ್ಲರೂ ಹಾಲುಮತದವರು. ಇದು ಪ್ರಾಚೀನ ಮತ್ತು ದೈವಗೊಳ್ಳುವ ಸಮಾಜ. ಈ ಸಮಾಜದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ. ಹಾಲುಮತ ಸಮಾಜಕ್ಕೆ ಅಧಿಕಾರ ಸಿಕ್ಕಿದೆ, ಅವರನ್ನು ಇಳಿಸುವುದು ಕಷ್ಟ," ಎಂದರು.
ಅವರಾಗಿಯೇ ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟರೆ ಬೇರೆಯವರು ಸಿಎಂ ಆಗಬಹುದು. ಆದರೆ ಅವರು ಬಿಟ್ಟುಕೊಡಲು ಇಷ್ಟಪಡುವ ಸಾಧ್ಯತೆ ಇಲ್ಲ, ಇಳಿಯುವ ಸನ್ನಿವೇಶನವೂ ಇಲ್ಲ ಎಂದು ಸ್ವಾಮೀಜಿ ಸೂಚಿಸಿದರು. ಯುಗಾದಿ ಕಳೆದ ನಂತರ ಮಾತ್ರ ಮುಖ್ಯಮಂತ್ರಿ ಬದಲಾವಣೆ ಕುರಿತು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ಹೇಳುವುದಾಗಿ ಅವರು ಘೋಷಿಸಿದರು.
ಡಿಕೆ ಶಿವಕುಮಾರ್ ಅವರ ಬಗ್ಗೆ ಪ್ರಶ್ನೆಗೆ, "ಅವರು ನಮಗೆ ಬೇಕಾದವರು, ಪರಿಚಯಸ್ಥರು. ಆದರೆ ಅವರ ಬಗ್ಗೆ ಸದ್ಯ ಹೇಳುವ ಪ್ರಸಂಗ ಇಲ್ಲ," ಎಂದು ಸ್ವಾಮೀಜಿ ನಿರಾಕರಿಸಿದರು. ಅಂತಿಮವಾಗಿ, ದೇಶದ ಸಂಕಟದ ಕುರಿತು ಎಚ್ಚರಿಕೆ ನೀಡಿದ ಅವರು, "ದೇಶಕ್ಕೆ ಅಪಾಯ ಇದೆ, ಸಾವು-ನೋವಾಗುವ ಲಕ್ಷಣ ಇದೆ. ಇಬ್ಬರು ಮಹಾ ವ್ಯಕ್ತಿಗಳ ಸಾವಿನ ಲಕ್ಷಣಗಳಿವೆ," ಎಂದು ಸಂಕ್ಷಿಪ್ತವಾಗಿ ತಮ್ಮ ಕಳವಳ ವ್ಯಕ್ತಪಡಿಸಿದರು.