ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ - ಆಳಂದ ದರ್ಗಾ ವಿವಾದ ಸೇರಿ 52 ಕ್ರಿಮಿನಲ್ ಕೇಸ್‌ಗಳ ವಾಪಸ್‌ಗೆ ಸರ್ಕಾರದ ಗ್ರೀನ್ ಸಿಗ್ನಲ್!!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ದೊಡ್ಡ ಬಿರುಗಾಳಿ ಎದ್ದಿದೆ. ಕನ್ನಡ ಪರ ಹೋರಾಟಗಾರರು, ರೈತರು ಹಾಗೂ ಆಳಂದದ ಪ್ರಸಿದ್ಧ 'ಲಾಡ್ಲೆ ಮಶಾಕ್ ದರ್ಗಾ' ವಿವಾದಕ್ಕೆ ಸಂಬಂಧಿಸಿದ ಕೇಸ್‌ಗಳು ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ (Cabinet) ಮಹತ್ವದ ತೀರ್ಮಾನ ತಗೊಂಡಿದೆ. ಸರ್ಕಾರದ ಈ ನಡೆಗೆ ವಿರೋಧ ಪಕ್ಷವಾದ ಬಿಜೆಪಿ ಸಖತ್ ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಮಟ್ಟದ ರಾಜಕೀಯ ಜಟಾಪಟಿ ಶುರುವಾಗಿದೆ.

"ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ!"

ಯಾರ್ಯಾರ ಮೇಲಿನ ಕೇಸ್‌ಗಳು ವಾಪಸ್?

ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿರುವ 52 ಪ್ರಕರಣಗಳಲ್ಲಿ ಪ್ರಮುಖ ಹೋರಾಟಗಾರರ ಮೇಲಿನ ಕೇಸ್‌ಗಳು ಸೇರಿವೆ.

  • ಕನ್ನಡ ಚಳವಳಿಯ ಹಿರಿಯ ನಾಯಕ ವಾಟಾಳ್ ನಾಗರಾಜ್ ವಿರುದ್ಧದ 10 ಪ್ರಕರಣಗಳು.
  • ಕಾವೇರಿ ನದಿ ನೀರು ಹಂಚಿಕೆ ಹೋರಾಟದ ವೇಳೆ ದಾಖಲಾಗಿದ್ದ ಕೇಸ್‌ಗಳು.
  • ಕಳಸಾ-ಬಂಡೂರಿ ಯೋಜನೆಗಾಗಿ ನಡೆದ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣಗಳು.
  • ವಿವಿಧ ರೈತ ಸಂಘಟನೆಗಳು ಹಾಗೂ ದಲಿತ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳು.

ಆದರೆ, ಈ ಇಡೀ ಲಿಸ್ಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿರುವುದು ಕಲಬುರಗಿ ಜಿಲ್ಲೆಯ ಆಳಂದದಲ್ಲಿ ನಡೆದಿದ್ದ 'ಲಾಡ್ಲೆ ಮಶಾಕ್ ದರ್ಗಾ' ವಿವಾದದ ಕೇಸ್‌ಗಳು! ಈ ವಿವಾದಕ್ಕೆ ಸಂಬಂಧಿಸಿದ ಒಟ್ಟು 7 ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದೇ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ದಾಳಿಗೆ ಮೇನ್ ಪಾಯಿಂಟ್ ಆಗಿದೆ.

"ನಾವು ಕ್ರಿಮಿನಲ್‌ಗಳ ಪರ ಅಂತ ಸರ್ಕಾರ ಮೆಸೇಜ್ ಕೊಡ್ತಿದೆ": ಸಿ.ಟಿ. ರವಿ ಕಿಡಿ!

ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಭರ್ಜರಿಯಾಗಿಯೇ ವಾಗ್ದಾಳಿ ನಡೆಸಿದ್ದಾರೆ. "ಈ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡ್ತಿದೆ. ಒಂದು ಕಡೆ ಹಿಂದೂ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ, ಅವರ ಮೇಲೆ ಸುಳ್ಳು ಕೇಸ್ ಹಾಕಿ, ರೌಡಿಶೀಟ್ ಓಪನ್ ಮಾಡಿ ಪೊಲೀಸ್ ಇಲಾಖೆ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ. ಇನ್ನೊಂದು ಕಡೆ ಮುಸ್ಲಿಮರ ಮೇಲಿರುವ ಗಂಭೀರ ಕ್ರಿಮಿನಲ್ ಕೇಸ್‌ಗಳನ್ನು ವಾಪಸ್ ಪಡೆಯಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.

ಕೆಲವು ಕಡೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದ, ಬೆಂಕಿ ಹಚ್ಚಿದ ಗಂಭೀರ ಕೇಸ್‌ಗಳನ್ನೂ ಸರ್ಕಾರ ವಾಪಸ್ ತಗೋತಿದೆ. ಇದರ ಮೂಲಕ 'ನಾವು ಕ್ರಿಮಿನಲ್‌ಗಳ ಪರವಾಗಿದ್ದೇವೆ' ಎನ್ನುವ ಕೆಟ್ಟ ಸಂದೇಶವನ್ನು ಸಮಾಜಕ್ಕೆ ನೀಡಲು ಸರ್ಕಾರ ಹೊರಟಿದೆ ಎಂದು ಅವರು ನೇರವಾಗಿಯೇ ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಕೊಟ್ಟ ಸ್ಪಷ್ಟನೆ ಏನು?

ಈ ಇಡೀ ಗಲಾಟೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸರ್ಕಾರದ ಪರವಾಗಿ ಕ್ಲಾರಿಟಿ ಕೊಟ್ಟಿದ್ದಾರೆ. "ಕನ್ನಡ ಸಂಘಟನೆಗಳು, ರೈತ ಹೋರಾಟಗಾರರ ಮೇಲೆ ಇದ್ದ ಕೇಸ್‌ಗಳನ್ನು ವಾಪಸ್ ಪಡೆಯುವಂತೆ ಕ್ಯಾಬಿನೆಟ್ ಸಬ್ ಕಮಿಟಿಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಸಂಪೂರ್ಣ ಕಾನೂನಾತ್ಮಕವಾಗಿಯೇ ಈ ಕೇಸ್‌ಗಳನ್ನು ಹಿಂಪಡೆಯಲು ತೀರ್ಮಾನ ಮಾಡಲಾಗಿದೆ" ಎಂದಿದ್ದಾರೆ.

ಇನ್ನು ಆಳಂದ ದರ್ಗಾ ವಿವಾದದ ಕೇಸ್ ವಾಪಸ್ ಪಡೆದ ಬಗ್ಗೆ ಕೇಳಿದಾಗ, "ನಾನು ಅದರ ಬಗ್ಗೆ ಜಾಸ್ತಿ ಡಿಟೇಲ್ಸ್ ಹೇಳಲು ಹೋಗಲ್ಲ. ಆದರೆ ಒಂದು ಮಾತು ನಿಜ, ಯಾವುದೇ ನಿರ್ಧಾರವನ್ನು ಏಕಾಏಕಿ ತಗೊಂಡಿಲ್ಲ. ಎಲ್ಲವನ್ನೂ ಕೂಲಂಕಷವಾಗಿ ಚರ್ಚೆ ಮಾಡಿ, ಕಾನೂನು ಚೌಕಟ್ಟಿನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ, ಹೋರಾಟಗಾರರಿಗೆ ರಿಲೀಫ್ ಕೊಡುವ ನೆಪದಲ್ಲಿ ದರ್ಗಾ ವಿವಾದದ ಕೇಸ್‌ಗಳನ್ನೂ ವಾಪಸ್ ತಗೊಂಡಿರುವುದು ಈಗ ಕರಾವಳಿ ಸೇರಿದಂತೆ ಇಡೀ ರಾಜ್ಯದ ರಾಜಕೀಯ ಅಖಾಡದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು.

Latest News