ಫೈನಲ್ ಆಯ್ತು ಡಿಕೆಶಿ ಸಂಪುಟದ ಖಾತೆಗಳ ಪಟ್ಟಿ - ಯಾರಿಗೆ ಯಾವ ಇಲಾಖೆ? ಇಲ್ಲಿದೆ ನೋಡಿ!!

ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ನಡೀತಾ ಇದ್ದ ಸಸ್ಪೆನ್ಸ್, ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದ ಒಟ್ಟು 14 ಮಂತ್ರಿಗಳ ಖಾತೆಗಳ ಪಟ್ಟಿ ಅಧಿಕೃತವಾಗಿ ಫೈನಲ್ ಆಗಿದೆ. ಅಷ್ಟೇ ಅಲ್ಲ, ಈ ಲಿಸ್ಟ್‌ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಮಧ್ಯರಾತ್ರಿಯೇ ಸಹಿ ಹಾಕಿದ್ದು, ಗವರ್ನಮೆಂಟ್ ಗೆಜೆಟ್ ಕೂಡ ಹೊರಬಿದ್ದಿದೆ. ಸಖತ್ ಡಿಮ್ಯಾಂಡ್‌ನಲ್ಲಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದ್ದು, ಅದು ಕೃಷ್ಣ ಬೈರೇಗೌಡ ಅವರ ಪಾಲಾಗಿದೆ. ಇತ್ತ ಈ ಖಾತೆ ಮೇಲೆ ಕಣ್ಣಿಟ್ಟಿದ್ದ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಜಲಸಂಪನ್ಮೂಲ (ಬೃಹತ್ ಮತ್ತು ಮಧ್ಯಮ ನೀರಾವರಿ) ಖಾತೆ ಸಿಕ್ಕಿದೆ.

ಹಳೆಯ ಸಚಿವರಿಗೆ ಹಳೇ ಖಾತೆ ರೀ-ಫಿಕ್ಸ್! | Photo Credit: https://x.com/INCKarnataka
ಹಳೆಯ ಸಚಿವರಿಗೆ ಹಳೇ ಖಾತೆ ರೀ-ಫಿಕ್ಸ್! | Photo Credit: https://x.com/INCKarnataka

ರಾಜ್ಯಪಾಲರ ಇಂದೋರ್ ಟ್ರಿಪ್ ಮಧ್ಯೆಯೇ ಬಿತ್ತು ಸಹಿ!

ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ಸಂಜೆಯೇ ಲೋಕಭವನಕ್ಕೆ ಲಿಸ್ಟ್ ಕಳುಹಿಸಿದ್ದರು. ಆದರೆ ರಾಜ್ಯಪಾಲರು ಅಷ್ಟರಲ್ಲಾಗಲೇ ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಇಂದೋರ್‌ಗೆ ಹೊರಟು ಹೋಗಿದ್ದರು. ಅವರು ಶನಿವಾರ ವಾಪಸ್ ಬರೋ ತನಕ ಖಾತೆ ಹಂಚಿಕೆ ಲೇಟ್ ಆಗಬಹುದು ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಹೈವೋಲ್ಟೇಜ್ ರಾಜಕೀಯದ ಗಂಭೀರತೆ ಅರಿತ ರಾಜ್ಯಪಾಲರು ಗುರುವಾರ ರಾತ್ರಿಯೇ ಪಟ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟು ಸಹಿ ಹಾಕಿದ್ದಾರೆ.

ಹಳಬರಿಗೆ ಹಳೇ ಖಾತೆ ರೀ-ಫಿಕ್ಸ್: ಯಾರಿಗೆ ಏನು ಸಿಕ್ತು?

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಇದ್ದ ಕೆಲವು ಸಚಿವರಿಗೆ ಈ ಬಾರಿಯೂ ಅವರ ಹಳೆಯ ಇಲಾಖೆಗಳನ್ನೇ ಉಳಿಸಿಕೊಡಲಾಗಿದೆ. ಮುನಿಯಪ್ಪ ಅವರಿಗೆ ಆಹಾರ ಖಾತೆ, ಎಂ.ಬಿ.ಪಾಟೀಲ್‌ ಅವರಿಗೆ ಕೈಗಾರಿಕೆ, ಸತೀಶ್‌ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ (PWD) ಹಾಗೂ ಶರಣಪ್ರಕಾಶ್‌ ಪಾಟೀಲ್‌ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ. ಕೆ.ಜೆ. ಜಾರ್ಜ್‌ ಅವರಿಗೆ ಹಿಂದೆ ಇದ್ದ ಇಂಧನ ಖಾತೆಯ ಜೊತೆಗೆ ಈ ಬಾರಿ ಪ್ರವಾಸೋದ್ಯಮ ಇಲಾಖೆಯನ್ನೂ ಎಕ್ಸ್ಟ್ರಾವಾಗಿ ವಹಿಸಲಾಗಿದೆ.

ಆದರೆ, ಕೃಷ್ಣ ಬೈರೇಗೌಡ ಅವರು ಹೊಂದಿದ್ದ ಕಂದಾಯ ಇಲಾಖೆ ಈಗ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರ ಪಾಲಾಗಿದೆ. ಇನ್ನು ಪ್ರಿಯಾಂಕ್‌ ಖರ್ಗೆ ಅವರಿಗೆ ಈ ಬಾರಿ ಲಾಟರಿ ಹೊಡೆದಿದ್ದು, ಬಂಪರ್ ಗೃಹ ಖಾತೆ ಸಿಕ್ಕಿದೆ. ಇದರ ಜೊತೆಗೆ ತಮ್ಮ ಹಳೆಯ ಐಟಿ-ಬಿಟಿ ಮತ್ತು ಇ-ಆಡಳಿತವನ್ನೂ ಅವರು ಉಳಿಸಿಕೊಂಡಿದ್ದಾರೆ. ಹಿಂದೆ ಪ್ರಿಯಾಂಕ್ ಖರ್ಗೆ ನೋಡಿಕೊಳ್ಳುತ್ತಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಈಶ್ವರ ಖಂಡ್ರೆ ಅವರಿಗೆ ಕೊಡಲಾಗಿದೆ.

ಬೆಂಗಳೂರು ಟಾಸ್ಕ್ ಕೃಷ್ಣ ಬೈರೇಗೌಡಗೆ, ಬಿಡಿಎ ಸಸ್ಪೆನ್ಸ್!

ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಸಿಕ್ಕಿದ್ದು, ಇದರ ಅಡಿಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಪಂಚ ಪಾಲಿಕೆಗಳು, ಬೆಂಗಳೂರು ಜಲಮಂಡಳಿ (BWSSB) ಮತ್ತು ನಮ್ಮ ಮೆಟ್ರೋ (BMRCL) ಜವಾಬ್ದಾರಿ ಇರಲಿದೆ. ಆದರೆ ಕುತೂಹಲದ ಸಂಗತಿ ಅಂದರೆ, ಇಡೀ ಬೆಂಗಳೂರಿನ ಮೇನ್ ಲೂಟಿಂಗ್ ಸ್ಪಾಟ್ ಆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಯಾರಿಗೆ ಸಿಕ್ಕಿದೆ ಅನ್ನೋದನ್ನು ಪಟ್ಟಿಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಇದನ್ನು ಸಿಎಂ ಕೂಡ ತಮ್ಮ ಬಳಿ ಇಟ್ಟುಕೊಂಡಿಲ್ಲದಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಸಸ್ಪೆನ್ಸ್ ಕ್ರಿಯೇಟ್ ಮಾಡಿದೆ.

ಇನ್ನು ಬೈರತಿ ಸುರೇಶ್‌ ಅವರಿಗೆ ಸಾರಿಗೆ ಇಲಾಖೆ ಸಿಕ್ಕರೆ, ಅವರು ಹೊಂದಿದ್ದ ನಗರಾಭಿವೃದ್ಧಿ ಖಾತೆ ಯತೀಂದ್ರ ಸಿದ್ದರಾಮಯ್ಯ ಅವರ ಪಾಲಾಗಿದೆ. ಮಾಜಿ ಸ್ಪೀಕರ್ ಯು.ಟಿ. ಖಾದರ್‌ ಅವರಿಗೆ ಹೆಲ್ತ್ ಇಲಾಖೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ) ನೀಡಲಾಗಿದೆ.

ಮಂತ್ರಿಗಳು ಮತ್ತು ಅವರ ಖಾತೆಗಳ ಕಂಪ್ಲೀಟ್ ಲಿಸ್ಟ್:

ಸಚಿವರ ಹೆಸರು ಹಂಚಿಕೆಯಾಗಿರುವ ಖಾತೆಗಳು

ಡಿ.ಕೆ. ಶಿವಕುಮಾರ್ (ಸಿಎಂ) - ಹಣಕಾಸು, ಸಂಸದೀಯ ವ್ಯವಹಾರ, ಡಿಪಿಎಆರ್‌, ಗುಪ್ತಚರ ಮತ್ತು ಹಂಚಿಕೆಯಾಗದ ಇತರೆ ಖಾತೆಗಳು

ಡಾ. ಜಿ. ಪರಮೇಶ್ವರ್ (ಡಿಸಿಎಂ) - ಕಂದಾಯ ಮತ್ತು ಕ್ರೀಡಾ ಇಲಾಖೆ

ಕೃಷ್ಣ ಬೈರೇಗೌಡ - ಬೆಂಗಳೂರು ನಗರಾಭಿವೃದ್ಧಿ (BWSSB, ಮೆಟ್ರೋ ಸೇರಿ)

ಪ್ರಿಯಾಂಕ್‌ ಖರ್ಗೆ - ಗೃಹ ಇಲಾಖೆ (ಗುಪ್ತಚರ ಹೊರತುಪಡಿಸಿ), ಐಟಿ-ಬಿಟಿ ಮತ್ತು ಇ-ಆಡಳಿತ

ರಾಮಲಿಂಗಾರೆಡ್ಡಿ - ಬೃಹತ್‌ ಮತ್ತು ಮಧ್ಯಮ ನೀರಾವರಿ (ಜಲಸಂಪನ್ಮೂಲ)

ಎಂ.ಬಿ. ಪಾಟೀಲ್‌ - ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ

ಕೆ.ಎಚ್‌. ಮುನಿಯಪ್ಪ - ಆಹಾರ ಮತ್ತು ನಾಗರಿಕ ಸರಬರಾಜು

ಕೆ.ಜೆ. ಜಾರ್ಜ್‌ - ಇಂಧನ ಮತ್ತು ಪ್ರವಾಸೋದ್ಯಮ

ಸತೀಶ್‌ ಜಾರಕಿಹೊಳಿ - ಲೋಕೋಪಯೋಗಿ ಇಲಾಖೆ (PWD)

ಈಶ್ವರ್‌ ಖಂಡ್ರೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

ಯತೀಂದ್ರ ಸಿದ್ದರಾಮಯ್ಯ - ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ)

ಬೈರತಿ ಸುರೇಶ್ - ಸಾರಿಗೆ ಇಲಾಖೆ

ಯು.ಟಿ. ಖಾದರ್‌ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಡಾ. ಶರಣಪ್ರಕಾಶ್‌ ಪಾಟೀಲ್‌ - ವೈದ್ಯಕೀಯ ಶಿಕ್ಷಣ ಇಲಾಖೆ, ಕೌಶಲ್ಯಾಭಿವೃದ್ಧಿ

ಬೆಂಗಳೂರು ಕೈತಪ್ಪಿದ್ದಕ್ಕೆ ರಾಮಲಿಂಗಾ ರೆಡ್ಡಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಹೊಸ ಕ್ಯಾಬಿನೆಟ್‌ನಲ್ಲಿ ಈ ಖಾತೆ ಹಂಚಿಕೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೆ ಅಂತ ಕಾದು ನೋಡಬೇಕು.

Latest News