ಕಲಬುರಗಿ ನ್ಯಾಯಾಲಯದ ಖಡಕ್ ತೀರ್ಪು - ಕೆಲಸ ಕೊಡಿಸಲು ₹1 ಲಕ್ಷ ಲಂಚ ಪಡೆದ ಸರ್ಕಾರಿ ಅಧಿಕಾರಿಗಳಿಗೆ 4 ವರ್ಷ ಜೈಲು ಶಿಕ್ಷೆ!!

ಸರ್ಕಾರಿ ಉದ್ಯೋಗದ ಆಸೆ ತೋರಿಸಿ ಅಮಾಯಕರಿಂದ ಹಣ ಲೂಟಿ ಮಾಡುವ ಭ್ರಷ್ಟ ಅಧಿಕಾರಿಗಳಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯವು ಒಂದು ಬಲವಾದ ಎಚ್ಚರಿಕೆಯನ್ನು ನೀಡಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವುದಾಗಿ ನಂಬಿಸಿ ಒಂದು ಲಕ್ಷ ರೂಪಾಯಿ ಲಂಚ ಪಡೆದಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಾಲಯವು ಕಠಿಣ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಲಂಚದ ಹಾವಳಿಗೆ ಕಠಿಣ ಶಿಕ್ಷೆ;
ಲಂಚದ ಹಾವಳಿಗೆ ಕಠಿಣ ಶಿಕ್ಷೆ;

ಈ ಪ್ರಕರಣವು ಶಹಾಬಾದ್‌ನ ಎಂಎಸ್‌ಐಎಲ್ (MSIL) ಕಚೇರಿಗೆ ಸಂಬಂಧಿಸಿದ್ದಾಗಿದೆ. ಜಿಲ್ಲೆಯ ಎಂಎಸ್‌ಐಎಲ್ ಕಚೇರಿಯಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದ ಬಿ. ಕೃಷ್ಣಮೂರ್ತಿ ಮತ್ತು ಡಿಎಲ್‌ಒ (DLO) ಆಗಿದ್ದ ಚಂದ್ರಶೇಖರ ಸಲಕೆ ಅವರು ಶಿಕ್ಷೆಗೆ ಗುರಿಯಾದ ಭ್ರಷ್ಟ ಅಧಿಕಾರಿಗಳು. ಸಿದ್ಧಲಿಂಗ ಗುಂಡಗೊಂಡ ಎಂಬುವವರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಈ ಇಬ್ಬರು ಅಧಿಕಾರಿಗಳು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣದಲ್ಲಿ ಮೊದಲ ಕಂತಾಗಿ ₹50 ಸಾವಿರವನ್ನು ಕೃಷ್ಣಮೂರ್ತಿ ಸ್ವೀಕರಿಸಿದ್ದರು. ತನಿಖೆಯ ಪ್ರಕಾರ, ಈ ಹಣವನ್ನು ಅವರು ನಂತರ ಮತ್ತೊಬ್ಬ ಅಧಿಕಾರಿ ಚಂದ್ರಶೇಖರ ಸಲಕೆ ಅವರಿಗೆ ಹಸ್ತಾಂತರಿಸಿದ್ದರು ಎಂಬುದು ಸಾಬೀತಾಗಿದೆ.

ಲಂಚದ ಹಾವಳಿಯ ಬಗ್ಗೆ ದೂರು ದಾಖಲಾದ ತಕ್ಷಣ, ಡಿವೈಎಸ್ಪಿ ಸುಧಾ ಅವರು ಪ್ರಕರಣದ ತನಿಖೆಯನ್ನು ಆರಂಭಿಸಿದರು. ನಂತರ ಇನ್‌ಸ್ಪೆಕ್ಟರ್ ಮಹಮ್ಮದ್ ಇಸ್ಮಾಯಿಲ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ ಎಸ್. ಚಾಂದಕವಠೆ ಅವರು ಪ್ರಬಲವಾಗಿ ವಾದ ಮಂಡಿಸಿದರು.

ಒಬ್ಬರಿಗೆ ಕೆಲಸ ಕೊಡಿಸ್ತೀವಿ ಅಂತ 1 ಲಕ್ಷ ಲಂಚ ಕೇಳಿದ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಈಗ ಕಠಿಣ ಶಿಕ್ಷೆಯಾಗಿದೆ. ಇಬ್ಬರಿಗೂ ತಲಾ 4 ವರ್ಷ ಜೈಲು ಶಿಕ್ಷೆಯಾಗಿದ್ದು, ಲಂಚ ಕೇಳೋ ಅಧಿಕಾರಿಗಳಿಗೆ ಇದು ದೊಡ್ಡ ಎಚ್ಚರಿಕೆ. ನ್ಯಾಯ ಸಿಗೋದಕ್ಕೆ ಸ್ವಲ್ಪ ಲೇಟ್ ಆದ್ರೂ, ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತ ಅನ್ನೋದು ಇಲ್ಲಿ ಸಾಬೀತಾಗಿದೆ. ಕಲಬುರಗಿ ನ್ಯಾಯಾಲಯ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಿದೆ. ಉದ್ಯೋಗದ ಆಮಿಷವೊಡ್ಡಿ ಲಂಚ ಪಡೆದ ಕೃಷ್ಣಮೂರ್ತಿ ಮತ್ತು ಚಂದ್ರಶೇಖರ ಅವರಿಗೆ ಜೈಲು ಶಿಕ್ಷೆಯಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪೊಲೀಸರು ನಡೆಸಿದ ಯಶಸ್ವಿ ತನಿಖೆಯಿಂದ ಈ ತೀರ್ಪು ಹೊರಬಿದ್ದಿದೆ.

ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀ ನಾರಾಯಣ ಅವರು ಸುದೀರ್ಘ ವಿಚಾರಣೆ ನಡೆಸಿದರು. ಅಧಿಕಾರಿಗಳ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಸಮೇತ ಸಾಬೀತಾದ ಹಿನ್ನೆಲೆಯಲ್ಲಿ, ಇಬ್ಬರಿಗೂ ತಲಾ 4 ವರ್ಷಗಳ ಜೈಲು ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು.

ಈ ತೀರ್ಪು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದೆ. ಕಷ್ಟಪಟ್ಟು ಕೆಲಸ ಹುಡುಕುವ ಯುವಕರಿಂದ ಹಣ ಕಿತ್ತುಕೊಳ್ಳುವುದು ಅಕ್ಷಮ್ಯ ಅಪರಾಧ ಎಂದು ನ್ಯಾಯಾಲಯ ಸಾರಿದೆ. ಇಂತಹ ಕಠಿಣ ಶಿಕ್ಷೆಗಳು ಸಾರ್ವಜನಿಕ ಸಂಸ್ಥೆಗಳ ಮೇಲೆ ಸಾಮಾನ್ಯ ಜನರ ನಂಬಿಕೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.