ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಸಾಮರ್ಲಕೋಟ ಮಂಡಲದ ವೆಟ್ಲಪಾಲೆಂ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಪಟಾಕಿ ಸ್ಫೋಟ ಇಡೀ ರಾಜ್ಯವನ್ನೇ ನಡುಗಿಸಿದೆ. ಸೂರ್ಯ ಫೈರ್ ವರ್ಕ್ಸ್ ಎಂಬ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಈ ದುರಂತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, ಆರು ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಐದು ಕಿಲೋಮೀಟರ್ ದೂರದವರೆಗೂ ಭೂಕಂಪದಂತಹ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಧ್ಯಾಹ್ನ ಸುಮಾರು 2:00 ಗಂಟೆಯ ಸಮಯದಲ್ಲಿ ಕಾರ್ಖಾನೆಯಲ್ಲಿ 20 ರಿಂದ 25 ಕಾರ್ಮಿಕರು ಇದ್ದರು. ಹೆಚ್ಚಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಾಸಾಯನಿಕಗಳನ್ನು ಮಿಶ್ರಣ ಮಾಡುವ ಜಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಇಡೀ ಕಾರ್ಖಾನೆ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಕಾರ್ಮಿಕರ ದೇಹಗಳು ಸಮೀಪದ ಭತ್ತದ ಗದ್ದೆಗಳಿಗೆ ಹಾರಿ ಬಿದ್ದಿದ್ದವು. ರಕ್ಷಣಾ ಸಿಬ್ಬಂದಿ ಈ ಪ್ರದೇಶವನ್ನು ಯುದ್ಧ ಭೂಮಿಯಂತೆ ಭಾಸವಾಗುತ್ತಿದೆ ಎಂದು ಬಣ್ಣಿಸಿದ್ದಾರೆ. ಗದ್ದೆಗಳಲ್ಲಿ ಬಿದ್ದಿದ್ದ ದೇಹಗಳನ್ನು ಪತ್ತೆಹಚ್ಚಲು ಆಡಳಿತ ಮಂಡಳಿಯು ಡ್ರೋನ್ ಕ್ಯಾಮೆರಾಗಳನ್ನು ಬಳಸಬೇಕಾಯಿತು.
ಗಂಭೀರವಾಗಿ ಗಾಯಗೊಂಡಿರುವ ಆರು ಜನರನ್ನು ಕಾಕಿನಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ಗಾಯಾಳುಗಳು ಶೇ. 90 ರಿಂದ 100 ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಸಾಮರ್ಲಕೋಟ ಮತ್ತು ಕಾಕಿನಾಡದಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಕಾರ್ಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳು ಪದೇ ಪದೇ ಸ್ಫೋಟಗೊಳ್ಳುತ್ತಿದ್ದರಿಂದ ಆರಂಭದಲ್ಲಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯುಂಟಾಯಿತು.
ವಿಜಯನಗರ ಪ್ರವಾಸದಲ್ಲಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, 'ವೆಟ್ಲಪಾಲೆಂ ಪಟಾಕಿ ಕಾರ್ಖಾನೆ ಸ್ಫೋಟದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಂಡಿರುವುದು ಎದೆನಡುಗಿಸುವ ಘಟನೆ,' ಎಂದು ಹೇಳಿದ್ದಾರೆ. ಗೃಹ ಸಚಿವೆ ವಂಗಲಪುಡಿ ಅನಿತಾ ಅವರಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿರುವ ಸಿಎಂ, ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.
This is absolutely heartbreaking 💔 No livelihood should come at the cost of human lives.
— Political అభిమాని 🏴💙 (@lady_biggboss) February 28, 2026
This tragedy must be a wake-up call for stronger safety standards and accountability.
Heartfelt condolences to the families who lost their loved ones. pic.twitter.com/kK6JFyg0fg
ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್ ಅಥವಾ ರಾಸಾಯನಿಕ ಮಿಶ್ರಣ ಮಾಡುವಾಗ ಉಂಟಾದ ರಾಸಾಯನಿಕ ಕ್ರಿಯೆಯಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ರಾಜ್ಯ ಸರ್ಕಾರವು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಕಾರ್ಖಾನೆಯು ಮಾನ್ಯತೆ ಪಡೆದ ಪರವಾನಗಿ ಹೊಂದಿದೆಯೇ ಮತ್ತು ಸ್ಫೋಟಕಗಳನ್ನು ನಿರ್ವಹಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.