ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಅಚ್ಚರಿಯ ಮತ್ತು ವಿಲಕ್ಷಣ ಘಟನೆಯೊಂದು ನಡೆದಿದೆ. ಪವಿತ್ರ ತಿರುಮಲ ದೇವಾಲಯಕ್ಕೆ ಲಡ್ಡು ಪ್ರಸಾದ ತಯಾರಿಸಲು ಹೊಗುತ್ತಿದ್ದ ತುಪ್ಪದ ಟ್ಯಾಂಕರ್ ರಸ್ತೆಯಲ್ಲಿ ಪಲ್ಟಿಯಾದಾಗ, ಸ್ಥಳೀಯರು ತುಪ್ಪವನ್ನು ಸಂಗ್ರಹಿಸಲು ಮುಗಿಬಿದ್ದಿದ್ದಾರೆ. ಪುಣೆಯಿಂದ ತಿರುಮಲಕ್ಕೆ ಸುಮಾರು 21,000 ಲೀಟರ್ ತುಪ್ಪವನ್ನು ಹೊತ್ತು ಸಾಗುತ್ತಿದ್ದ ಟ್ಯಾಂಕರ್ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ ಅನಂತಪುರಂ ಗ್ರಾಮದ ಬಳಿ ನಿಯಂತ್ರಣ ತಪ್ಪಿದ್ದು ಪಲ್ಟಿಯಾಗಿದೆ.
ಟ್ಯಾಂಕರ್ ಪಲ್ಟಿಯಾಗಿ ತುಪ್ಪ ರಸ್ತೆಯ ಮೇಲೆ ಹರಿಯುತ್ತಿದ್ದನ್ನು ಗಮನಿಸಿದ ಸುತ್ತಮುತ್ತಲಿನ ಗ್ರಾಮಸ್ಥರು, ತಕ್ಷಣವೇ ತಮ್ಮ ಕೈಗೆ ಸಿಕ್ಕ ಬಕೆಟ್ ಬಿಂದಿಗೆ ಕ್ಯಾನ್ ಮತ್ತು ಪಾತ್ರೆಗಳನ್ನು ಹಿಡಿದು ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ನೆರೆಯ ಗ್ರಾಮಗಳಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು ತುಪ್ಪವನ್ನು ಸಂಗ್ರಹಿಸಲು ಹರಸಾಹಸ ಪಟ್ಟಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಘಾತದ ಸ್ಥಳದಲ್ಲಿ ನಡೆದ ಈ ಬೆಳವಣಿಗೆ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ದುರ್ಘಟನೆಯಲ್ಲಿ ಟ್ಯಾಂಕರ್‌ನಲ್ಲಿದ್ದ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಜನಸಾಗರವೇ ಸೇರಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸುವ ಮೂಲಕ, ತುಪ್ಪ ಸಂಗ್ರಹಿಸಲು ಮುಗಿಬಿದ್ದಿದ್ದ ಜನರನ್ನು ನಿಯಂತ್ರಿಸಿ, ಸ್ಥಳವನ್ನು ತೆರವುಗೊಳಿಸಲಾಯಿತು.
ವಿಶ್ವವಿಖ್ಯಾತ ತಿರುಮಲ ದೇವಾಲಯದಲ್ಲಿ ತಯಾರಾಗುವ ಲಡ್ಡು ಪ್ರಸಾದಕ್ಕೆ ಅತ್ಯುತ್ತಮ ಗುಣಮಟ್ಟದ ತುಪ್ಪ ಅತ್ಯಗತ್ಯ. ಇದಕ್ಕಾಗಿ ತಿರುಪತಿ ತಿರುಮಲ ದೇವಸ್ಥಾನಂ (TTT) ಆಡಳಿತ ಮಂಡಳಿಯು ನಂದಿನಿ ತುಪ್ಪ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ತುಪ್ಪವನ್ನು ಆಮದು ಮಾಡಿಕೊಳ್ಳುತ್ತದೆ. ಸಾಗಾಟದ ಹಂತದಲ್ಲಿ ತುಪ್ಪದ ಗುಣಮಟ್ಟ ಕೆಡದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆದರೆ, ಇಂತಹ ಅನಿರೀಕ್ಷಿತ ಅಪಘಾತಗಳು ನಡೆದು, ತುಪ್ಪ ಸೋರಿಕೆಯಾದಾಗ ಸ್ಥಳೀಯರು ಈ ರೀತಿ ವರ್ತಿಸುವುದು ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪವಿತ್ರ ಕಾರ್ಯಕ್ಕಾಗಿ ಸಾಗಿಸುತ್ತಿದ್ದ ತುಪ್ಪವನ್ನು ಈ ರೀತಿ ಸ್ವಾರ್ಥಕ್ಕಾಗಿ ದೋಚಿದ್ದು ಸರಿಯೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಕಾನೂನಿನ ದೃಷ್ಟಿಯಿಂದ ಇದು ಅಪರಾಧವಾದರೂ, ಜನಸಾಮಾನ್ಯರು ಮಾತ್ರ ತುಪ್ಪಕ್ಕಾಗಿ ತೋರಿದ ಆಸಕ್ತಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.