ಕಬಿನಿ ಒಡಲು ಖಾಲಿಯಾದ ಬೆನ್ನಲ್ಲೇ ದಶಕಗಳ ನಂತರ ಹಿನ್ನೀರಿನಲ್ಲಿ ಪ್ರತ್ಯಕ್ಷವಾಯ್ತು ಪುರಾತನ ದೇವಸ್ಥಾನ - ಮಳೆಗಾಗಿ ಮುಗಿಬಿದ್ದ ಭಕ್ತರು!!

ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ರಾಜ್ಯದಲ್ಲೇ ಮೊಟ್ಟಮೊದಲಿಗೆ ಭರ್ತಿಯಾಗುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯವು (Kabini Dam) ಈ ಬಾರಿ ತೀವ್ರ ಮಳೆ ಕೊರತೆ ಎದುರಿಸುತ್ತಿದೆ. ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ತಳ ಸೇರಿದ್ದು, ಹಿನ್ನೀರಿನಲ್ಲಿ ಮುಳುಗಿದ್ದ ಪುರಾತನ ದೇವಾಲಯದ ಅವಶೇಷಗಳು ದಶಕಗಳ ಬಳಿಕ ಪ್ರತ್ಯಕ್ಷವಾಗಿವೆ. ಈ ಹಿನ್ನೆಲೆಯಲ್ಲಿ ಜಲಾಶಯದ ಒಡಲು ತುಂಬಿ, ಭೀಕರ ಬರಗಾಲ ದೂರಾಗಲಿ ಎಂದು ಪ್ರಾರ್ಥಿಸಿ ತೆರಣಿಮುಂಟಿ ಗ್ರಾಮಸ್ಥರು ಹಿನ್ನೀರಿನಲ್ಲೇ ಮುಳುಗಿದ್ದ ದೇವರಿಗೆ ಭಕ್ತಿಭಾವದಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಳೆಗಾಗಿ ಕಬಿನಿ ಒಡಲಲ್ಲೇ ಮಹಾ ಪೂಜೆ
ಮಳೆಗಾಗಿ ಕಬಿನಿ ಒಡಲಲ್ಲೇ ಮಹಾ ಪೂಜೆ

ವಾರದ ಹಿಂದೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು

ಸಾಮಾನ್ಯವಾಗಿ ಕಬಿನಿ ಜಲಾಶಯವು ಜೂನ್ ಅಥವಾ ಜುಲೈ ತಿಂಗಳಲ್ಲೇ ಕೋಡಿ ಬೀಳುವ ಹಂತ ತಲುಪುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿದೆ. ಮಳೆಯ ಅಭಾವದಿಂದಾಗಿ ಜಲಾಶಯದ ನೀರು ಹಿಂದೆ ಸರಿದಿದ್ದು, ಮಣ್ಣಿನ ಒಡಲಿನಲ್ಲಿ ಹೂತುಹೋಗಿದ್ದ ಐತಿಹಾಸಿಕ ಪಳಯುಳಿಕೆಗಳು ಹೊರಬಂದಿವೆ.

ಕಬಿನಿ ಜಲಾಶಯದ ನೀರು ಖಾಲಿಯಾದ ಹಿನ್ನೆಲೆಯಲ್ಲಿ ಹಿನ್ನೀರಿನ ಮಧ್ಯೆ ದಶಕಗಳಿಂದ ಮುಳುಗಡೆಯಾಗಿದ್ದ ಪುರಾತನ ದೇವಾಲಯದ ಅವಶೇಷಗಳು ಮತ್ತು ಮೂರ್ತಿಗಳು ಪ್ರತ್ಯಕ್ಷವಾಗಿರುವ ಬಗ್ಗೆ ‘ನ್ಯೂಸ್ ಫಸ್ಟ್’ (News First) ವಾಹಿನಿಯು ಒಂದು ವಾರದ ಹಿಂದೆಯಷ್ಟೇ ವಿಶೇಷ ವರದಿಯನ್ನು ಭಿತ್ತರಿಸಿತ್ತು. ಈ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು, ಪ್ರಕಟಗೊಂಡಿರುವ ದೇವರಿಗೆ ವಿಶೇಷ ಅಭಿಷೇಕ ಮಾಡಿ ಮಳೆಗಾಗಿ ಮರೆಹೋಗಲು ತೀರ್ಮಾನಿಸಿದ್ದರು.

ನಡುತಟ್ಟು ಬಸಪ್ಪ ಮತ್ತು ಶಿವಲಿಂಗಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಅಭಿಷೇಕ

ತೆರಣಿಮುಂಟಿ ಗ್ರಾಮದ ನೂರಾರು ಭಕ್ತರು ಕಬಿನಿ ಹಿನ್ನೀರಿನ ತೀರಕ್ಕೆ ಆಗಮಿಸಿ, ಅಲ್ಲಿ ಕಾಣಿಸಿಕೊಂಡಿರುವ ಪುರಾತನ ಕಾಲದ ದೇವಾಲಯದ ಅವಶೇಷಗಳಿಗೆ ಪೂಜೆ ಸಲ್ಲಿಸಿದರು. ಹಿನ್ನೀರಿನ ಮಧ್ಯೆ ಮೈದಳೆದು ನಿಂತಿರುವ ನಡುತಟ್ಟು ಬಸಪ್ಪ (ನಂದಿ), ಪವಿತ್ರ ಶಿವಲಿಂಗ ಹಾಗೂ ದೇವಾಲಯದ ಪುರಾತನ ದ್ವಾರಪಾಲಕ ವಿಗ್ರಹಗಳಿಗೆ ಸಕಲ ಶಾಸ್ತ್ರೋಕ್ತವಾಗಿ ಮಹಾ ಅಭಿಷೇಕ ನೆರವೇರಿಸಲಾಯಿತು.

ಅಪರೂಪದ ಭಕ್ತಿ ಸೇವೆ

ಗ್ರಾಮಸ್ಥರು ದೇವಸ್ಥಾನದ ಅವಶೇಷಗಳು ಸಿಕ್ಕ ಜಾಗದಲ್ಲೇ ದೇವರಿಗೆ ತಾತ್ಕಾಲಿಕವಾಗಿ ಚಪ್ಪರ ಹಾಕಿ ನೆರಳು ನಿರ್ಮಿಸಿದರು. ಬಳಿಕ ಮುಂಗಾರು ಮಳೆ ಶೀಘ್ರವೇ ಬರಲಿ ಎಂದು ಪ್ರಾರ್ಥಿಸುತ್ತಾ, ಪವಿತ್ರ ಕಪಿಲಾ ನದಿಯಿಂದ (Kapila River) ಸುಮಾರು 101 ಬಿಂದಿಗೆ ನೀರನ್ನು ತಲೆಯ ಮೇಲೆ ಹೊತ್ತು ತಂದು ದೇವರಿಗೆ ಅರ್ಪಿಸಿದರು.

ಗ್ರಾಮದ ಮುತ್ತೈದೆಯರು ಮತ್ತು ಯುವಕರು ಸಾಲಾಗಿ ನಿಂತು ನದಿಯ ನೀರನ್ನು ತಂದು ದೇವರಿಗೆ ಪ್ರೋಕ್ಷಣೆ ಮಾಡಿದ್ದು ಭಕ್ತಿಯ ಪರಾಕಾಷ್ಠೆಯನ್ನು ಸಾರುತ್ತಿತ್ತು.

ಪಂಚಾಮೃತ ಅಭಿಷೇಕ ಮತ್ತು ಹೂವಿನ ಅಲಂಕಾರ

ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳ ಪ್ರಕಾರ, ಪುರಾತನ ಮೂರ್ತಿಗಳಿಗೆ ಕುಂಕುಮ, ಅರಿಶಿನ, ವಿಭೂತಿ ಅಭಿಷೇಕ, ಜೇನುತುಪ್ಪ, ಹಾಲು, ಮೊಸರು ಹಾಗೂ ಪಂಚಾಮೃತಗಳ ಮೂಲಕ ಭವ್ಯ ಅಭಿಷೇಕ ಮಾಡಲಾಯಿತು. ಅಭಿಷೇಕದ ನಂತರ ನಡುತಟ್ಟು ಬಸಪ್ಪನ ವಿಗ್ರಹವನ್ನು ತರಹೇವಾರಿ ಸುಗಂಧಿತ ಹೂವುಗಳಿಂದ ಅತ್ಯಂತ ಸುಂದರವಾಗಿ ಅಲಂಕರಿಸಿ, ಮಹಾ ಮಂಗಳಾರತಿ ಬೆಳಗಲಾಯಿತು. ದಶಕಗಳ ಕಾಲ ನೀರಿನ ಅಡಿಯಲ್ಲೇ ಇದ್ದ ಬಸಪ್ಪನಿಗೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಮೈಮನ ರೋಮಾಂಚನಗೊಳಿಸುವಂತಿತ್ತು.

ಈ ವಿಶೇಷ ಪೂಜಾ ಕೈಂಕರ್ಯದ ಅಂಗವಾಗಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಮಹಾ ಪ್ರಸಾದ ವಿತರಣೆ ಮಾಡಲಾಯಿತು.

ವರುಣದೇವನ ಕೃಪೆಗಾಗಿ ಒಕ್ಕೊರಲಿನ ಪ್ರಾರ್ಥನೆ

ಕಬಿನಿ ಹಿನ್ನೀರಿನ ದೇವರಿಗೆ ಪೂಜೆ ಸಲ್ಲಿಸಿದರೆ ಖಂಡಿತವಾಗಿಯೂ ಮಳೆಯಾಗುತ್ತದೆ ಎಂಬ ದೃಢ ನಂಬಿಕೆ ಈ ಭಾಗದ ಜನರಲ್ಲಿದೆ. ಮಳೆಯಿಲ್ಲದೆ ಒಣಗುತ್ತಿರುವ ಭೂಮಿ ತಂಪಾಗಲಿ, ಜಲಾಶಯಗಳು ಬೇಗನೆ ಭರ್ತಿಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂಬ ಒಕ್ಕೊರಲ ಆಶಯ ಗ್ರಾಮಸ್ಥರದಾಗಿತ್ತು. ಪ್ರಕೃತಿಯ ಮುನಿಸು ದೂರಾಗಿ, ವರುಣದೇವನು ಶೀಘ್ರದಲ್ಲೇ ಧರೆಗೆ ಇಳಿದು ಕಬಿನಿ ಜಲಾಶಯವನ್ನು ಮತ್ತೆ ಹಸಿರಾಗಿಸಲಿ ಎಂಬುದೇ ಸದ್ಯ ಪ್ರತಿಯೊಬ್ಬ ಭಕ್ತನ ಪ್ರಾರ್ಥನೆಯಾಗಿದೆ.

Latest News