Apr 14, 2026 Languages : ಕನ್ನಡ | English

'ರಂಗೀಲಾ' ರವಿಯಾಟಕ್ಕೆ ಬಿದ್ದಿತು ಬ್ರೇಕ್ - ಗರ್ಭಿಣಿ ಪತ್ನಿ ಇರುವಾಗಲೇ ಎರಡನೇ ಮದುವೆಯಾದ ಕಿಲಾಡಿ!!

ಸಿನಿಮಾ ರಂಗೀಲಾ ಸಿನಿಮಾದಲ್ಲಿ ಹೀರೋ ಒಬ್ಬಳಿಗಿಂತ ಒಬ್ಬಳು ಸುಂದರಿ ಅಂತ ಹುಡುಗಿಯರ ಹಿಂದೆ ಬಿದ್ದಿದ್ದನ್ನ ನೋಡಿರ್ತೀರಾ. ಆದ್ರೆ ಬೆಂಗಳೂರು ಹೊರವಲಯದ ಜಿಗಣಿಯಲ್ಲೊಬ್ಬ ಅಪ್ಪಟ 'ಮೋಸಗಾರ' ರವಿ ಎಂಬ ವ್ಯಕ್ತಿ, ಹೆಣ್ಣುಮಕ್ಕಳ ಜೀವನದ ಜೊತೆ ಚೆಲ್ಲಾಟವಾಡಿ ಈಗ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡ್ತಿದ್ದಾನೆ. ಇಷ್ಟೆಲ್ಲಾ ಕೃತ್ಯಕ್ಕೆ ಈತನ ಇಡೀ ಕುಟುಂಬವೇ ಸಾಥ್ ನೀಡಿರೋದು ನಿಜಕ್ಕೂ ಅಚ್ಚರಿಯ ವಿಷಯ.

ಜಿಗಣಿ ಪೊಲೀಸರ ನಿದ್ದೆ ಗೆಡಿಸಿದ ಅಪ್ಪಟ ಮೋಸಗಾರನ ಅಸಲಿ ಮುಖವಾಡ ಬಯಲು
ಜಿಗಣಿ ಪೊಲೀಸರ ನಿದ್ದೆ ಗೆಡಿಸಿದ ಅಪ್ಪಟ ಮೋಸಗಾರನ ಅಸಲಿ ಮುಖವಾಡ ಬಯಲು

ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯವನಾದ ಈ ರವಿ, ಜಿಗಣಿ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದ. ನೋಡೋಕೆ ಬಹಳ ಸಂಭಾವಿತನಂತೆ ನಟಿಸುತ್ತಿದ್ದ ಈತ, 2024ರ ಜನವರಿಯಲ್ಲಿ ಪಂಕಜ ಎಂಬ ಯುವತಿಯನ್ನು ಮದುವೆಯಾಗಿದ್ದ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ರವಿಯ ಅಸಲಿ ಬುದ್ಧಿ ತೋರಿಸೋಕೆ ಬಹಳ ಸಮಯ ಬೇಕಾಗಲಿಲ್ಲ.

ಮನೆಯಲ್ಲಿ ಪತ್ನಿ ಇರುವಾಗಲೇ ಬೇರೆ ಹೆಣ್ಣುಮಕ್ಕಳ ದೇಹದ ಬಗ್ಗೆ ಪತ್ನಿಯ ಮುಂದೆಯೇ ವರ್ಣನೆ ಮಾಡ್ತಿದ್ದನಂತೆ ಈ ಭೂಪ! ಅಷ್ಟೇ ಅಲ್ಲದೆ, ವರದಕ್ಷಿಣೆ ತಗೊಂಡು ಬಾ, ನಿನ್ನ ಸ್ನೇಹಿತೆಯರನ್ನು ಮನೆಗೆ ಕರೆಯಿಸು ಅಂತ ಕಿರುಕುಳ ಕೊಡುತ್ತಿದ್ದ. ಇದರಿಂದ ಬೇಸತ್ತಿದ್ದ ಪಂಕಜ ಹೇಗೋ ಸಂಸಾರ ಮಾಡ್ತಿದ್ದರು. ಪಂಕಜ ಗರ್ಭಿಣಿಯಾದಾಗ ರವಿಯ ವಿಕೃತ ಆಟ ಶುರುವಾಯ್ತು.

ಗರ್ಭಿಣಿ ಪತ್ನಿ ಇರುವಾಗಲೇ ಎಂಗೇಜ್‌ಮೆಂಟ್

ಪತ್ನಿ ಗರ್ಭಿಣಿ ಅನ್ನೋದು ಗೊತ್ತಿದ್ದರೂ, "ನನಗೆ ಇನ್ನೂ ಮದುವೆಯೇ ಆಗಿಲ್ಲ" ಅಂತ ಸುಳ್ಳು ಹೇಳಿ ತನ್ನ ಕುಟುಂಬದವರ ಜೊತೆಗೂಡಿ ಊರೂರು ಸುತ್ತಿ ಹೆಣ್ಣು ಹುಡುಕೋಕೆ ಶುರು ಮಾಡಿದ್ದ. ಅಕ್ಟೋಬರ್‌ನಲ್ಲಿ ಒಂದು ಹುಡುಗಿ ಜೊತೆ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದ! ಈ ವಿಚಾರ ಪತ್ನಿ ಪಂಕಜಗೆ ಗೊತ್ತಾಗಿ, ಆಕೆ ಎಂಗೇಜ್‌ಮೆಂಟ್ ಆದ ಹುಡುಗಿಯ ಕುಟುಂಬಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ರು. ಆಗ ಆ ಹುಡುಗಿಯ ಮನೆಯವರು ರವಿ ಮನೆಗೆ ಬಂದು ಈತನಿಗೆ ಸರಿಯಾಗಿ ಗೂಸಾ ಕೊಟ್ಟಿದ್ರು.

ಹೆರಿಗೆಗೆ ಹೋದಾಗ ಎರಡನೇ ಮದುವೆ

ಇಷ್ಟೆಲ್ಲಾ ಆದ್ರೂ ಈ ರವಿ ಬುದ್ಧಿ ಕಲಿಲಿಲ್ಲ. ಪತ್ನಿ ಪಂಕಜ ಹೆರಿಗೆಗಾಗಿ ತವರು ಮನೆಗೆ ಹೋದಾಗ, ಈತ ಸದ್ದಿಲ್ಲದೆ ಮತ್ತೊಂದು ಮದುವೆಯಾಗಿದ್ದಾನೆ! ಹೌದು, 2025ರ ಡಿಸೆಂಬರ್‌ನಲ್ಲಿ ತನಗಿನ್ನೂ ಮದುವೆಯೇ ಆಗಿಲ್ಲ ಎಂದು ನಂಬಿಸಿ ಇನ್ನೊಬ್ಬ ಯುವತಿಯ ಕೊರಳಿಗೆ ತಾಳಿ ಕಟ್ಟಿದ್ದ.

ಪತ್ನಿಯಿಂದಲೇ ಬಿತ್ತು ಧರ್ಮದೇಟು

ಎರಡನೇ ಮದುವೆ ವಿಚಾರ ಪಂಕಜಗೆ ತಿಳಿಯುತ್ತಿದ್ದಂತೆಯೇ ಅವರು ಸುಮ್ಮನೆ ಕೂರಲಿಲ್ಲ. ತನ್ನ ಕುಟುಂಬದವರ ಜೊತೆ ನೇರವಾಗಿ ರವಿ ಮನೆಗೆ ನುಗ್ಗಿದ ಪಂಕಜ, ಈತನಿಗೆ ಹಿಗ್ಗಾಮುಗ್ಗಾ ಚಚ್ಚಿದ್ದಾರೆ. ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡಿದ ಕಾಮುಕನಿಗೆ ಅಕ್ಷರಶಃ ಬೀದಿಯಲ್ಲೇ ಧರ್ಮದೇಟು ಬಿದ್ದಿದೆ.

ಸದ್ಯ ಈ ಕಿಲಾಡಿ ರವಿ ಮತ್ತು ಈತನಿಗೆ ಸಾಥ್ ನೀಡಿದ ಕುಟುಂಬದವರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ನಿಯಿಂದ ಗೂಸಾ ತಿಂದ ಮೇಲೆ ರವಿ ಈಗ ಪರಾರಿಯಾಗಿದ್ದು, ಜಿಗಣಿ ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಹೆಣ್ಣುಮಕ್ಕಳ ಬದುಕನ್ನು ನರಕ ಮಾಡಿದ ಇಂತಹ ಕಿಲಾಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಅನ್ನೋದು ಎಲ್ಲರ ಒತ್ತಾಯ.