May 6, 2026 Languages : ಕನ್ನಡ | English

ಗಂಡ-ಹೆಂಡತಿ ಜಗಳ ಬಿಡಿಸೋ ನೆಪದಲ್ಲೇ ವಿವಾಹಿತೆಯನ್ನೇ ಓಡಿಸಿಕೊಂಡು ಹೋದ ಅಧ್ಯಕ್ಷ - ಹೀಗೂ ಪಂಚಾಯತಿ ಮಾಡ್ತಾರಾ?

'ದುಡ್ಡಿದ್ದರೆ ಜಗತ್ತನ್ನೇ ಗೆಲ್ಲಬಹುದು' ಎಂಬ ಮಾತಿದೆ. ಇಂದಿನ ಕಾಲದಲ್ಲಿ ಹಣವಿದ್ದರೆ ಯಾವುದೇ ವಯಸ್ಸಿನಲ್ಲಾದರೂ ಮದುವೆಯಾಗಬಹುದು, ಯಾರನ್ನಾದರೂ ಒಲಿಸಿಕೊಳ್ಳಬಹುದು ಎಂಬ ಕಹಿ ಸತ್ಯ ಸಮಾಜದಲ್ಲಿ ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಏನಾದರೂ ಗಲಾಟೆ ಅಥವಾ ಸಮಸ್ಯೆಗಳಾದಾಗ ಜನ ಓಡುವುದು ಪಂಚಾಯಿತಿ ಕಟ್ಟೆಗೆ ಇಲ್ಲವೇ ಗ್ರಾಮದ ಮುಖ್ಯಸ್ಥರಾದ ಅಧ್ಯಕ್ಷನ ಬಳಿ. ಯಾಕಂದ್ರೆ ಅವರು ನ್ಯಾಯ ಕೊಡಿಸುತ್ತಾರೆ ಅನ್ನೋ ನಂಬಿಕೆ. 

ಗ್ರಾಮದಲ್ಲಿ ಅಧ್ಯಕ್ಷನ ಅಟ್ಟಹಾಸ – ಹೆಂಡತಿ ಪರಾರಿ; | Photo Credit: https://x.com/Preeti7739
ಗ್ರಾಮದಲ್ಲಿ ಅಧ್ಯಕ್ಷನ ಅಟ್ಟಹಾಸ – ಹೆಂಡತಿ ಪರಾರಿ; | Photo Credit: https://x.com/Preeti7739

ಆದರೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಘಟನೆ ಕೇಳಿದರೆ ಈ ನಂಬಿಕೆಯೇ ಹೊರಟು ಹೋಗುತ್ತದೆ. ಗಂಡ-ಹೆಂಡತಿಯ ಜಗಳ ಬಿಡಿಸಲು ಬಂದ ಅಧ್ಯಕ್ಷ, ಜಗಳ ಬಿಡಿಸೋದನ್ನ ಬಿಟ್ಟು ಆ ಮನೆ ಹೆಂಡತಿಯನ್ನೇ ಕರೆದುಕೊಂಡು ಪರಾರಿಯಾಗಿದ್ದಾನೆ!

ಘಟನೆಯ ಹಿನ್ನೆಲೆ ಏನು?

ಝಾನ್ಸಿಯ ಒಂದು ಗ್ರಾಮದಲ್ಲಿ ಹೊಸದಾಗಿ ಮದುವೆಯಾಗಿದ್ದ ದಂಪತಿಗಳ ನಡುವೆ ಸಣ್ಣ ವಿಷಯಕ್ಕೆ ಜಗಳ ಶುರುವಾಗಿತ್ತು. ದಿನಾ ಗಲಾಟೆ ನಡೆಯುತ್ತಿದ್ದ ಕಾರಣ, ಇದನ್ನು ಬಗೆಹರಿಸಲು ಗ್ರಾಮದ  ಅಧ್ಯಕ್ಷ ಅವರನ್ನು ಕರೆಯಲಾಗಿತ್ತು. "ದೊಡ್ಡವರು ಬಂದರೆ ಜಗಳ ನಿಲ್ಲಬಹುದು, ಸಂಸಾರ ಸರಿ ಹೋಗಬಹುದು" ಎಂದು ಗಂಡ ಭಾವಿಸಿದ್ದ. ಆದರೆ ಅಲ್ಲಿ ನಡೆದಿದ್ದೇ ಬೇರೆ.

ಅಧ್ಯಕ್ಷ ಆ ಮನೆಗೆ ಬಂದು ಹೋಗಲು ಶುರು ಮಾಡಿದ ಮೇಲೆ ಜಗಳ ನಿಲ್ಲುವ ಬದಲು, ಆತನಿಗೆ ಆ 22 ವರ್ಷದ ವಿವಾಹಿತ ಯುವತಿಯ ಮೇಲೆ ಕಣ್ಣು ಬಿದ್ದಿದೆ. ಅತ್ತ ಆ ಯುವತಿ ಕೂಡ  ಅಧ್ಯಕ್ಷನ ಮಾತಿನ ಮೋಡಿಗೆ ಮರುಳಾಗಿದ್ದಾಳೆ.

ನ್ಯಾಯ ಹೇಳೋನ ಜೊತೆಗೇ ಯುವತಿ ಪರಾರಿ!

ಒಂದು ದಿನ ಗಂಡ ಮನೆಯಲ್ಲಿ ಇಲ್ಲದ ಸಮಯ ನೋಡಿ,  ಅಧ್ಯಕ್ಷ ಆ ಯುವತಿಯನ್ನು ಪುಸಲಾಯಿಸಿ ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ. ಮನೆಯಲ್ಲಿದ್ದ ಒಡವೆ ಮತ್ತು ಹಣದ ಜೊತೆಗೆ ಆಕೆ ಮಾಯವಾಗಿದ್ದಾಳೆ. ಕೆಲಸ ಮುಗಿಸಿ ಮನೆಗೆ ಬಂದ ಗಂಡನಿಗೆ ಹೆಂಡತಿ ಕಾಣದಿದ್ದಾಗ ಆತ ಗಾಬರಿಯಾಗಿದ್ದಾನೆ. ಅಕ್ಕಪಕ್ಕದವರನ್ನು ವಿಚಾರಿಸಿದಾಗ,  ಅಧ್ಯಕ್ಷನ ಜೊತೆಗೆ ಆಕೆ ಹೋಗಿರುವುದು ಬೆಳಕಿಗೆ ಬಂದಿದೆ.

ಗಂಡನ ಆರೋಪ ಮತ್ತು ದೂರು

ಇದೀಗ ಅಸಹಾಯಕ ಗಂಡ ಪೊಲೀಸರ ಮೊರೆ ಹೋಗಿದ್ದಾನೆ. "ನನ್ನ ಹೆಂಡತಿಯನ್ನು  ಅಧ್ಯಕ್ಷ ಆಮಿಷವೊಡ್ಡಿ ಅಪಹರಿಸಿದ್ದಾನೆ. ನಮ್ಮ ಜಗಳ ಬಗೆಹರಿಸುತ್ತಾನೆ ಎಂದು ನಂಬಿದ್ದೆ, ಆದರೆ ಆತನೇ ನನ್ನ ಸಂಸಾರಕ್ಕೆ ಬೆಂಕಿ ಇಟ್ಟಿದ್ದಾನೆ" ಎಂದು ಗಂಡ ಕಣ್ಣೀರು ಹಾಕುತ್ತಿದ್ದಾನೆ. ಇಡೀ ಗ್ರಾಮದಲ್ಲಿ ಈಗ ಈ ವಿಷಯವೇ ದೊಡ್ಡ ಚರ್ಚೆಯಾಗುತ್ತಿದೆ. "ಬೇಲಿ ಎದ್ದು ಹೊಲ ಮೇಯ್ದ ಹಾಗೆ" ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸಮಾಜಕ್ಕೆ ಏನಿದು ಸಂದೇಶ?

ಗ್ರಾಮದ ಮುಖ್ಯಸ್ಥ ಎಂದರೆ ಆತ ಇಡೀ ಹಳ್ಳಿಗೆ ಒಬ್ಬ ತಂದೆಯ ಸಮಾನ ಅಥವಾ ಮಾರ್ಗದರ್ಶಕನಾಗಿರಬೇಕು. ಆದರೆ ಅಧಿಕಾರ ಮತ್ತು ಜನರ ನಂಬಿಕೆಯನ್ನು ಇಷ್ಟು ಕೀಳಾಗಿ ಬಳಸಿಕೊಂಡ ಸಾರಪಂಚ್‌ನ ನಡೆ ನಿಜಕ್ಕೂ ಆಘಾತಕಾರಿ.

ನಂಬಿಕೆ ಎಲ್ಲಿಗೆ ಬಂತು?: ನಾವು ಯಾರನ್ನು ನಂಬಿ ನಮ್ಮ ಮನೆಯ ವಿಷಯಗಳನ್ನು ಹಂಚಿಕೊಳ್ಳಬೇಕು ಎಂಬ ಪ್ರಶ್ನೆ ಕಾಡುತ್ತಿದೆ.

ಅಪರಾಧಿಯ ಅಟ್ಟಹಾಸ: ಅಧ್ಯಕ್ಷನಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಕೃತ್ಯವೆಸಗಿದರೆ ಸಾಮಾನ್ಯ ಜನರ ಗತಿಯೇನು?

ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಸಾರಪಂಚ್ ಮತ್ತು ಆ ವಿವಾಹಿತ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನ್ಯಾಯ ಕೊಡಿಸಬೇಕಾದವನೇ ಅನ್ಯಾಯ ಮಾಡಿ ಓಡಿ ಹೋದ ಈ ಘಟನೆ ಝಾನ್ಸಿಯಲ್ಲಿ ಸಖತ್ ಸುದ್ದಿಯಾಗಿದೆ.  

22 ವರ್ಷದ ವಿವಾಹಿತ ಯುವತಿ ತನ್ನ ಮನೆಯಲ್ಲಿದ್ದ ನಗದು ಮತ್ತು ಒಡವೆಗಳನ್ನು ತೆಗೆದುಕೊಂಡು, 55 ವರ್ಷದ ಗ್ರಾಮದ ಮುಖ್ಯಸ್ಥನ ಜೊತೆಗೆ ಓಡಿಹೋಗಿದ್ದಾಳೆ. ಗಂಡ-ಹೆಂಡತಿಯ ಜಗಳ ಬಗೆಹರಿಸಲು ಬಂದಿದ್ದ ಈ ಪಂಚಾಯಿತಿ ಅಧ್ಯಕ್ಷ, ಸಂಸಾರ ಸರಿಪಡಿಸುವ ಬದಲು ಆ ಮನೆಯ ಹೆಂಡತಿಯನ್ನೇ ಕರೆದುಕೊಂಡು ಮಾಯವಾಗಿದ್ದಾನೆ!