Mar 27, 2026 Languages : ಕನ್ನಡ | English

ಭಾರತದಲ್ಲಿ ಲಾಕ್‌ಡೌನ್ ಆಗುತ್ತಾ? ಸುಳ್ಳು ಸುದ್ದಿ ನಂಬಬೇಡಿ - ದೇಶ ಸುರಕ್ಷಿತವಾಗಿರಲು ಇಲ್ಲಿದೆ 5 ಬಲವಾದ ಕಾರಣಗಳು!!

ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಈಗ ಜಗತ್ತಿನ ನಿದ್ದೆಗೆಡಿಸಿದೆ. ಹಾರ್ಮುಜ್ ಜಲಸಂಧಿ ಬಂದ್ ಆಗಿರೋದ್ರಿಂದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್‌ಗಾಗಿ ದೇಶ ದೇಶಗಳ ನಡುವೆ ಹಾಹಾಕಾರ ಶುರುವಾಗಿದೆ. ನಮ್ಮ ಪಕ್ಕದ ದೇಶಗಳಾದ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಈಗಾಗಲೇ ತೈಲ ಉಳಿಸಲು ಲಾಕ್‌ಡೌನ್ ಮತ್ತು ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಲಾಗಿದೆ. ಮ್ಯಾನ್ಮಾರ್‌ನಲ್ಲಿ ವಾಹನಗಳಿಗೆ ಒನ್-ಟು-ಒನ್ ರೂಲ್ಸ್ ಜಾರಿಯಾಗಿದೆ.

ಯುದ್ಧದ ಬಿಸಿ ಜಗತ್ತಿಗೆ, ಶಾಂತಿ ಭಾರತಕ್ಕೆ – ಲಾಕ್‌ಡೌನ್ ಇಲ್ಲ!!
ಯುದ್ಧದ ಬಿಸಿ ಜಗತ್ತಿಗೆ, ಶಾಂತಿ ಭಾರತಕ್ಕೆ – ಲಾಕ್‌ಡೌನ್ ಇಲ್ಲ!!

ಇಷ್ಟೆಲ್ಲಾ ಅವಾಂತರಗಳ ನಡುವೆ ಭಾರತದಲ್ಲೂ ಲಾಕ್‌ಡೌನ್ ಆಗುತ್ತೆ ಎಂಬ ವದಂತಿ ಜೋರಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ "ಕೋವಿಡ್ ಸಮಯದಂತೆಯೇ ಸಿದ್ಧರಾಗಿರಬೇಕು" ಎಂದು ಹೇಳಿದ್ದನ್ನೇ ಲಾಕ್‌ಡೌನ್ ಮುನ್ಸೂಚನೆ ಎಂದು ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ಅಸಲಿ ವಿಷಯ ಅಂದ್ರೆ, ಭಾರತದಲ್ಲಿ ಲಾಕ್‌ಡೌನ್ ಆಗುವ ಯಾವುದೇ ಚಾನ್ಸ್ ಇಲ್ಲ. ಅದಕ್ಕೆ ಕಾರಣವಾದ 5 ಮುಖ್ಯ ಅಂಶಗಳು ಇಲ್ಲಿವೆ.

1. ನಮ್ಮಲ್ಲಿ ತೈಲದ ಬೃಹತ್ ಸಂಗ್ರಹವಿದೆ

ಬೇರೆ ದೇಶಗಳ ಬಳಿ ತೈಲ ಖಾಲಿಯಾಗಿರಬಹುದು, ಆದರೆ ಭಾರತ ಮೊದಲೇ ಮುನ್ನೆಚ್ಚರಿಕೆ ವಹಿಸಿದೆ. ಸರ್ಕಾರದ ಮಾಹಿತಿ ಪ್ರಕಾರ, ನಮ್ಮ ಬಳಿ ಸದ್ಯಕ್ಕೆ ಸುಮಾರು 74 ದಿನಗಳಿಗಾಗುವಷ್ಟು ಪೆಟ್ರೋಲಿಯಂ ಸಂಗ್ರಹವಿದೆ. ಯುದ್ಧದ ಸಮಯದಲ್ಲಿ ಜಾಗತಿಕ ಸರಬರಾಜು ಕಡಿತಗೊಂಡರೂ, ಎರಡು ತಿಂಗಳಿಗೂ ಹೆಚ್ಚು ಕಾಲ ದೇಶವನ್ನು ಯಾವುದೇ ಅಡೆತಡೆಯಿಲ್ಲದೆ ಮುನ್ನಡೆಸುವ ಶಕ್ತಿ ಭಾರತಕ್ಕಿದೆ. ಹಾಗಾಗಿ ತೈಲಕ್ಕಾಗಿ ಲಾಕ್‌ಡೌನ್ ಮಾಡುವ ಅವಶ್ಯಕತೆಯೇ ಇಲ್ಲ.

2. ಟ್ಯಾಕ್ಸ್ ಕಡಿತದ ಮೂಲಕ ಜನರಿಗೆ ರಿಲೀಫ್

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿದ್ದರೂ, ಅದರ ಬಿಸಿ ಜನರಿಗೆ ತಟ್ಟದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಮಾರ್ಚ್ 27 ರಂದು ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸ್ಪೆಷಲ್ ಎಕ್ಸೈಸ್ ಡ್ಯೂಟಿಯನ್ನು 10 ರೂಪಾಯಿ ಕಡಿತಗೊಳಿಸಿದೆ. ಒಂದು ವೇಳೆ ಸಂಕಷ್ಟ ಇನ್ನೂ ಹೆಚ್ಚಾದರೆ, ಸರ್ಕಾರ ತನ್ನ ಪಾಲಿನ ತೆರಿಗೆಯನ್ನು ಇನ್ನೂ ಕಮ್ಮಿ ಮಾಡಿ ತೈಲ ಕಂಪನಿಗಳಿಗೆ ಬೆಂಬಲ ನೀಡಲಿದೆ.

3. ನಮಗೆ ಮಾತ್ರ 'ಹಾರ್ಮುಜ್' ಹಾದಿ ಮುಕ್ತ!

ಇದು ಭಾರತದ ರಾಜತಾಂತ್ರಿಕ ಗೆಲುವು. ಇರಾನ್ ಇಡೀ ಜಗತ್ತಿಗೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದರೂ, ಭಾರತದೊಂದಿಗೆ ಇರುವ ಉತ್ತಮ ಸಂಬಂಧದ ಕಾರಣದಿಂದ ನಮಗೆ ಮಾತ್ರ ರಿಯಾಯಿತಿ ನೀಡಿದೆ. ಕೇವಲ 5 ದೇಶಗಳಿಗೆ ಮಾತ್ರ ಈ ಹಾದಿಯನ್ನು ಮುಕ್ತಗೊಳಿಸಲಾಗಿದ್ದು, ಅದರಲ್ಲಿ ಭಾರತದ ಹೆಸರೂ ಇದೆ. ಅಂದರೆ, ಭಾರತದ ಹಡಗುಗಳು ಯಾವುದೇ ತೊಂದರೆಯಿಲ್ಲದೆ ತೈಲ ಹೊತ್ತು ಬರಬಹುದು. ಪೂರೈಕೆಯ ಟೆನ್ಷನ್ ಈಗ ನಮಗಿಲ್ಲ.

4. ಒಂದೇ ದೇಶದ ಮೇಲೆ ಅವಲಂಬಿತರಾಗಿಲ್ಲ

ಭಾರತ ಈಗ ಬರೀ ಮಿಡಲ್ ಈಸ್ಟ್ ದೇಶಗಳನ್ನು ಮಾತ್ರ ನಂಬಿಕೊಂಡಿಲ್ಲ. ನಾವು ಸುಮಾರು 41ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲ ಖರೀದಿಸುತ್ತಿದ್ದೇವೆ. ಎಲ್‌ಪಿಜಿ ಗ್ಯಾಸ್‌ಗಾಗಿ ಕತಾರ್, ಕುವೈತ್ ಜೊತೆಗೆ ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದಲೂ ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗೆ ವೈವಿಧ್ಯಮಯ ಮೂಲಗಳಿಂದ ತೈಲ ಬರುತ್ತಿರುವುದರಿಂದ ಒಂದು ಕಡೆ ಯುದ್ಧವಾದರೂ ನಮಗೆ ಪರ್ಯಾಯ ದಾರಿಗಳಿರುತ್ತವೆ.

5. ಸರ್ಕಾರದ ಚಾಣಾಕ್ಷ ಕ್ರಮಗಳು

ಸರ್ಕಾರವು ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಮೊದಲೇ ಜಾಗೃತವಾಗಿದೆ. ಕಮರ್ಷಿಯಲ್ ಸಿಲಿಂಡರ್ ಮೇಲೆ ಆರಂಭದಲ್ಲಿ ಹಾಕಿದ್ದ ಮಿತಿಯನ್ನು ಈಗ ಶೇ. 70 ರಷ್ಟು ಸಡಿಲಗೊಳಿಸಲಾಗಿದೆ. ಕಳ್ಳಸಂತೆಯನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಲ್ಲದೆ, ಪೆಟ್ರೋಲ್-ಡೀಸೆಲ್ ಬದಲಿಗೆ ಪಿಎನ್‌ಜಿ (PNG) ಮತ್ತು ಎಲೆಕ್ಟ್ರಿಕ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಇಂಧನದ ಮೇಲಿನ ಒತ್ತಡ ಕಡಿಮೆಯಾಗಿದೆ.

ಸಂಸತ್ತಿನಲ್ಲಿ ಮೋದಿ ಅವರು ಹೇಳಿದ್ದು "ಒಗ್ಗಟ್ಟಾಗಿ ಸಿದ್ಧರಾಗಿರಿ" ಎಂದೇ ಹೊರತು ಲಾಕ್‌ಡೌನ್ ಮಾಡುತ್ತೇವೆ ಎಂದಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರೂ ಸಹ ಲಾಕ್‌ಡೌನ್ ಸುದ್ದಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹಾಗಾಗಿ ನೀವು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ.

Latest News