Mar 27, 2026 Languages : ಕನ್ನಡ | English

ಚಿನ್ನಸ್ವಾಮಿ ಮೈದಾನಕ್ಕೂ ಮುನ್ನ ವಿಧಾನಸಭೆಯಲ್ಲೇ 'ಟಿಕೆಟ್ ಮ್ಯಾಚ್ - ತೇಜಸ್ವಿ ಸೂರ್ಯ vs ಡಿಕೆಶಿ!!

ಬೆಂಗಳೂರಿನಲ್ಲಿ ಐಪಿಎಲ್ ಕ್ರೇಜ್ ಶುರುವಾಗುವ ಮೊದಲೇ ರಾಜಕೀಯದ "ಪಿಚ್" ಮೇಲೆ ದೊಡ್ಡ ಹೈಡ್ರಾಮಾ ಶುರುವಾಗಿದೆ. ವಿಷಯ ಬೇರೇನೂ ಅಲ್ಲ, ಅದೇ ಐಪಿಎಲ್ ಟಿಕೆಟ್ ವಿವಾದ! ಅಸೆಂಬ್ಲಿಯಲ್ಲಿ ಶಾಸಕರು "ನಮಗೆ ವಿಐಪಿ ಟಿಕೆಟ್ ಬೇಕು" ಅಂತ ಪಟ್ಟು ಹಿಡಿದರೆ, ಇತ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ "ಅವರು ಕೇಳುವುದರಲ್ಲಿ ತಪ್ಪೇನಿದೆ?" ಎಂದು ಶಾಸಕರ ಪರವಾಗಿ ನಿಂತಿದ್ದಾರೆ.

RCB ಮ್ಯಾಚ್ ಟಿಕೆಟ್‌ಗೆ ಅಸೆಂಬ್ಲಿಯಲ್ಲೇ ಗಲಾಟೆ
RCB ಮ್ಯಾಚ್ ಟಿಕೆಟ್‌ಗೆ ಅಸೆಂಬ್ಲಿಯಲ್ಲೇ ಗಲಾಟೆ

ಅಸಲಿಗೆ ಶಾಸಕರ ಬೇಡಿಕೆ

ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಮ್ಯಾಚ್ ನಡೀತಿದೆ. ಈ ಪಂದ್ಯ ನೋಡಲು ನಮಗೂ ಅವಕಾಶ ಸಿಗಬೇಕು ಎನ್ನುವುದು ಶಾಸಕರ ವಾದ.

ಪ್ರತಿಯೊಬ್ಬ ಶಾಸಕರಿಗೆ ಕನಿಷ್ಠ 4 ವಿಐಪಿ ಟಿಕೆಟ್ ಕೊಡಬೇಕು.

ಸ್ಟೇಡಿಯಂನಲ್ಲಿ ನಮಗೆ ಅಂತಾನೇ ಪ್ರತ್ಯೇಕ ಆಸನ ಮತ್ತು ಲೌಂಜ್ ವ್ಯವಸ್ಥೆ ಇರಬೇಕು.

"ನಮಗೆ ಸರಿಯಾದ ಗೌರವ ಸಿಗುತ್ತಿಲ್ಲ" ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಗದ್ದಲ ನೋಡಿ ಸ್ಪೀಕರ್ ಯು.ಟಿ. ಖಾದರ್ ಅವರು ಕೂಡ, "ಸರ್ಕಾರ ಈ ಬಗ್ಗೆ ಏನಾದರೂ ಕ್ರಮ ತಗೊಳ್ಳಿ" ಎಂದು ಸೂಚನೆ ಕೊಟ್ಟಿದ್ದಾರೆ.

ಡಿಕೆಶಿ ಕೊಟ್ಟ ಭರವಸೆ

ಈ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ನೋಡಿ, ಶಾಸಕರು ಕೂಡ ಸರ್ಕಾರದ ಒಂದು ಭಾಗ. ಅವರಿಗೂ ಟಿಕೆಟ್ ಕೇಳುವ ಹಕ್ಕಿದೆ. ನಾವು ಅವರಿಗೆ ಮ್ಯಾಚ್ ನೋಡುವ ಅವಕಾಶ ಮಾಡಿಕೊಡ್ತೀವಿ ಅಂತ ಭರವಸೆ ಕೊಟ್ಟಿದ್ದೇವೆ. ವೈಯಕ್ತಿಕವಾಗಿ ನಾನು ಕೆಎಸ್‌ಸಿಎ (KSCA) ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರ ಜೊತೆ ಇಂದೇ ಮಾತನಾಡುತ್ತೇನೆ. ಶಾಸಕರಿಗೆ ಟಿಕೆಟ್ ಕೊಡಲು ಒಂದು ಪ್ಲಾನ್ ಮಾಡ್ತೀವಿ" ಎಂದು ಸಮಾಧಾನ ಪಡಿಸಿದ್ದಾರೆ.

ತೇಜಸ್ವಿ ಸೂರ್ಯ ವರ್ಸಸ್ ಡಿಕೆಶಿ ವಾಗ್ವಾದ

ಈ "ಉಚಿತ ಟಿಕೆಟ್" ಬೇಡಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಖತ್ ಆಗಿ ಟೀಕಿಸಿದ್ದಾರೆ.

"ಇದೊಂದು ಫ್ಯೂಡಲ್ ಮನೋಭಾವ. ಜನಸಾಮಾನ್ಯರು ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸುವಾಗ ಶಾಸಕರಿಗೆ ಮಾತ್ರ ಯಾಕೆ ಪುಕ್ಕಟ್ಟೆ ಟಿಕೆಟ್ ಬೇಕು? ಅವರು ಜನರಿಗಿಂತ ಮೇಲಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.

"ವಿಧಾನಸಭೆಯಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಮಾತಾಡೋದು ಬಿಟ್ಟು ಟಿಕೆಟ್‌ಗಾಗಿ ಗಲಾಟೆ ಮಾಡೋದು ಸರಿಯಲ್ಲ" ಎಂದು ಕಿಡಿಕಾರಿದ್ದಾರೆ.

ಇದಕ್ಕೆ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿರುವ ಡಿಕೆಶಿ, "ತೇಜಸ್ವಿ ಸೂರ್ಯ ಅವರು ಮೊದಲು ಅವರ ಪಕ್ಷದ ಶಾಸಕರಿಗೆ ಬುದ್ಧಿ ಹೇಳಲಿ, ನಮಗಲ್ಲ. ಅವರ ಪಕ್ಷದವರೇ ಅಸೆಂಬ್ಲಿಯಲ್ಲಿ ಟಿಕೆಟ್ ಕೇಳುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.

ಒಂದೆಡೆ ಆರ್‌ಸಿಬಿ ಅಭಿಮಾನಿಗಳು ಟಿಕೆಟ್‌ಗಾಗಿ ಸರ್ವರ್‌ ಕ್ರ್ಯಾಶ್ ಆಗಿ ಒದ್ದಾಡುತ್ತಿದ್ದರೆ, ಇನ್ನೊಂದೆಡೆ ಜನಪ್ರತಿನಿಧಿಗಳು ವಿಧಾನಸಭೆಯಲ್ಲೇ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಜನಸಾಮಾನ್ಯರ ಜೊತೆ ಕುಳಿತು ಮ್ಯಾಚ್ ನೋಡಲು ಶಾಸಕರು ಯಾಕೆ ಹಿಂಜರಿಯುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.

ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ಶುರುವಾಗುವ ಮೊದಲೇ ಬೆಂಗಳೂರಿನ ರಾಜಕೀಯ ಅಖಾಡದಲ್ಲಿ ಮಾತ್ರ "ಟಿಕೆಟ್ ಮ್ಯಾಚ್" ಜೋರಾಗಿ ನಡೀತಿದೆ!