May 6, 2026 Languages : ಕನ್ನಡ | English

ಅಹಮದಾಬಾದ್‌ಗೆ ಫೈನಲ್ ಪಂದ್ಯ ಶಿಫ್ಟ್ ಆಗಿದ್ದೇಕೆ? ನಿಖಿಲ್ ಆರೋಪಕ್ಕೆ ಡಿಕೆಶಿ ಕೊಟ್ಟ ಖಡಕ್ ಉತ್ತರ ಇಲ್ಲಿದೆ ನೋಡಿ!!

ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಈ ಬಾರಿ ಐಪಿಎಲ್ ಹಬ್ಬದ ವೇಳೆ ದೊಡ್ಡ ಶಾಕ್ ಎದುರಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯಗಳು ದಿಢೀರ್ ಅಹಮದಾಬಾದ್‌ಗೆ ಶಿಫ್ಟ್ ಆಗಿರುವುದು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ 'ಟಿಕೆಟ್ ವಾರ್' ಶುರುವಾಗಿದೆ.

ನಿಖಿಲ್ ಕುಮಾರಸ್ವಾಮಿ vs ಡಿ.ಕೆ. ಶಿವಕುಮಾರ್ ನಡುವೆ ಶುರುವಾಯ್ತು 'ಟಿಕೆಟ್ ವಾರ್' | Photo Credit: https://x.com/Nikhil_Kumar_k
ನಿಖಿಲ್ ಕುಮಾರಸ್ವಾಮಿ vs ಡಿ.ಕೆ. ಶಿವಕುಮಾರ್ ನಡುವೆ ಶುರುವಾಯ್ತು 'ಟಿಕೆಟ್ ವಾರ್' | Photo Credit: https://x.com/Nikhil_Kumar_k

ಶಾಸಕರ ಟಿಕೆಟ್ ಹಪಾಹಪಿಗೆ ಬೆಂಗಳೂರು ಬಲಿ: ನಿಖಿಲ್ ಕಿಡಿ

ಐಪಿಎಲ್ ಫೈನಲ್ ಪಂದ್ಯ ಕೈತಪ್ಪಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವೀರೋಚಿತವಾಗಿ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, ಟ್ವಿಟ್ಟರ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. "ನಮ್ಮ ರಾಜ್ಯದ ನಾಯಕರಿಗೆ ಅಭಿನಂದನೆಗಳು! ಕೇವಲ ವಿವಿಐಪಿ ಪಾಸ್‌ಗಳ ಹಪಾಹಪಿಯಿಂದಾಗಿ ನಮ್ಮೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಉಡುಗೊರೆಯಾಗಿ ನೀಡಿದ್ದೀರಿ" ಎಂದು ವ್ಯಂಗ್ಯವಾಡಿದ್ದಾರೆ.

ಅಭಿಮಾನಿಗಳ ಹಿತ ಮರೆತು ಶಾಸಕರು ಉಚಿತ ಟಿಕೆಟ್‌ಗಳಿಗಾಗಿ ಬಿಸಿಸಿಐ ಮೇಲೆ ಒತ್ತಡ ಹೇರಿದ್ದೇ ಈ ಎಡವಟ್ಟಿಗೆ ಕಾರಣ ಎಂದು ನಿಖಿಲ್ ಆರೋಪಿಸಿದ್ದಾರೆ. "ಕ್ರೀಡಾಂಗಣ ಇರುವುದು ಕ್ರಿಕೆಟ್ ಪ್ರೇಮಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ಕೆಲವು ಶಾಸಕರು ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ತಮ್ಮ ವೈಯಕ್ತಿಕ ಟಿಕೆಟ್ ಕೌಂಟರ್ ಮಾಡಿಕೊಂಡಿದ್ದರಿಂದಲೇ ಇಂದು ಬೆಂಗಳೂರಿನ ಘನತೆ ರಾಷ್ಟ್ರಮಟ್ಟದಲ್ಲಿ ಕುಸಿದಿದೆ" ಎಂದು ಅವರು ಗುಡುಗಿದ್ದಾರೆ.

ಡಿಕೆಶಿ ತಿರುಗೇಟು: "ಟಿಕೆಟ್‌ಗೂ ಪಂದ್ಯ ಶಿಫ್ಟ್‌ಗೂ ಸಂಬಂಧವಿಲ್ಲ"

ನಿಖಿಲ್ ಕುಮಾರಸ್ವಾಮಿ ಅವರ ಈ ಆರೋಪಕ್ಕೆ ಮೈಸೂರಿನಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಇದೆಲ್ಲಾ ಬರೀ ಸುಳ್ಳು ಎಂದು ತಳ್ಳಿಹಾಕಿದ್ದಾರೆ. "ಟಿಕೆಟ್ ವಿಚಾರಕ್ಕೂ ಪಂದ್ಯ ಸ್ಥಳಾಂತರವಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಬೇರೆ ಕಡೆಗಳಲ್ಲೂ ಶೇ. 50 ರಷ್ಟು ಸೀಟುಗಳನ್ನು ಕೊಡುತ್ತಾರೆ, ಅದರಲ್ಲಿ ಹೊಸದೇನಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಅಹಮದಾಬಾದ್‌ಗೆ ಪಂದ್ಯ ಹೋದ ಬಗ್ಗೆ ಮಾತನಾಡಿದ ಅವರು, "ಅಲ್ಲಿನ ಸ್ಟೇಡಿಯಂ ದೊಡ್ಡದಿದೆ, ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಬಹುದು ಎಂಬ ಕಾರಣಕ್ಕೆ ಅಲ್ಲಿಗೆ ಶಿಫ್ಟ್ ಮಾಡಿರಬಹುದು. ಯಾರೋ ಇನ್‌ಫ್ಲುಯೆನ್ಸ್ ಮಾಡಿ ದೊಡ್ಡ ಸ್ಟೇಡಿಯಂ ಬೇಕು ಎಂದು ಮಾಡಿರಬಹುದು ಅಷ್ಟೇ. ಟಿಕೆಟ್ ಕಾರಣಕ್ಕೆ ಪಂದ್ಯ ಶಿಫ್ಟ್ ಆಗಿದೆ ಎಂದು ಯಾರು ಹೇಳಿದರು? ಮೊದಲು ಬಿಸಿಸಿಐ ಈ ಬಗ್ಗೆ ಅಧಿಕೃತವಾಗಿ ಹೇಳಲಿ, ಆಮೇಲೆ ನಾನು ಅವರಿಗೆ ಸರಿಯಾದ ಉತ್ತರ ಕೊಡುತ್ತೇನೆ" ಎಂದು ತಿರುಗೇಟು ನೀಡಿದ್ದಾರೆ.

ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ

ರಾಜಕಾರಣಿಗಳ ನಡುವೆ ಈ ಆರೋಪ-ಪ್ರತ್ಯಾರೋಪಗಳು ಏನೇ ಇದ್ದರೂ, ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಮಾತ್ರ ಅತೀವ ನಿರಾಸೆಗೊಂಡಿದ್ದಾರೆ. ಫೈನಲ್ ಪಂದ್ಯವನ್ನು ನಮ್ಮೂರಿನಲ್ಲಿ ನೋಡಬಹುದು ಎಂಬ ಆಸೆಗೆ ಈಗ ತಣ್ಣೀರು ಸುರಿದಂತಾಗಿದೆ. ಕೇವಲ ದೊಡ್ಡ ಸ್ಟೇಡಿಯಂ ಎಂಬ ಕಾರಣಕ್ಕೆ ಪಂದ್ಯ ಹೋಯಿತೇ ಅಥವಾ ನಿಜವಾಗಿಯೂ 'ಟಿಕೆಟ್ ರಾಜಕೀಯ' ಕೆಲಸ ಮಾಡಿತೇ ಎಂಬ ಪ್ರಶ್ನೆ ಈಗ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ.

Latest News